ಅಯೋಧ್ಯೆ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರಕ್ಕೆ (Ram Mandir) ಜನವರಿಯಲ್ಲಿ ಚಾಲನೆ ನೀಡಲು ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಜನವರಿಯಲ್ಲಿ ಗರ್ಭಗುಡಿಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಯಾಗಲಿದ್ದು, ಇದಕ್ಕಾಗಿ ಮಂದಿರ ನಿರ್ಮಾಣ ಕಾಮಗಾರಿಗೆ ಶರವೇಗ ನೀಡಲಾಗಿದೆ. ಅಲ್ಲದೆ, ಮಂದಿರ ನಿರ್ಮಾಣದ ಕಾರ್ಮಿಕರ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ.
ರಾಮಮಂದಿರ ನಿರ್ಮಾಣಕ್ಕೆ ಇದುವರೆಗೆ 550 ಕಾರ್ಮಿಕರು ಶ್ರಮಿಸುತ್ತಿದ್ದರು. ಆದರೀಗ ಕಾರ್ಮಿಕರ ಸಂಖ್ಯೆಯನ್ನು 1,600ಕ್ಕೆ ಏರಿಕೆ ಮಾಡಲಾಗಿದೆ. ಇನ್ನು ದಿನದ 18 ಗಂಟೆ ನಡೆಯಬೇಕಿದ್ದ ಕೆಲಸವನ್ನು 24 ಗಂಟೆಗೂ ವಿಸ್ತರಿಸಲಾಗಿದೆ. ಅಂದರೆ, ಇನ್ನು ಮುಂದೆ ವಾರದ ಏಳು ದಿನ, ದಿನದ 24 ಗಂಟೆಯೂ ರಾಮಮಂದಿರ ನಿರ್ಮಾಣ ಕಾಮಗಾರಿ ನಡೆಯಲಿದೆ. ಆ ಮೂಲಕ ಜನವರಿಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯನ್ನು ನೆರವೇರಿಸುವುದು ಉದ್ದೇಶವಾಗಿದೆ.
“ಡಿಸೆಂಬರ್ ವೇಳೆಗೆ ರಾಮಮಂದಿರದ ನೆಲಮಹಡಿಯನ್ನು ಪೂರ್ಣಗೊಳಿಸುವುದು ನಮ್ಮ ಗುರಿಯಾಗಿದೆ. ಈಗಾಗಲೇ ಮೊದಲ ಮಹಡಿಯ ನಿರ್ಮಾಣ ಕಾರ್ಯವೂ ಆರಂಭವಾಗಿದ್ದು, ಜನವರಿ ವೇಳೆಗೆ ಮುಗಿಯಲಿದೆ. ಎರಡೂ ಮಹಡಿಗಳ ನಿರ್ಮಾಣ ಕಾರ್ಯ ಮುಗಿಸಲು ಕಾರ್ಮಿಕರ ಸಂಖ್ಯೆ ಹಾಗೂ ಕೆಲಸದ ಅವಧಿಯನ್ನು ಹೆಚ್ಚಿಸಲಾಗಿದೆ” ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಾಜೆಕ್ಟ್ ಮ್ಯಾನೇಜರ್ ಜಗದೀಶ್ ಅಫಾಳೆ ತಿಳಿಸಿದ್ದಾರೆ.
ಅದ್ಧೂರಿ ಕಾರ್ಯಕ್ರಮ
ದೇಶಾದ್ಯಂತ 5 ಲಕ್ಷ ದೇವಾಲಯಗಳಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ವೇಳೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆರ್‌ಎಸ್‌ಎಸ್ ಕಚೇರಿಗಳ ಪದಾಧಿಕಾರಿಗಳು ಈ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಟ್ರಸ್ಟ್ ತಿಳಿಸಿದೆ. “ರಾಮಮಂದಿರಕ್ಕೆ ಚಾಲನೆ ನೀಡುವ ದಿನ ಇಡೀ ದೇಶವೇ ರಾಮಮಯವಾಗಲಿದೆ. ದೇಶದ ಪ್ರತಿಯೊಂದು ದೇವಾಲಯಗಳಲ್ಲೂ ಸನಾತನ ಧರ್ಮದ ಅನುಯಾಯಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು” ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಕರೆ ನೀಡಿದ್ದಾರೆ.
ಇದನ್ನೂ ಓದಿ: Ram Mandir: ಜನವರಿಯಲ್ಲಿ ರಾಮಮಂದಿರಕ್ಕೆ ಚಾಲನೆ; ಕಾರ್ಯಕ್ರಮದ ಉಸ್ತುವಾರಿ ಆರೆಸ್ಸೆಸ್ ಹೆಗಲಿಗೆ
ಮೈಸೂರಿನಿಂದ ಎರಡು ಶಿಲೆ ರವಾನೆ
ಶ್ರೀ ರಾಮಮಂದಿರ ಸಂಕೀರ್ಣ ನಿರ್ಮಾಣಕ್ಕಾಗಿ ದೇಶದ ವಿವಿಧ ಭಾಗಗಳಿಂದ ಕಲ್ಲುಗಳನ್ನು ಅಯೋಧ್ಯೆಗೆ ತರಿಸಿ, ಕರಸೇವಕಪುರಂ ಕಾರ್ಯಾಗಾರದಲ್ಲಿ ಸಂಗ್ರಹಿಸಿ ಇಡಲಾಗಿದೆ. ಅದಾದ ಮೇಲೆ ಕೂಡ ನೇಪಾಳ, ಮೈಸೂರಿನಿಂದ ತಲಾ ಎರಡು ಶಿಲೆಗಳನ್ನು ತರಿಸಲಾಗಿದೆ. ಇನ್ನೂ 10 ಕಲ್ಲುಗಳನ್ನು ಇಲ್ಲಿಗೆ ತರುವುದು ಬಾಕಿಯಿದ್ದು, ತಂದಾದ ಮೇಲೆ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಲಾಗುವುದು ಎಂದು ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕೆಲ ತಿಂಗಳ ಹಿಂದೆ ಮಾಹಿತಿ ನೀಡಿದೆ. ಮೈಸೂರಿನಿಂದ ಇನ್ನೂ ಹಲವು ಶಿಲೆಗಳನ್ನು ಅಯೋಧ್ಯೆಗೆ ಕಳುಹಿಸಲಾಗುತ್ತದೆ ಎಂದು ತಿಳಿದುಬಂದಿದೆ.