ಅಯೋಧ್ಯೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯನ್ನು ಅಯೋಧ್ಯಾ ರಾಮಮಂದಿರ ಟ್ರಸ್ಟ್ ನ ಕಾರ್ಯದರ್ಶಿ ಚಂಪತ್ ರಾಯ್ ಶ್ಲಾಘಿಸಿದ್ದಾರೆ. ಇಂಥ ಪಾದಯಾತ್ರೆಗಳನ್ನು ನಡೆಸುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ.
ಭಾರತ್ ಜೋಡೋ ಯಾತ್ರೆ ಮಂಗಳವಾರ ಉತ್ತರ ಪ್ರದೇಶವನ್ನು ಪ್ರವೇಶಿಸಿದೆ. ಸಹಚರರೊಂದಿಗೆ ಉತ್ತರ ಪ್ರದೇಶಕ್ಕೆ ಕಾಲಿಟ್ಟ ರಾಹುಲ್ ಗಾಂಧಿಯವರಿಗೆ ಅಯೋಧ್ಯಾ ರಾಮ ಜನ್ಮಭೂಮಿ ದೇಗುಲದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಅವರು ಆಶೀರ್ವಾದಪೂರ್ವಕ ಪತ್ರವನ್ನು ಬರೆದು ತಲುಪಿಸಿದ್ದಾರೆ. ಅದರ ಬೆನ್ನಲ್ಲೇ ಚಂಪತ್ ರಾಯ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
‘ಇಡೀ ದೇಶವನ್ನು ಕಾಲ್ನಡಿಗೆಯಲ್ಲಿ ಸುತ್ತುತ್ತಿರುವ ರಾಹುಲ್ ಗಾಂಧಿ ಅವರನ್ನು ನಾನು ಶ್ಲಾಘಿಸುತ್ತೇನೆ. ನಾನೊಬ್ಬ ಆರ್ ಎಸ್ ಎಸ್ ಕಾರ್ಯಕರ್ತ. ಆರ್ ಎಸ್ ಎಸ್ ಯಾವತ್ತೂ ಭಾರತ್ ಜೋಡೋ ಯಾತ್ರೆಯನ್ನು ವಿರೋಧಿಸಿಲ್ಲ. ರಾಹುಲ್ ಗಾಂಧಿ ನಡೆಸುತ್ತಿರುವ ಪಾದಯಾತ್ರೆಯಲ್ಲಿ ನನಗೆ ತಪ್ಪೇನೂ ಕಾಣುತ್ತಿಲ್ಲ. ಇಷ್ಟು ಕೆಟ್ಟ ಚಳಿ ಮಧ್ಯೆ ರಾಹುಲ್ ಗಾಂಧಿ ಯಾತ್ರೆ ನಡೆಸುತ್ತಿದ್ದಾರೆ. ಅವರಂತೆ ಪ್ರತಿಯೊಬ್ಬರೂ ದೇಶಕ್ಕಾಗಿ ಯಾತ್ರೆ ಮಾಡಬೇಕು ಎಂದು ಹೇಳಿದ್ದಾರೆ.
ಹಾಗೇ, ರಾಮಮಂದಿರ ಟ್ರಸ್ಟ್ ನ ಹಿರಿಯ ಟ್ರಸ್ಟಿ ಗೋವಿಂದ ದೇವ ಗಿರಿ ಅವರೂ ರಾಹುಲ್ ಗಾಂಧಿಯವರನ್ನು ಹರಿಸಿದ್ದಾರೆ. ಈ ದೇಶ ಒಗ್ಗಟ್ಟಾಗಿರಬೇಕು, ಸಾಮರಸ್ಯದಿಂದ ಇರಬೇಕು ಮತ್ತು ಇನ್ನಷ್ಟು ಬಲಶಾಲಿಯಾಗಬೇಕು ಎಂದು ಯಾತ್ರೆ ಮಾಡುತ್ತಿರುವ ರಾಹುಲ್ ಗಾಂಧಿಗೆ ಶ್ರೀರಾಮ ಆಶೀರ್ವಾದಿಸಲಿ ಎಂದಿದ್ದಾರೆ. ಹಾಗೇ, ಭಾರತ್ ಜೋಡೋ ಎಂಬ ಹೆಸರೇ ಚೆನ್ನಾಗಿದೆ. ಭಾರತ ಒಂದಾಗಬೇಕು ಎಂದೂ ಹೇಳಿದ್ದಾರೆ.
ಮುಖ್ಯ ಅರ್ಚಕ ಬರೆದ ಪತ್ರದಲ್ಲಿ ಏನಿದೆ?
ಮಂಗಳವಾರ ಭಾರತ್ ಜೋಡೋ ಯಾತ್ರೆ ಉತ್ತರ ಪ್ರದೇಶಕ್ಕೆ ಕಾಲಿಟ್ಟ ಬೆನ್ನಲ್ಲೇ ಅಯೋಧ್ಯಾ ರಾಮ ದೇಗುಲದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರಿಗೆ ಆಶೀರ್ವಾದ ಪೂರ್ವಕ ಪತ್ರ ಬರೆದಿದ್ದರು. ‘ನೀವು ಸರ್ವಜನ ಹಿತ ಮತ್ತು ಸುಖಕ್ಕಾಗಿ ಒಂದೊಳ್ಳೆ ಕೆಲಸವನ್ನು ಮಾಡುತ್ತಿದ್ದೀರಿ. ನಿಮಗೆ ಶ್ರೀರಾಮ ಒಳ್ಳೆಯದು ಮಾಡಲಿ’ ಎಂದು ರಾಹುಲ್ ಗಾಂಧಿಯವರಿಗೆ ಹಾರೈಸಿದ್ದರು. ‘ಯಾತ್ರೆಗೆ ಶುಭವಾಗಲಿ, ನಿಮ್ಮ ಆರೋಗ್ಯ ಚೆನ್ನಾಗಿರಲಿ’ ಎಂದೂ ಹೇಳಿದ್ದರು.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ದೆಹಲಿಗೆ ಕಾಲಿಟ್ಟಾಗಿನಿಂದಲೂ ರಾಹುಲ್ ಗಾಂಧಿ ಭದ್ರತೆಯಲ್ಲಿ ವೈಫಲ್ಯ; ಅಮಿತ್ ಶಾಗೆ ಕಾಂಗ್ರೆಸ್ ಪತ್ರ