ನವ ದೆಹಲಿ: ನಾಳೆ (ಜುಲೈ 25) ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಇಂದು ವಿದಾಯದ ಭಾಷಣ ಮಾಡಿದರು. ʼಈ 21ನೇ ಶತಮಾನವನ್ನು ಭಾರತ ಸ್ವಂತದ್ದು ಮಾಡಿಕೊಳ್ಳುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿದೆ. ಅಂದರೆ ಈ ಶತಮಾನವನ್ನು ಗೆದ್ದು, ಮಾದರಿ ರಾಷ್ಟ್ರವಾಗುವ ಮಾರ್ಗದಲ್ಲಿ ದಾಪುಗಾಲು ಇಡುತ್ತಿದೆ ಎಂದು ಹೇಳಿದರು. ರಾಷ್ಟ್ರಪತಿ ಭವನದಿಂದ ದೂರದರ್ಶನದ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ʼಐದು ವರ್ಷಗಳ ಹಿಂದೆ ನನ್ನ ಮೇಲೆ ನಂಬಿಕೆಯಿಟ್ಟು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಲಾಯಿತು. ಅದಕ್ಕಾಗಿ ನಾನು ಎಲ್ಲ ಜನಪ್ರತಿನಿಧಿಗಳು ಮತ್ತು ಇಡೀ ದೇಶದ ಜನರಿಗೆ ಸದಾ ಕೃತಜ್ಞನಾಗಿರುತ್ತೇನೆʼ ಎಂದರು.
ಉತ್ತರ ಪ್ರದೇಶ ಕಾನ್ಪುರ ದೇಹತ್ ಜಿಲ್ಲೆಯ ಒಂದು ಹಳ್ಳಿಯ ಅತ್ಯಂತ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ-ಬೆಳೆದವನು ನಾನು. ಆದರೆ ನಾನೊಂದು ಅತ್ಯುನ್ನತ ಹುದ್ದೆಯನ್ನು ನಿರ್ವಹಿಸಿ, ಇಂದು ಇಡೀ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ. ಹೀಗೆ ಸಾಮಾನ್ಯ ವ್ಯಕ್ತಿಗೂ ಅಸಮಾನ್ಯವಾದ ಹುದ್ದೆಯನ್ನು ಒದಗಿಸಿಕೊಡಬಲ್ಲ, ನಮ್ಮ ದೇಶದ ಅತ್ಯಂತ ರೋಮಾಂಚನಕಾರಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ನನ್ನದೊಂದು ಸೆಲ್ಯೂಟ್. ನಾನು ನನ್ನ ಅಧಿಕಾರ ಅವಧಿಯಲ್ಲಿ ಇಡೀ ದೇಶದ ಪ್ರತಿ ಸಮಾಜದಿಂದಲೂ ಸಂಪೂರ್ಣ ಬೆಂಬಲ ಮತ್ತು ಸಹಕಾರ ಪಡೆದಿದ್ದೇನೆʼ ಎಂದು ಹೇಳಿದರು.
ಹಾಗೇ, ಹವಾಮಾನ ವೈಪರೀತ್ಯದ ಬಗ್ಗೆ ಮಾತನಾಡಿದ ರಾಮನಾಥ ಕೋವಿಂದ್, ʼಮುಂದಿನ ಪೀಳಿಘೆಯವರು ಪರಿಸರ ರಕ್ಷಣೆಯ ಬಗ್ಗೆ ಹೆಚ್ಚಿನ ಗಮನಕೊಟ್ಟು. ಅದನ್ನು ಆದ್ಯತೆಯೆಂದು ಪರಿಗಣಿಸಬೇಕುʼ ಎಂದು ಕರೆ ಕೊಟ್ಟರು. ಪ್ರಕೃತಿ ಮಾತೆ ಈಗ ಅತ್ಯಂತ ಸಂಕಟದಲ್ಲಿದ್ದಾಳೆ. ಸದ್ಯದ ಹವಾಮಾನ ವೈಪರೀತ್ಯ ಎಂಬುದು ಭೂಮಿಗೆ ಶಾಪವಾಗುತ್ತಿದೆ. ನಾವು ಪರಿಸರದ ಬಗ್ಗೆ ಅತ್ಯಂತ ಕಾಳಜಿ ವಹಿಸಬೇಕು. ನಮ್ಮ ನೆಲ, ವಾಯು, ಜಲವನ್ನು ರಕ್ಷಿಸಬೇಕುʼ ಎಂದರು.
ನಮ್ಮ ದೇಶದಲ್ಲಿ ಆರೋಗ್ಯ, ಶಿಕ್ಷಣ, ಆರ್ಥಿಕತೆ ಸೇರಿ ಇನ್ನೂ ಹಲವು ಕ್ಷೇತ್ರಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ʼಇಂದು ಭಾರತದ ಎಲ್ಲ ವಿಭಾಗಗಳಲ್ಲೂ ಉನ್ನತಿ ಸಾಧಿಸುತ್ತಿದೆ. ಈ 21ನೇ ಶತಮಾನವನ್ನು ಗೆದ್ದು ಬೀಗಲು ಸಕಲ ಶಸ್ತ್ರಾಸ್ತ್ರಗಳನ್ನೂ ಸಿದ್ಧಪಡಿಸಿಕೊಳ್ಳುತ್ತಿದೆʼ ಎಂದು ತಿಳಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿ, ದೇಶದ ಮಿಲಿಟರಿ ಶಕ್ತಿ, ಆಜಾದಿ ಕಾ ಅಮೃತ ಮಹೋತ್ಸವ ಸೇರಿ, ಹತ್ತು-ಹಲವು ವಿಷಯಗಳನ್ನು ಪ್ರಸ್ತಾಪಿಸಿ, ರಾಷ್ಟ್ರವನ್ನು ಹೊಗಳಿದರು.
ದಲಿತ ನಾಯಕ ರಾಮನಾಥ ಕೋವಿಂದ್ 2017ರ ಜುಲೈ 25ರಂದು ಈ ದೇಶದ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ್ದರು. ಆಗ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಜೆ.ಎಸ್.ಖೇಹರ್ ಅವರು ಕೋವಿಂದ್‌ಗೆ ಪ್ರತಿಜ್ಞಾವಿಧಿ ಬೋಧಿಸಿದ್ದರು. ಇದೀಗ ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆಯಾಗಿದ್ದು, ಜುಲೈ 25ರಂದು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
ಇದನ್ನೂ ಓದಿ: ವಿಸ್ತಾರ Fact Check | ಔತಣಕೂಟದಲ್ಲಿ ರಾಮನಾಥ ಕೋವಿಂದ್‌ಗೆ ಅವಮಾನಿಸಿದರಾ ಪ್ರಧಾನಿ ಮೋದಿ?