ಭೋಪಾಲ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ರಾಮನವಮಿಯ ಆಚರಣೆಯ ವೇಳೆಯೇ ಭಾರಿ (Indore Temple Tragedy) ದುರಂತ ಸಂಭವಿಸಿದೆ. ಇಂದೋರ್ನ ಸ್ನೇಹ ನಗರದಲ್ಲಿರುವ ಶ್ರೀ ಬೆಳೇಶ್ವರ ಮಹಾದೇವ ಜುಲೋಲಾಲ್ ದೇವಸ್ಥಾನದಲ್ಲಿ ಮೆಟ್ಟಿಲುಬಾವಿ ಕುಸಿದಿದ್ದು, 13 ಜನ ಮೃತಪಟ್ಟಿದ್ದಾರೆ. ಸುಮಾರು 60 ವರ್ಷದ ಹಳೆಯ ದೇವಾಲಯದಲ್ಲಿ ರಾಮನವಮಿ ಹಿನ್ನೆಲೆಯಲ್ಲಿ ಜನ ಧಾರ್ಮಿಕ ವಿಧಿವಿಧಾನ ನೆರವೇರಿಸುವಾಗಲೇ ದುರಂತ ಸಂಭವಿಸಿದೆ. ಮಹಿಳೆಯರು, ಮಕ್ಕಳು ಸೇರಿ 25 ಜನ ಬಾವಿಗೆ ಬಿದ್ದಿದ್ದು, ಇದುವರೆಗೆ 17 ಮಂದಿಯನ್ನು ರಕ್ಷಿಸಲಾಗಿದೆ. ಆದಾಗ್ಯೂ, ಉಳಿದವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ.
ಶ್ರೀರಾಮ ನವಮಿ ಹಿನ್ನೆಲೆಯಲ್ಲಿ ಬಾವಿಯ ಮೇಲಿನ ಸ್ಲ್ಯಾಬ್ ಮೇಲೆ 25ಕ್ಕೂ ಹೆಚ್ಚಿನ ಜನ ಹವನ ಮಾಡುತ್ತಿದ್ದರು. ಇವರ ಭಾರ ತಾಳದೆ ಮೆಟ್ಟಿಲು ಬಾವಿ ಕುಸಿದಿದೆ. ಕುಸಿತದಿಂದಾಗಿ ಅಷ್ಟೂ ಜನ ಬಾವಿಗೆ ಬಿದ್ದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಬಾವಿಗೆ ಬಿದ್ದವರ ರಕ್ಷಣೆಗೆ ಜಿಲ್ಲಾಡಳಿತವು ಸಕಲ ಕ್ರಮ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ. ಸಾವಿಗೀಡಾದ 13 ಜನರಲ್ಲಿ 10 ಮಹಿಳೆಯರೇ ಇದ್ದಾರೆ. ಇದುವರೆಗೆ 11 ಶವಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಸಂತಾಪ
“ಇಂದೋರ್‌ನಲ್ಲಿ ನಡೆದಿರುವ ದುರಂತದ ಸುದ್ದಿ ತಿಳಿದು ಮನಸ್ಸಿಗೆ ನೋವಾಗಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಜನರ ರಕ್ಷಣೆಗೆ ರಾಜ್ಯ ಸರ್ಕಾರ ಸಕಲ ಕ್ರಮ ತೆಗೆದುಕೊಳ್ಳುತ್ತಿದೆ. ದುರಂತದಿಂದ ಗಾಯಗೊಂಡವರು ಗುಣಮುಖರಾಗಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಹಾಗೆಯೇ, ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮೋದಿ ಕರೆ ಮಾಡಿ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ.
ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ಘೋಷಣೆ
ದೇವಾಲಯದಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದೆ. ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಲಾಗಿದೆ. ಪ್ರಕರಣದ ಕುರಿತು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಪ್ರತಿಕ್ರಿಯಿಸಿದ್ದು, “ದುರಂತ ನಡೆದಿರುವುದು ಖೇದನೀಯ. ಬಾವಿಯಲ್ಲಿ ಬಿದ್ದಿರುವವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ. ಮೃತರ ಕುಟುಂಬಸ್ಥರು ಹಾಗೂ ಗಾಯಾಳುಗಳಿಗೆ ಪರಿಹಾರ ಘೋಷಿಸಲಾಗಿದೆ” ಎಂದು ಹೇಳಿದ್ದಾರೆ.
ಸಚಿವ ನರೋತ್ತಮ್ ಮಿಶ್ರಾ ಪ್ರತಿಕ್ರಿಯೆ
ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಾವಿಯಲ್ಲಿ ಬಿದ್ದವರನ್ನು ಹೊರಗೆ ತೆಗೆಯಲು ಜೆಸಿಬಿಗಳನ್ನು ಬಳಸಲಾಗುತ್ತಿದೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳಲ್ಲೇ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನೂ ಜಾಸ್ತಿಯಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Rain News : ಅಕಾಲಿಕ ಮಳೆಗೆ ಮನೆ ಕುಸಿದು ಬಾಲಕಿ ಸಾವು: ರಾಯಚೂರಿನಲ್ಲಿ ಸಂಭವಿಸಿತು ದುರಂತ