ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರಕ್ಕೆ (Ram Mandir) ಜನವರಿಯಲ್ಲಿ ಚಾಲನೆ ನೀಡಲಾಗುತ್ತದೆ. ಅದ್ಭುತವಾಗಿ ನಿರ್ಮಿಸಿರುವ ಗರ್ಭಗುಡಿಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಇದಕ್ಕಾಗಿ ರಾಮ ಜನ್ಮಭೂಮಿಯಲ್ಲಿ ಭರದಿಂದ ಸಿದ್ಧತೆ ಕೈಗೊಳ್ಳಲಾಗುತ್ತದೆ. ರಾಮಲಲ್ಲಾನ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇಶದ 5 ಲಕ್ಷ ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತೀರ್ಮಾನಿಸಿದೆ. ಅಲ್ಲದೆ, ಎಲ್ಲ ಕಾರ್ಯಕ್ರಮಗಳ ಉಸ್ತುವಾರಿಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ವಹಿಸಿದೆ.
ದೇಶಾದ್ಯಂತ 5 ಲಕ್ಷ ದೇವಾಲಯಗಳಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ವೇಳೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆರ್‌ಎಸ್‌ಎಸ್ ಕಚೇರಿಗಳ ಪದಾಧಿಕಾರಿಗಳು ಈ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಟ್ರಸ್ಟ್ ತಿಳಿಸಿದೆ. “ರಾಮಮಂದಿರಕ್ಕೆ ಚಾಲನೆ ನೀಡುವ ದಿನ ಇಡೀ ದೇಶವೇ ರಾಮಮಯವಾಗಲಿದೆ. ದೇಶದ ಪ್ರತಿಯೊಂದು ದೇವಾಲಯಗಳಲ್ಲೂ ಸನಾತನ ಧರ್ಮದ ಅನುಯಾಯಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು” ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಕರೆ ನೀಡಿದ್ದಾರೆ.
“ದೇಶದ 5 ಲಕ್ಷ ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸ್ಥಳೀಯ ತಂಡಗಳು ಕೂಡ ನೆರವಾಗಲಿವೆ. ಇದಕ್ಕಾಗಿ ತಂಡಗಳನ್ನು ರಚಿಸಲಾಗುತ್ತದೆ. ಅದ್ಭುತ ಹಾಗೂ ಅದ್ಧೂರಿ ಕಾರ್ಯಕ್ರಮದ ಆಯೋಜನೆಗೆ ಟ್ರಸ್ಟ್ ಸಕಲ ಸಿದ್ಧತೆ ಕೈಗೊಳ್ಳುತ್ತಿದೆ. ದೇಶದ ಪ್ರತಿಯೊಂದು ಮೂಲೆಯಲ್ಲೂ ರಾಮಲಲ್ಲಾನ ಪ್ರತಿಷ್ಠಾಪನೆ ದಿನ ರಾಮನ ಜಪ ಇರಲಿದೆ. ಅಷ್ಟೊಂದು ವೈಭವಯುತವಾಗಿ ಕಾರ್ಯಕ್ರಮ ನಡೆಯಲಿದೆ” ಎಂದು ಚಂಪತ್ ರಾಯ್ ತಿಳಿಸಿದರು.
ಇದನ್ನೂ ಓದಿ: Ram Mandir: ರಾಮಮಂದಿರ ಗರ್ಭಗುಡಿಯ ಬಾಗಿಲು ಸ್ಟೀಲ್ ಅಲ್ಲ ಬಂಗಾರದ್ದು; ನೆಲಮಹಡಿ ಬಹುತೇಕ ರೆಡಿ
“ದೇಶಾದ್ಯಂತ 2.5 ಲಕ್ಷ ಗ್ರಾಮ ಪಂಚಾಯಿತಿಗಳು ಹಾಗೂ 2.5 ಲಕ್ಷ ನಗರ ಪ್ರದೇಶಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಇನ್ನು ರಾಮಮಂದಿರಕ್ಕೆ ಚಾಲನೆ ನೀಡುವ ಕಾರ್ಯಕ್ರಮದ ನೇರ ಪ್ರಸಾರವು ಎಲ್ಲೆಡೆ ಇರಲಿದೆ” ಎಂದು ವಿವರಿಸಿದ್ದಾರೆ. ಜನವರಿಯಲ್ಲಿಯೇ ರಾಮಮಂದಿರಕ್ಕೆ ಚಾಲನೆ ನೀಡಲಾಗುವುದು ಎಂದು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಗರ್ಭಗುಡಿ ನಿರ್ಮಾಣದ ಕಾರ್ಯ ಬಹುತೇಕ ಪೂರ್ಣಗೊಂಡಿದೆ. 15 ದಿನಕ್ಕೊಮ್ಮೆ ಸಭೆ ನಡೆಸಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಯುತ್ತಿದೆ.