ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರವನ್ನು (Ram Mandir) ಸೋಮವಾರ (ಜನವರಿ 22) ಲೋಕಾರ್ಪಣೆ ಮಾಡಲಾಗಿದೆ. ಮಂಗಳವಾರದಿಂದ (ಜನವರಿ 23) ಭಕ್ತರ ದರ್ಶನಕ್ಕೆ ಅವಕಾಶವನ್ನೂ ಕಲ್ಪಿಸಲಾಗಿದ್ದು, ಸಾವಿರಾರು ಜನ ರಾಮಲಲ್ಲಾನ (Ram Lalla) ದರ್ಶನಕ್ಕೆ ಕಾಯುತ್ತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ನೀಡಿದ ಬಳಿಕ ರಾಮಮಂದಿರದ ಕನಸು ನನಸಾಗಿದೆ. ಆದರೆ, ಅಯೋಧ್ಯೆಯಿಂದ 25 ಕಿಲೋಮೀಟರ್ ದೂರದ ಧನ್ನಿಪುರ ಗ್ರಾಮದಲ್ಲಿ ಮಸೀದಿ ನಿರ್ಮಿಸಲು ಉತ್ತರ ಪ್ರದೇಶ ಸರ್ಕಾರ 5 ಎಕರೆ ಜಾಗ ನೀಡಿದೆ. ಆದರೆ, ಇದುವರೆಗೆ ಮಸೀದಿ ನಿರ್ಮಾಣ ಕಾರ್ಯ ಮಾತ್ರ ಆರಂಭವಾಗಿಲ್ಲ.
ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಿಸುವ ಕುರಿತು 2019ರ ನವೆಂಬರ್ 9ರಂದು ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಮಸೀದಿ ನಿರ್ಮಾಣಕ್ಕಾಗಿ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ಸೆಂಟ್ರಲ್ ವಕ್ಫ್ ಬೋರ್ಡ್‌ಗೆ 5 ಎಕರೆ ಜಾಗ ನೀಡಬೇಕು ಎಂದು ಕೂಡ ಸರ್ಕಾರಕ್ಕೆ ಆದೇಶಿಸಿದೆ. ಅದರಂತೆ, 2020ರ ಸೆಪ್ಟೆಂಬರ್‌ನಲ್ಲಿ 5 ಎಕರೆ ಜಾಗ ನೀಡಲಾಗಿದೆ. 2021ರ ಜನವರಿ 6ರಂದು ಮಸೀದಿ ನಿರ್ಮಾಣಕ್ಕೆ ಶಿಲಾನ್ಯಾಸವನ್ನೂ ನೆರವೇರಿಸಲಾಗಿದೆ. ಆದರೂ, ಇನ್ನು ಕೂಡ ಏಕೆ ಮಸೀದಿ ನಿರ್ಮಾಣ ಆರಂಭವಾಗಿಲ್ಲ? ಇಲ್ಲಿದೆ ಮಾಹಿತಿ.
ಧನ್ನಿಪುರ ಜಾಗ ಈಗ ಹೇಗಿದೆ?
ಮಸೀದಿ ನಿರ್ಮಾಣಕ್ಕಾಗಿ ಉತ್ತರ ಪ್ರದೇಶ ಸರ್ಕಾರವು ಧನ್ನಿಪುರ ಗ್ರಾಮದಲ್ಲಿ 5 ಎಕರೆ ಜಾಗ ನೀಡಿದೆ. ಆದರೆ, ಮಸೀದಿ ನಿರ್ಮಾಣ ಕಾರ್ಯವು ಇದುವರೆಗೆ ಆರಂಭವಾಗಿಲ್ಲ. ಒಂದೇ ಒಂದು ಇಟ್ಟಿಗೆ ಇಟ್ಟಿಲ್ಲ, ಬುನಾದಿ ಅಗೆದಿಲ್ಲ. ಹಾಗಾಗಿ, ಮಸೀದಿ ನಿರ್ಮಿಸಬೇಕಾದ ಜಾಗದಲ್ಲಿ ಹುಲ್ಲು ಬಳೆದಿದೆ. ಇದರಿಂದ ಹಸುಗಳು ಬಂದು ಮೇಯ್ದು ಹೋಗುತ್ತಿವೆ. ಸುತ್ತಮುತ್ತಲಿನ ಹುಡುಗರು, ಯುವಕರು ಕ್ರಿಕೆಟ್ ಆಡಲು ಈ ಜಾಗವನ್ನು ಬಳಸಿಕೊಳ್ಳುತ್ತಿದ್ದಾರೆ.
ಮಸೀದಿ ವಿಳಂಬವಾಗಲು ಕಾರಣಗಳೇನು?
- ಮಸೀದಿ ನಿರ್ಮಾಣ ಹೊತ್ತ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಷನ್ (IICF)ನಲ್ಲಿಯೇ ಆಡಳಿತ ಬಿಕ್ಕಟ್ಟು ಉಂಟಾಗಿರುವುದರಿಂದ ಮಸೀದಿ ನಿರ್ಮಾಣ ವಿಳಂಬವಾಗುತ್ತಿದೆ ಎಂದು ತಿಳಿದುಬಂದಿದೆ.
- ಸುಮಾರು 1,800 ಕೋಟಿ ರೂಪಾಯಿ ವೆಚ್ಚದಲ್ಲಿ ಅದ್ಭುತ ಮಸೀದಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಆದರೆ, ಇಷ್ಟು ಮೊತ್ತದ ದೇಣಿಗೆ ಸಂಗ್ರಹವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
- ಮಸೀದಿ ನಿರ್ಮಿಸಲು ಸರ್ಕಾರ ನೀಡಿರುವ 5 ಎಕರೆ ಜಾಗದಲ್ಲೇ ಮಸೀದಿ ಜತೆಗೆ ಕ್ಯಾನ್ಸರ್ ಆಸ್ಪತ್ರೆ, ಗ್ರಂಥಾಲಯ ನಿರ್ಮಿಸುವ ಉದ್ದೇಶವಿದೆ. ಆದರೆ, ಇದಕ್ಕೆ 5 ಎಕರೆ ಸಾಕಾಗಲ್ಲ ಎನ್ನಲಾಗುತ್ತಿದೆ.
- ಸುಪ್ರೀಂ ಕೋರ್ಟ್ ಆದೇಶದಂತೆ ಉತ್ತರ ಪ್ರದೇಶ ಸರ್ಕಾರ ನೀಡಿರುವ 5 ಎಕರೆ ಜಾಗವನ್ನು ಮುಸ್ಲಿಂ ಅರ್ಜಿದಾರರು ಸ್ವೀಕರಿಸಲು ಒಪ್ಪಿಲ್ಲ. ಇದರಿಂದ ಮುಸ್ಲಿಮರಲ್ಲಿಯೇ ಒಮ್ಮತದ ಅಭಿಪ್ರಾಯವಿಲ್ಲ ಎಂದು ಹೇಳಲಾಗುತ್ತಿದೆ.
ಮೇ ತಿಂಗಳಲ್ಲಿ ನಿರ್ಮಾಣ ಆರಂಭ?
ಮುಸ್ಲಿಂ ಸಮುದಾಯವು ಈ ವರ್ಷದ ಕೊನೆಯಲ್ಲಿ ಅದೇ ನಗರದಲ್ಲಿ ಹೊಸ ಮಸೀದಿ ನಿರ್ಮಾಣವನ್ನು ಪ್ರಾರಂಭಿಸಲು ಯೋಜಿಸುತ್ತಿದೆ. ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಮಸೀದಿ ಯೋಜನೆಯ ಮೇಲ್ವಿಚಾರಣೆ ನಡೆಸುತ್ತಿದ್ದು, ಪವಿತ್ರ ರಂಜಾನ್ ತಿಂಗಳ ನಂತರ ಮೇ ತಿಂಗಳಲ್ಲಿ ನಿರ್ಮಾಣ ಪ್ರಾರಂಭವಾಗಲಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಮಸೀದಿ ಪೂರ್ಣಗೊಳ್ಳಲು ಮೂರರಿಂದ ನಾಲ್ಕು ವರ್ಷಗಳು ಬೇಕಾಗಬಹುದು ಎಂದು ನಿರೀಕ್ಷಿಸಲಾಗಿದೆ.
ರಾಮ ಮಂದಿರದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಸ್ಥಳದಲ್ಲಿ ಮಸೀದಿ ನಿರ್ಮಾಣಕ್ಕೆ ಹಣವನ್ನು ಸಂಗ್ರಹಿಸಲು ಮತ್ತು ಕೆಲಸವನ್ನು ಪ್ರಾರಂಭಿಸಲು ಮುಸ್ಲಿಂ ಗುಂಪುಗಳು ಪ್ರಯತ್ನಿಸುತ್ತಿವೆ. “ನಾವು ಯಾರನ್ನೂ ಸಂಪರ್ಕಿಸಿಲ್ಲ. ಹಣಕ್ಕಾಗಿ ಯಾವುದೇ ಸಾರ್ವಜನಿಕ ಆಂದೋಲನ ನಡೆಸಿಲ್ಲ ” ಎಂದು ಐಐಸಿಎಫ್ ಅಧ್ಯಕ್ಷ ಜುಫರ್ ಅಹ್ಮದ್ ಫಾರೂಕಿ ಹೇಳಿದ್ದಾರೆ.
ಇದನ್ನೂ ಓದಿ: Raja Marga Column : ನಾನೇನೂ ಅಲ್ಲ, ರಾಮ ನೀನೇ ಎಲ್ಲ; ನಿರಹಂಕಾರ ಮೆರೆದ ಮಂದಿರ ಲೋಕಾರ್ಪಣೆ
1800 ಕೋಟಿ ರೂಪಾಯಿ ವೆಚ್ಚದಲ್ಲಿ ರಾಮ ದೇವಾಲಯದ ನಿರ್ಮಾಣವು ಕೆಲವೇ ತಿಂಗಳುಗಳಲ್ಲಿ ಮುಗಿದಿದೆ. ಮೊದಲ ಹಂತವು ಸೋಮವಾರ ತೆರೆಯಲು ಸಿದ್ಧವಾಗಿದೆ. ಆದರೆ ಮುಸ್ಲಿಂ ಗುಂಪುಗಳು ಹಣವನ್ನು ಸಂಗ್ರಹಿಸಲು ಮತ್ತು ಸುಮಾರು 25 ಕಿ.ಮೀ ದೂರದಲ್ಲಿರುವ ಸ್ಥಳದಲ್ಲಿ ಕೆಲಸ ಆರಂಭಿಸಲು ಯೋಜನೆ ರೂಪಿಸುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ