Site icon Vistara News

Ram Navami Violence: ಗುಜರಾತ್‌, ಬಂಗಾಳದಲ್ಲಿ ರಾಮನವಮಿ ಹಿಂಸಾಚಾರ; 60 ಜನರ ಬಂಧನ, ರಾಜಕೀಯ ಮೇಲಾಟ

Ram Navami Violence erupted in West Bengal and Gujarat, 24 detained

Ram Navami Violence erupted in West Bengal and Gujarat, 24 detained

ಕೋಲ್ಕೊತಾ/ಗಾಂಧಿನಗರ: ಪಶ್ಚಿಮ ಬಂಗಾಳ ಹಾಗೂ ಗುಜರಾತ್‌ನಲ್ಲಿ ರಾಮನವಮಿ ದಿನವೇ ಭಾರಿ ಹಿಂಸಾಚಾರ (Ram Navami Violence) ನಡೆದಿದ್ದು, ಗುಜರಾತ್‌ನಲ್ಲಿ 24 ಮಂದಿಯನ್ನು ಬಂಧಿಸಲಾಗಿದೆ. ಬಂಗಾಳದಲ್ಲೂ 36 ಜನರನ್ನು ಬಂಧಿಸಲಾಗಿದೆ. ಹಾಗೆಯೇ, ನೂರಾರು ಜನರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಬಂಗಾಳದ ಹೌರಾದಲ್ಲಂತೂ ರಾಮನವಮಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು, ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಗುಜರಾತ್‌ನ ವಡೋದರಾದಲ್ಲೂ ಹಿಂಸಾಚಾರ ನಡೆದಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಹಾಗೆಯೇ, ಇದು ರಾಜಕೀಯ ಮೇಲಾಟಕ್ಕೂ ಕಾರಣವಾಗಿದೆ. ಅತ್ತ, ಮಹಾರಾಷ್ಟ್ರದ ಹಲವೆಡೆಯೂ ಹಿಂಸಾಚಾರದ ಪ್ರಕರಣಗಳು ವರದಿಯಾಗಿವೆ.

ಬಂಗಾಳದಲ್ಲಿ ಶುಕ್ರವಾರವೂ ಗಲಭೆ

ಹೌರಾದ ಶಿಬ್‌ಪುರದಲ್ಲಿ ಶುಕ್ರವಾರವೂ ಗಲಾಟೆ ಮುಂದುವರಿದಿದ್ದು, ಪೊಲೀಸ್‌ ವಾಹನಗಳಿಗೇ ಬೆಂಕಿ ಹಚ್ಚಲಾಗಿದೆ. ಕಲ್ಲು ತೂರಾಟ, ಅಂಗಡಿ-ಮುಂಗಟ್ಟುಗಳ ಮೇಲೆ ದಾಳಿ ಸೇರಿ ಹಲವು ರೀತಿಯಲ್ಲಿ ಹಿಂಸಾಚಾರ ನಡೆಸಲಾಗಿದೆ. ಶಿಬ್‌ಪುರವೊಂದರಲ್ಲಿಯೇ ಪೊಲೀಸರು 36 ಜನರನ್ನು ಬಂಧಿಸಿದ್ದು, ನೂರಾರು ಜನರ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ರಾಮನವಮಿ ಮೆರವಣಿಗೆ ವೇಳೆ ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಬಳಿಕ ಗಲಭೆ ಉಂಟಾಗಿದೆ ಎಂದು ತಿಳಿದುಬಂದಿದೆ. ಇದಾದ ಬಳಿಕ ಪೊಲೀಸರಿಗೂ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗದಷ್ಟು ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ.

ಬಂಗಾಳದಲ್ಲಿ ಹಿಂಸಾಚಾರದ ದೃಶ್ಯ

ಬಿಜೆಪಿ-ಟಿಎಂಸಿ ಮಧ್ಯೆ ವಾಕ್ಸಮರ

ಪಶ್ಚಿಮ ಬಂಗಾಳದಲ್ಲಿ ಭಾರಿ ಕಲ್ಲುತೂರಾಟದಿಂದಾಗಿ ಅಂಗಡಿ-ಮುಂಗಟ್ಟು, ಜನರ ಆಸ್ತಿಪಾಸ್ತಿಗೆ ಹಾನಿಯಾಗಿರುವ ಪ್ರಕರಣವೀಗ ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ. ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ಹೌರಾದಲ್ಲಿ ನಡೆದ ಹಿಂಸಾಚಾರಕ್ಕೆ ಹಿಂದುಗಳೂ ಕಾರಣವಲ್ಲ, ಮುಸ್ಲಿಮರೂ ಕಾರಣವಲ್ಲ. ಬಿಜೆಪಿ ಹಾಗೂ ಬಜರಂಗದಳದ ಕಾರ್ಯಕರ್ತರು ರಾಮನವಮಿ ಮೆರವಣಿಗೆ ವೇಳೆ ಪ್ರಚೋದನೆ ನೀಡಿದ ಕಾರಣ ಹಿಂಸಾಚಾರ ನಡೆದಿದೆ. ಗಲಭೆ ವೇಳೆ ಯಾರ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆಯೋ, ಅವರಿಗೆ ನೆರವು ನೀಡಲಾಗುತ್ತದೆ” ಎಂದು ತಿಳಿಸಿದರು. ಅತ್ತ, ಬಿಜೆಪಿಯು ಗಲಭೆಗೆ ಟಿಎಂಸಿಯ ದುರಾಡಳಿತವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಚಾವಣಿ ಮೇಲೆ ನಿಂತು ಕಲ್ಲು ತೂರಾಟ

ಗುಜರಾತ್‌ನ ವಡೋದರ ನಗರದಲ್ಲಿ ರಾಮನ ಮೂರ್ತಿಯ ಮೆರವಣಿಗೆ ವೇಳೆ ಚಾವಣಿ ಮೇಲೆ ನಿಂತು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಫತೇಪುರ ಪ್ರದೇಶದಲ್ಲಿ ವಿಶ್ವ ಹಿಂದು ಪರಿಷತ್‌ ಹಾಗೂ ಬಜರಂಗದಳದ ಕಾರ್ಯಕರ್ತರು ಶ್ರೀರಾಮ ಮೂರ್ತಿಯ ಮೆರವಣಿಗೆ ಆಯೋಜಿಸಿದ್ದರು. ಇದೇ ವೇಳೆ ಮುಸ್ಲಿಮರು ಕಲ್ಲು ತೂರಾಟ ನಡೆಸಿದ ಕಾರಣ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಗಲಭೆಯಿಂದಾಗಿ ಹಲವರು ಗಾಯಗೊಂಡಿದ್ದು, ಇನ್ನೂ ಹಲವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದಕ್ಕೂ ಮೊದಲು ನಡೆದ ಮೆರವಣಿಗೆ ವೇಳೆಯೂ ಪಿತೂರಿ ನಡೆಸಿ ಕಲ್ಲು ತೂರಾಟ ಮಾಡಲಾಗುತ್ತಿತ್ತು. ಈಗಲೂ ಪಿತೂರಿ ನಡೆಸಲಾಗಿದೆ ಎಂದು ಬಜರಂಗದಳದ ಮುಖಂಡರು ಆರೋಪಿಸಿದ್ದಾರೆ.

ಇದನ್ನೂ ಓದಿ: Karnataka Elections: ನನ್ನ ರಾಮ ಅಂತಃಕರಣ ಸ್ವರೂಪಿ, ನಿಮಗೆ ರಾಮ ಚುನಾವಣೆ ಸರಕು: ಸಿದ್ದು, ಬಿಜೆಪಿ ನಡುವೆ ರಾಮನವಮಿ ಫೈಟ್‌

Exit mobile version