Site icon Vistara News

Ram Mandir : ರಾಮ ಮಂದಿರ ಉದ್ಘಾಟನೆ ದಿನ ನೆರೆಯ ಮಹಾರಾಷ್ಟ್ರದಲ್ಲಿ ಸರ್ಕಾರಿ ರಜೆ; ಕರ್ನಾಟಕದಲ್ಲಿ?

Ram Mandir 1

ಮುಂಬೈ: ಜನವರಿ 22ರಂದು ಅಯೋಧ್ಯೆಯಯಲ್ಲಿ ನಡೆಯಲಿರುವ ರಾಮ ಮಂದಿರದ ಪ್ರತಿಷ್ಠಾಪನೆಯ ದಿನದಂದು ಮಹಾರಾಷ್ಟ್ರ ಸರ್ಕಾರ ಒಂದು ದಿನದ ಸಾರ್ವಜನಿಕ ರಜೆ ಘೋಷಿಸಿದೆ. ಈ ಸಂಬಂಧ ಶುಕ್ರವಾರ ಆದೇಶ ಹೊರಡಿಸಲಾಗಿದೆ. ಕರ್ನಾಟಕದಲ್ಲೂ ರಜೆ ನೀಡುವಂತೆ ಪ್ರತಿಪಕ್ಷ ಬಿಜೆಪಿ, ನಾನಾ ಸಂಘ ಸಂಸ್ಥೆಗಳು ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಒತ್ತಾಯಿಸುತ್ತಿವೆ. ಆದರೆ ಸರ್ಕಾರದ ನಿರ್ಧಾರ ಏನೆಂಬುದು ಪ್ರಕಟಗೊಂಡಿಲ್ಲ.

ಮಹಾರಾಷ್ಟ್ರ ರಾಜ್ಯ ಸರ್ಕಾರವು ಜನವರಿ 22ರ ದಿನವನ್ನು ‘ಶ್ರೀ ರಾಮ್ ಲಲ್ಲಾ ಪ್ರಾಣ್-ಪ್ರತಿಷ್ಠಾ ದಿನ್’ ಎಂದು ಘೋಷಿಸುತ್ತಿದೆ ಎಂದು ರಾಜ್ಯ ಸಾಮಾನ್ಯ ಆಡಳಿತ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ. ಈ ಆದೇಶವು ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳು ಮತ್ತು ಉದ್ಯಮಗಳಿಗೆ ಅನ್ವಯಿಸುತ್ತದೆ ಎಂದು ಹೇಳಿದೆ.

“ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಗಾಗಿ ಸ್ವಿಟ್ಜರ್ಲೆಂಡ್​ನ ದಾವೋಸ್​ಗೆ ಸಿಎಂ ಏಕನಾಥ್ ಶಿಂಧೆ ಹೋಗಿದ್ದರು. ಈ ವೇಳೆ ಸಿದ್ಧಪಡಿಸಿದ್ದ ಅನುಮೋದನೆಗೆ ಅಂಕಿತ ಬಿದ್ದಿದ್ದು, ಆದೇಶವನ್ನು ಹೊರಡಿಸಲಾಗಿದೆ ಎಂದು ಆಡಳಿತ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜನವರಿ 22 ರಂದು “ದೀಪಾವಳಿ ರೀತಿ ಆಚರಣೆ” ನಡೆಸಲು ಮುಂಬೈ ನಗರದಾದ್ಯಂತ ದೇವಾಲಯಗಳು ಮತ್ತು ಕಟ್ಟಡಗಳ ಮೇಲೆ ಅಲಂಕಾರಿಕ ದೀಪಗಳನ್ನು ಹಾಕುವಂತೆ ಮುಖ್ಯಮಂತ್ರಿ ಈಗಾಗಲೇ ಮುಂಬೈ ನಗರ ಆಯುಕ್ತರ ಐಎಸ್ ಚಾಹಲ್ ಅವರಿಗೆ ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ : Ram Mandir : ಕೋರ್ಟ್​ ಕೇಸ್​ ಗೆದ್ದ ರಾಮ್​ಲಲ್ಲಾ ವಿರಾಜ್​ಮಾನ್​ಗೆ ಅನ್ಯಾಯ; ಶಂಕರಾಚಾರ್ಯ ಹೊಸ ತಕರಾರು​

ಕೇಂದ್ರ ಸರ್ಕಾರದ ರಜೆ

ಕೇಂದ್ರ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ, ರಾಮ ಮಂದಿರ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇಶಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕುಗಳು, ವಿಮಾ ಕಂಪನಿಗಳು, ಹಣಕಾಸು ಸಂಸ್ಥೆಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಸೇರಿದಂತೆ ಎಲ್ಲಾ ಕೇಂದ್ರ ಸರ್ಕಾರಿ ಸಂಸ್ಥೆಗಳು ಜನವರಿ 22ರಂದು ಅರ್ಧ ದಿನ ರಜೆ ಆಚರಿಸಲಿವೆ.

ಜ. 22ರಂದು ರಜೆ ಘೋಷಿಸಿ; ರಾಜ್ಯ ಸರ್ಕಾರಕ್ಕೆ ಬಿ.ವೈ.ವಿಜಯೇಂದ್ರ ಆಗ್ರಹ

ಬೆಂಗಳೂರು: ಅಯೋಧ್ಯೆಯ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ (Ram Mandir) ಕಾರ್ಯವನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲು ಜನವರಿ 22ರಂದು ರಾಜ್ಯದ ಕಾಂಗ್ರೆಸ್ ಸರ್ಕಾರವು ರಜೆ ಘೋಷಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದರು.

ನಗರದ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಎಸ್‍ಟಿ ಮೋರ್ಚಾ ರಾಜ್ಯ ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ಅನೇಕ ರಾಜ್ಯಗಳು 22ರಂದು ರಜೆ ಘೋಷಿಸಿವೆ. ಕೇಂದ್ರ ಸರ್ಕಾರವೂ ಅರ್ಧ ದಿನ ರಜೆ ಘೋಷಿಸಿದೆ. ಹೀಗಾಗಿ ರಾಜ್ಯ ಸರ್ಕಾರವೂ ರಜೆ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ಹಿಂದುಗಳು ಪ್ರಾಣ ಪ್ರತಿಷ್ಠಾಪನೆ ವೀಕ್ಷಿಸಲು ಈ ಮೂಲಕ ಅವಕಾಶ ಮಾಡಿಕೊಡಿ ಎಂದ ಅವರು, ವಾಲ್ಮೀಕಿ ಸಮಾಜ ಮತ್ತು ಬಿಜೆಪಿ ನಡುವೆ ಅವಿನಾಭಾವ ಸಂಬಂಧವಿದೆ. ಬಿಜೆಪಿ ಮತ್ತು ಎಸ್‍ಟಿ ಸಮಾಜದ ನಡುವೆ ಒಂದು ಅವಿನಾಭಾವ ಸಂಬಂಧ ಹಿಂದಿನಿಂದಲೂ ಇದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಎಸ್‍ಟಿ ಸಮುದಾಯಗಳ ಪಾತ್ರ ದೊಡ್ಡ ಮಟ್ಟದಲ್ಲಿತ್ತು ಎಂದು ವಿಶ್ಲೇಷಿಸಿದರು.

Exit mobile version