Site icon Vistara News

Ram Mandir: ಇದು ರಾಮಮಂದಿರ ಅಷ್ಟೇ ಅಲ್ಲ, ರಾಷ್ಟ್ರಮಂದಿರ: ಪ್ರಾಣ ಪ್ರತಿಷ್ಠೆ ಬಳಿಕ ಮೋದಿ ಭಾವುಕ ನುಡಿ

Aisa Mauka Phir Kahan Milega... Narendra Modi says to Kharge

ಅಯೋಧ್ಯೆ: “ನೂರಾರು ವರ್ಷಗಳ ತ್ಯಾಗ, ಬಲಿದಾನದ ಪ್ರತೀಕವಾಗಿ ರಾಮಮಂದಿರ ನಮ್ಮ ಕಣ್ಣೆದುರು ನಿಂತಿದೆ. ಇದು ಕೇವಲ ರಾಮಮಂದಿರವಲ್ಲ, ರಾಷ್ಟ್ರಮಂದಿರ” ಎಂದು ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿ ಹೇಳಿದರು. ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮ ಮಂದಿರದಲ್ಲಿ ರಾಮಲಲ್ಲಾನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

ಶ್ರೀ ರಾಮಚಂದ್ರ ಕೀ ಜೈ ಎಂದು ಭಾಷಣ ಆರಂಭಿಸಿದ ಅವರು ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. ರಾಮನ ಎಲ್ಲ ಭಕ್ತರಿಗೆ ಪ್ರಣಾಮಗಳು. ಇಂದು ನಮ್ಮ ರಾಮ ಬಂದಿದ್ದಾನೆ. ಎಲ್ಲರ ಧೈರ್ಯ, ಬಲಿದಾನ, ತ್ಯಾಗ, ತಪಸ್ಸಿನ ಬಳಿಕ ನಮ್ಮ ಶ್ರೀರಾಮ ಬಂದಿದ್ದಾನೆ ಎಂದು ಹೇಳಿದರು.

“ಇಂತಹ ಶುಭ ಘಳಿಗೆಯಲ್ಲಿ ದೇಶದ ಸಮಸ್ತ ಜನರಿಗೆ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ಈಗಷ್ಟೇ ನಾನು ಪ್ರಾಣಪ್ರತಿಷ್ಠೆ ಬಳಿಕ ನಿಮ್ಮ ಎದುರು ಬಂದು ನಿಂತಿದ್ದೇನೆ. ನಿಮ್ಮ ಜತೆ ನಾನು ಅಸಂಖ್ಯ ವಿಚಾರಗಳನ್ನು ಹೇಳಬೇಕು. ಆದರೆ, ನಾನು ಪದಗಳೇ ಇಲ್ಲದಂತಾಗಿದ್ದೇನೆ. ಈಗಲೂ ನನ್ನ ದೇಹ, ಮನಸ್ಸು ರಾಮನೊಂದಿಗೆ ವಿಲೀನವಾಗಿದೆ. ಈಗ ನಮ್ಮ ರಾಮಲಲ್ಲಾ ಟೆಂಟ್‌ನಲ್ಲಿ ಇರುವುದಿಲ್ಲ. ಇಂತಹ ಭವ್ಯ ರಾಮಮಂದಿರದಲ್ಲಿ ರಾಮನು ವಿರಾಜಮಾನನಾಗಿದ್ದಾನೆ” ಎಂದು ಹೇಳಿದರು.

“ವಿಶ್ವದ ಮೂಲೆಮೂಲೆಯಲ್ಲಿರುವ ಪ್ರತಿಯೊಬ್ಬ ರಾಮ ಭಕ್ತರಿಗೆ ಖುಷಿಯಾಗಿದೆ. ಈ ಕ್ಷಣವು ಪವಿತ್ರವಾಗಿದೆ. ಎಲ್ಲ ಸಂತಸ, ಸಂಭ್ರಮದ ಹಿಂದೆ ಪ್ರಭು ಶ್ರೀರಾಮನ ಆಶೀರ್ವಾದ ಇದೆ. 2024ರ ಜನವರಿ 22 ಕೇವಲ ಒಂದು ದಿನಾಂಕವಲ್ಲ. ಇದು ಹೊಸ ಮನ್ವಂತರಕ್ಕೆ ಸಾಕ್ಷಿಯಾಗಲಿದೆ. ಕ್ಯಾಲೆಂಡರ್‌ನಲ್ಲಿ ಈ ದಿನಾಂಕ ಚಿರಸ್ಥಾಯಿಯಾಗಲಿದೆ. ದೇಶದಲ್ಲಿ ಹೊಸ ವಿಶ್ವಾಸದ ಬುಗ್ಗೆ ಇದೆ. ಇಂತಹ ವಿಶ್ವಾಸದ ಸಾಕ್ಷಿಯಾಗಿ ರಾಮಮಂದಿರ ನಮ್ಮ ಕಣ್ಣಮುಂದಿದೆ” ಎಂದು ತಿಳಿಸಿದರು.

“ಒಂದು ಸಾವಿರ ವರ್ಷವಾದರೂ ರಾಮಮಂದಿರ ಉದ್ಘಾಟನೆಯಾದ ದಿನಾಂಕವನ್ನು ಯಾರೂ ಮರೆಯುವುದಿಲ್ಲ. ಇದು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಾಗಿದೆ. ರಾಮಮಂದಿರ ಲೋಕಾರ್ಪಣೆಯ ಕ್ಷಣವು ನನ್ನಲ್ಲಿ ವಿನೀತ ಭಾವನೆ ಮೂಡುವಂತೆ ಮಾಡಿದೆ” ಎಂದರು.

ಶ್ರೀರಾಮನಿಗೆ ಕ್ಷಮೆ ಕೇಳಿದ ಮೋದಿ

ಭಾಷಣದ ವೇಳೆ, “ನಾನು ಭಗವಾನ್‌ ಶ್ರೀರಾಮನ ಕ್ಷಮೆ ಕೇಳುತ್ತೇನೆ” ಎಂದು ಹೇಳಿದರು. “ನಾವೆಲ್ಲರೂ ಒಗ್ಗೂಡಿ ಇದ್ದರೂ, ರಾಮನ ಜಪವನ್ನೇ ಮಾಡಿದರೂ, ರಾಮಮಂದಿರವನ್ನು ನಿರ್ಮಾಣ ಮಾಡಲು 500 ವರ್ಷಗಳು ಬೇಕಾದವು. ಇಷ್ಟು ವರ್ಷ ನಾವು ಕಾಯಿಸಿದ್ದಕ್ಕಾಗಿ ನಾನು ಪ್ರಭು ಶ್ರೀರಾಮನ ಕ್ಷಮೆ ಕೇಳುತ್ತೇನೆ” ಎಂದು ಹೇಳಿದರು. “ನಾವು ಕಾನೂನಿನ ಹೋರಾಟದ ಮೂಲಕ ರಾಮಮಂದಿರವನ್ನು ಕಟ್ಟಿದ್ದೇವೆ. ದೇಶದ ನ್ಯಾಯಾಂಗ ವ್ಯವಸ್ಥೆಯು ನ್ಯಾಯವನ್ನು ಎತ್ತಿಹಿಡಿಯಿತು. ಇದರಿಂದ ಮಂದಿರ ಕನಸು ನನಸಾಯಿತು. ಹಾಗಾಗಿ, ಇಂದು ಇಡೀ ದೇಶವೇ ದೀಪಾವಳಿ ಆಚರಿಸುತ್ತಿದೆ. ಇಂದು ರಾತ್ರಿ ದೇಶದ ಜನ ಮನೆಯಲ್ಲಿ ರಾಮಜ್ಯೋತಿ ಬೆಳಗಿಸಲಿದ್ದಾರೆ” ಎಂದರು.

ಇದನ್ನೂ ಓದಿ: Ram Mandir: ರಾಮಲಲ್ಲಾಗೆ ಮೋದಿ ಪ್ರಾಣಪ್ರತಿಷ್ಠೆ ಮಾಡಿದ್ದು ಹೇಗೆ? ಇಲ್ಲಿವೆ ಫೋಟೊಗಳು

“ದೇಶದ ಮೂಲೆ ಮೂಲೆಯಲ್ಲಿ ಇಂದು ರಾಮನ ಜಪ ಇದೆ. ಪರಂಪರೆಯಿಂದ ಸಂಸ್ಕೃತಿಯವರೆಗೆ ರಾಮನ ಅಸ್ತಿತ್ವ ಇದೆ. ಪ್ರತಿಯೊಂದು ಯುಗಗಳಲ್ಲೂ ರಾಮನ ಛಾಪು ಅಚ್ಚಳಿಯದೆ ಮೂಡಿದೆ. ಪ್ರಾಚೀನ ಕಾಲದಿಂದಲೂ ದೇಶದ ಮೂಲೆಯಲ್ಲೂ ರಾಮರಸವನ್ನು ಸೇವಿಸಿದ್ದಾರೆ. ರಾಮನ ಆದರ್ಶ, ರಾಮನ ಮೌಲ್ಯಗಳು ಎಲ್ಲ ಕಡೆಯೂ ಏಕತೆಯ ಉದ್ದೇಶವನ್ನು ಹೊಂದಿವೆ. ಈಗಲೂ ದೇಶವು ರಾಮನನ್ನು ಜಪಿಸುತ್ತಿದೆ. ಅಸಂಖ್ಯಾತ ಭಕ್ತರು, ಕರ ಸೇವಕರು ಸೇರಿ ಅಗಣಿತ ಮಹನೀಯರು ರಾಮಮಂದಿರವನ್ನು ನಿರ್ಮಿಸಲು ಕಾರಣರಾಗಿದ್ದಾರೆ. ಆದರೆ, ಈಗ ರಾಮಮಂದಿರವು ವಿಜಯದ ಸಂಕೇತವಲ್ಲ, ವಿನಯದ ಸಂಕೇತವಾಗಿದೆ. ರಾಮನ ಆದರ್ಶಗಳನ್ನು ಪಾಲಿಸಿಕೊಂಡು ನಾವು ಉತ್ತಮ ದೇಶವನ್ನು ನಿರ್ಮಿಸೋಣ” ಎಂದರು.

ಪ್ರತಿಪಕ್ಷಗಳಿಗೆ ಮೋದಿ ಟಾಂಗ್‌

“ರಾಮಮಂದಿರ ನಿರ್ಮಾಣವಾದರೆ ಬೆಂಕಿ ಹೊತ್ತಿ ಉರಿಯುತ್ತದೆ. ದೇಶದಲ್ಲಿ ದಂಗೆ ಏಳುತ್ತದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದರು. ಆದರೆ, ರಾಮಮಂದಿರವು ಮುಂದಿನ ದಿನಗಳಲ್ಲಿ ಬೆಂಕಿಯ ಬದಲು ಸಮಾನತೆಯ ದೀಪವಾಗಲಿದೆ. ಸಮಾಜದ ಎಲ್ಲ ವರ್ಗಗಳ ಜನರ ಉಜ್ವಲ ಭವಿಷ್ಯಕ್ಕೆ ರಾಮಮಂದಿರ ದ್ಯೋತಕವಾಗಲಿದೆ. ರಾಮನು ಬೆಂಕಿ ಅಲ್ಲ, ರಾಮನು ಶಕ್ತಿಯಾಗಿದ್ದಾನೆ” ಎಂದು ಮೋದಿ ಅವರು ಪ್ರತಿಪಕ್ಷಗಳಿಗೆ ಟಾಂಗ್‌ ನೀಡಿದರು.

ಇದನ್ನೂ ಓದಿ: Ayodhya Ram Mandir: “ಮಂದಿರವಲ್ಲೇ ಕಟ್ಟಿದೆವುʼ ಎಂದು ಹೆಮ್ಮೆಯಿಂದ ಹೇಳಿದ ಯೋಗಿ ಆದಿತ್ಯನಾಥ್

ರಾಮನು ವರ್ತಮಾನ ಅಲ್ಲ, ರಾಮ ಅನಂತನಾಗಿದ್ದಾನೆ. ರಾಮನು ಶಾಂತಿ, ಏಕತೆಯ ಸಂಕೇತವಾಗಿದ್ದಾನೆ. ಇಂದು ಜಗತ್ತೇ ರಾಮನ ಜಪ ಮಾಡುತ್ತದೆ. ರಾಮಲಲ್ಲಾನ ಪ್ರತಿಷ್ಠಾಪನೆಯು ವಸುದೈವ ಕುಟುಂಬಂನ ಪ್ರತಿಷ್ಠಾಪನೆಯೂ ಆಗಿದೆ. ರಾಮಮಂದಿರವು ಭಾರತದ ಸಂಸ್ಕೃತಿ, ಪರಂಪರೆಯ ಸಾಕಾರ ಮೂರ್ತಿಯಾಗಿದೆ. ಆದರ್ಶ, ಮಾನವೀಯ ಮೌಲ್ಯಗಳ ಪ್ರಾಣ ಪ್ರತಿಷ್ಠೆಯೂ ಆಗಿದೆ ಎಂದು ಬಣ್ಣಿಸಿದರು.

“ರಾಮನು ಭಾರತದ ಸಂಸ್ಕೃತಿಯ ಆಧಾರವಾಗಿದ್ದಾನೆ. ಇದು ದೇವಮಂದಿರವಾಗದೆ, ರಾಷ್ಟ್ರದ ಮಂದಿರವಾಗಿದೆ. ರಾಮನು ಭಾರತದ ಆಧಾರವಾಗಿದ್ದಾನೆ. ರಾಮನು ಭಾರತದ ವಿಚಾರವಾಗಿದ್ದಾನೆ. ರಾಮನು ಭಾರತದ ಪ್ರತಾಪ, ಪ್ರಭಾವ ಆಗಿದ್ದಾನೆ. ರಾಮನು ನಾಯಕನೂ ಆಗಿದ್ದಾನೆ, ರಾಮನು ನೀತಿಯೂ ಆಗಿದ್ದಾನೆ. ರಾಮನು ವ್ಯಾಪಕವಾಗಿದ್ದಾನೆ, ವಿಶ್ವಾತ್ಮವಾಗಿದ್ದಾನೆ. ರಾಮನು ನಿತ್ಯವೂ ಆಗಿದ್ದಾನೆ, ನಿರಂತರವೂ ಆಗಿದ್ದಾನೆ. ಹಾಗಾಗಿ, ರಾಮನು ಸಾವಿರ ವರ್ಷವಾದರೂ ರಾಮನ ಜಪವು ಅನಂತ” ಎಂದು ಹೇಳಿದರು.

ರಾಮಮಂದಿರ ಆಯ್ತು, ಮುಂದೇನು?

“ರಾಮಮಂದಿರ ನಿರ್ಮಾಣವಾಯಿತು, ನಮ್ಮ ಎಲ್ಲರ ಕನಸು ನನಸಾಯಿತು. ಆದರೆ, ಮುಂದೇನು? ಕಾಲ ಚಕ್ರ ಬದಲಾಗುತ್ತಿದೆ. ನಮ್ಮ ಮುಂದಿನ ಪೀಳಿಗೆಗಳು ಅದೃಷ್ಟ ಮಾಡಿವೆ. ಇದೇ ಸಮಯ ಸರಿಯಾಗಿದೆ. ನಾವು ಇಂದಿನಿಂದ, ಇಂತಹ ಪವಿತ್ರ ಸಮಯದಿಂದಲೂ, ನಾವು ಮುಂದಿನ ಸಾವಿರ ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಮುಂದಡಿ ಇಡೋಣ. ನಾವೆಲ್ಲರೂ ಕೂಡಿ ಸಮರ್ಥ, ಸಕ್ಷಮ, ಭವ್ಯ, ದಿವ್ಯ ಭಾರತವನ್ನು ನಿರ್ಮಿಸುವ ಪಣ ತೊಡೋಣ. ರಾಮನ ವಿಚಾರಗಳನ್ನು ಅಳವಡಿಸಿಕೊಂಡು ಸಮೃದ್ಧ ಭಾರತವನ್ನು ನಿರ್ಮಿಸೋಣ” ಎಂದು ನರೇಂದ್ರ ಮೋದಿ ಕರೆ ನೀಡಿದರು.

“ನಾವೆಲ್ಲರೂ ಸಣ್ಣವರು ಎಂದು ಭಾವಿಸದೆ ಸಮರ್ಥರು ಎಂದು ಭಾವಿಸಿಕೊಂಡು ಶ್ರಮ ವಹಿಸೋಣ. ನಾವು ಇಂದು ಸಂಕಲ್ಪ ಮಾಡೋಣ. ರಾಷ್ಟ್ರದ ನಿರ್ಮಾಣಕ್ಕಾಗಿ ನಾವು ಸಮಯದ ಪ್ರತಿಯೊಂದು ಕ್ಷಣಗಳನ್ನು, ದೇಹವನ್ನು ದೇಶಕ್ಕಾಗಿ ಶ್ರಮಿಸಲು ಮೀಸಲಿಡೋಣ. ನಾವು ರಾಮನನ್ನು ಪೂಜಿಸೋಣ. ನಮ್ಮ ಜತೆಗೆ ದೇಶದ ಏಳಿಗೆಯನ್ನು ಪ್ರಾರ್ಥಿಸೋಣ. ಭಾರತವನ್ನು ವೈಭವಶಾಲಿ, ವಿಕಸಿತಗೊಳಿಸಲು ಇಂದಿನಿಂದ ಪ್ರತಿದಿನ ರಾಮನನ್ನು ಪೂಜಿಸೋಣ. ಭಾರತ ಇಂದು ಸಕಲ ರೀತಿಯಲ್ಲಿ ಸಮರ್ಥವಾಗಿದೆ. ದೇಶಾದ್ಯಂತ ಸಕಾರಾತ್ಮಕ ಮನೋಭಾವ ಒಡಮೂಡಿದೆ. ಹಾಗಾಗಿ, ನಾವು ಸುಮ್ಮನೆ ಕೂರದಿರೋಣ. ದೇಶದ ಯುವಕರೇ, ನಿಮ್ಮ ಎದುರು ಸಾವಿರ ವರ್ಷದ ಇತಿಹಾಸವಿದೆ. ನಾವಿಂದು 15 ಸಾವಿರ ಕಿಲೋಮೀಟರ್‌ ಕ್ಷಮಿಸಿ ಸೂರ್ಯನ ಸಮೀಪ ಹೋಗಿದ್ದೇವೆ. ಸಾಗರದಲ್ಲೂ ಸಾಧನೆ ಮಾಡಿದ್ದೇವೆ. ಹಾಗಾಗಿ, ಇತಿಹಾಸ ಹಾಗೂ ಆಧುನಿಕತೆಯನ್ನು ಬಳಸಿಕೊಂಡು ದೇಶವನ್ನು ಸಮೃದ್ಧಿಗೊಳಿಸಿ” ಎಂದು ಹೇಳಿದರು.

“ನಮ್ಮ ಮುಂದಿನ ದಿನಗಳು ಉಜ್ವಲ ಭವಿಷ್ಯಕ್ಕೆ ರಾಮಮಂದಿರವು ಸಾಕ್ಷಿಯಾಗಲಿ. ಹಠ, ಶ್ರಮ, ಪ್ರಾಮಾಣಿಕತೆ, ಲಕ್ಷ್ಯ, ಸಂಘಟನೆ, ಜಿದ್ದಿನಿಂದ ನಾವು ಭಾರತವನ್ನು ಕಟ್ಟೋಣ. ನಮ್ಮ ಮುಂದಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ನಾವು ಏಳಿಗೆ ಹೊಂದೋಣ. ಮುಂದಿನ ದಿನಗಳು ನಮ್ಮವೇ ಎಂದು ಭಾವಿಸಿಕೊಂಡು ಮುಂದಡಿ ಇಡೋಣ, ವಿಕಸಿತ ಭಾರತ ನಿರ್ಮಿಸೋಣ” ಎಂದು ಕರೆ ನೀಡಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version