Site icon Vistara News

Ram Path: ಅಯೋಧ್ಯೆ ರಾಮ ಪಥ ಕಾಮಗಾರಿಯಲ್ಲಿ ನಿರ್ಲಕ್ಷ್ಯ; 6 ಅಧಿಕಾರಿಗಳ ತಲೆದಂಡ

Ram Path

Ram Path

ಅಯೋಧ್ಯೆ: ಜೂನ್ 23 ಮತ್ತು ಜೂನ್ 25ರಂದು ಸುರಿದ ಮಳೆಯಿಂದಾಗಿ ಅಯೋಧ್ಯೆ (Ayodhya)ಯ 14 ಕಿ.ಮೀ. ಉದ್ದದ ರಾಮ ಪಥ (Ram Path) ಹಾನಿಗೊಳಗಾಗಿದೆ. ಅಲ್ಲದೆ ಒಳಚರಂಡಿ ನಿರ್ಮಾಣ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರಿದ ಕಾರಣಕ್ಕಾಗಿ ಉತ್ತರ ಪ್ರದೇಶ ಸರ್ಕಾರವು ಲೋಕೋಪಯೋಗಿ ಇಲಾಖೆ (PWD) ಮತ್ತು ಉತ್ತರ ಪ್ರದೇಶ ಜಲ ನಿಗಮದ 6 ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

ರಾಮಪಥದ ಉದ್ದಕ್ಕೂ ಇರುವ ಸುಮಾರು 15 ಉಪ ಮಾರ್ಗಗಳು ಮತ್ತು ಬೀದಿಗಳು ಮಳೆಯ ನಂತರ ತೀವ್ರವಾಗಿ ಜಲಾವೃತಗೊಂಡಿದ್ದವು. ಇದಲ್ಲದೆ ಸಮೀಪದ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಸಂಕಷ್ಟ ಎದುರಾಗಿತ್ತು. ಹೀಗಾಗಿ ಇದು ಕಾಮಗಾರಿಯಲ್ಲಿನ ನಿರ್ಲಕ್ಷ್ಯ ಎಂದು ಉಲ್ಲೇಖಿಸಿ ಅಹಮದಾಬಾದ್ ಮೂಲದ ಗುತ್ತಿಗೆದಾರ ಸಂಸ್ಥೆ ಭುವನ್ ಇನ್ಫ್ರಾಕಾಮ್ ಪ್ರೈವೇಟ್ ಲಿಮಿಟೆಟ್‌ಗೆ ರಾಜ್ಯ ಸರ್ಕಾರ ನೋಟಿಸ್ ನೀಡಿದೆ.

ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಧ್ರುವ್ ಅಗರ್ವಾಲ್ ಮತ್ತು ಸಹಾಯಕ ಎಂಜಿನಿಯರ್ ಅನುಜ್ ದೇಶ್ವಾಲ್ ಅವರನ್ನು ಅಮಾನತುಗೊಳಿಸಿ ವಿಶೇಷ ಕಾರ್ಯದರ್ಶಿ ವಿನೋದ್ ಕುಮಾರ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಜತೆಗೆ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ (ಅಭಿವೃದ್ಧಿ) ವಿ.ಕೆ.ಶ್ರೀವಾಸ್ತವ್ ಅವರು ಕಿರಿಯ ಎಂಜಿನಿಯರ್ ಪ್ರಭಾತ್ ಕುಮಾರ್ ಪಾಂಡೆ ಅವರನ್ನು ಅಮಾನತುಗೊಳಿಸಿದ್ದಾರೆ.

ಇನ್ನು ಉತ್ತರ ಪ್ರದೇಶ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಕುಮಾರ್ ಮಿಶ್ರಾ ಅವರು ಕಾರ್ಯನಿರ್ವಾಹಕ ಎಂಜಿನಿಯರ್ ಆನಂದ್ ಕುಮಾರ್ ದುಬೆ, ಸಹಾಯಕ ಎಂಜಿನಿಯರ್ ರಾಜೇಂದ್ರ ಕುಮಾರ್ ಯಾದವ್ ಮತ್ತು ಕಿರಿಯ ಎಂಜಿನಿಯರ್ ಮೊಹಮ್ಮದ್ ಶಾಹಿದ್ ಅವರನ್ನು ಅಮಾನತು ಮಾಡಿದ್ದಾರೆ.

ಅಧಿಕಾರಿಗಳು ಹೇಳಿದ್ದೇನು?

“ರಾಮ ಪಥವನ್ನು ನಿರ್ಮಿಸಿದ ಕೆಲವೇ ದಿನಗಳಲ್ಲಿ ಅದರ ಮೇಲಿನ ಪದರಕ್ಕೆ ಹಾನಿಯಾಗಿದೆ. ರಾಜ್ಯ ಸರ್ಕಾರ ಆದ್ಯತೆಯ ಮೇರೆಗೆ ಕೈಗೊಂಡಿದ್ದ ಈ ಕಾಮಗಾರಿಯಲ್ಲಿನ ನಿರ್ಲಕ್ಷ್ಯ ಸಹಿಸಲು ಸಾಧ್ಯವಿಲ್ಲ. ಇದರಿಂದ ಸಾರ್ವಜನಿಕರ ಮುಂದೆ ರಾಜ್ಯ ಸರ್ಕಾರದ ಘನತೆಗೆ ಹಾನಿಯಾಗಿದ್ದು, ಈ ನಿಟ್ಟನಲ್ಲಿ ಕ್ರಮ ಕೈಗೊಳ್ಳಲಾಗಿದೆ” ಎಂದು ಲೋಕೋಪಯೋಗಿ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

“ಇದನ್ನು ಗಂಭೀರ ಅಕ್ರಮವೆಂದು ಪರಿಗಣಿಸಿ, ಉತ್ತರ ಪ್ರದೇಶ ಸರ್ಕಾರಿ ನೌಕರರ (ಶಿಸ್ತು ಮತ್ತು ಮೇಲ್ಮನವಿ) 1999ರ ನಿಯಮ 7ರ ಅಡಿಯಲ್ಲಿ ನಿರ್ಮಾಣ್ ಖಾಂಡ್ -3 ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್ ಧ್ರುವ್ ಅಗರ್ವಾಲ್ ಅವರನ್ನು ಅಮಾನತುಗೊಳಿಸಲಾಗಿದೆ” ಎಂದು ಕಚೇರಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪಿಡಬ್ಲ್ಯುಡಿ ಪ್ರಧಾನ ಕಾರ್ಯದರ್ಶಿ ಅಜಯ್ ಚೌಹಾಣ್ ತಿಳಿಸಿದ್ದಾರೆ. ಹಾನಿಗೊಳಗಾದ ರಾಮ ಪಥದ ಚಿತ್ರಗಳು ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿ ವೈರಲ್‌ ಆಗಿತ್ತು.

ಇದನ್ನೂ ಓದಿ: Ayodhya Ram Mandir: ಅಯೋಧ್ಯೆ ರಾಮಲಲ್ಲಾನ ಸ್ನಾನವನ್ನೇ ಮರೆತ ಎಂಜಿನಿಯರ್‌ಗಳು! ಗರ್ಭಗುಡಿಯಲ್ಲೀಗ ದೊಡ್ಡ ಸಮಸ್ಯೆ!

ಈ ಮಧ್ಯೆ ಸುಮಾರು ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಅರ್ಚಕರಿಗೆ ತಲೆನೋವಾಗಿ ಪರಿಣಮಿಸಿದೆ. ಸಂಗ್ರಹವಾದ ನೀರು ಹೊರಹರಿಯುವ ಒಳಚರಂಡಿ ವ್ಯವಸ್ಥೆಯಲ್ಲಿ ದೋಷಗಳು ಕಾಣಿಸಿಕೊಂಡು ಸುದ್ದಿ ಇತ್ತೀಚೆಗೆ ಭಾರೀ ಚರ್ಚೆಗೆ ಕಾರಣವಾಗಿದೆ.

Exit mobile version