ನವ ದೆಹಲಿ: ಬೆಲೆ ಏರಿಕೆ, ಜಿಎಸ್ಟಿ ಹೆಚ್ಚಳ ವಿರೋಧಿಸಿ ಆಗಸ್ಟ್ 2ರಂದು ಕಾಂಗ್ರೆಸ್ ನಾಯಕರು ಕಪ್ಪು ಬಟ್ಟೆ ಧರಿಸಿ ನಡೆಸಿದ್ದ ಪ್ರತಿಭಟನೆ ಈಗ ‘ರಾಮ-ರಾವಣ’ ತಿರುವು ತೆಗೆದುಕೊಂಡಿದೆ. ‘2020ರ ಆಗಸ್ಟ್ 5ರಂದು ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೂಮಿಪೂಜೆ ನೆರವೇರಿಸಿದ್ದರು. ಆ ಕ್ಷಣ ದೇಶದ ಪಾಲಿಗೆ ಐತಿಹಾಸಿಕವಾಗಿತ್ತು. ಆದರೆ ಬೇಕೆಂತಲೇ ಅದೇ ದಿನವನ್ನೇ ಕಾಂಗ್ರೆಸ್ಸಿಗರು ಪ್ರತಿಭಟನೆಗೆ ಆಯ್ಕೆ ಮಾಡಿಕೊಂಡಿದ್ದಾರೆ. ಇದು ಕಾಂಗ್ರೆಸ್ನ ಓಲೈಕೆ ರಾಜಕಾರಣ. ತಮ್ಮ ನಿಲುವು ಏನೆಂದು ತೋರಿಸಲೆಂದೇ ಈ ದಿನ ಕಪ್ಪು ಬಟ್ಟೆ ಧರಿಸಿ ಹೋರಾಟ ನಡೆಸಿದ್ದು’ ಎಂದು ಗೃಹ ಸಚಿವ ಅಮಿತ್ ಶಾ ಆರೋಪ ಮಾಡಿದ್ದಾರೆ.
ಹೀಗೆ ಕಾಂಗ್ರೆಸ್ನ ಪ್ರತಿಭಟನೆಯನ್ನು ಅಯೋಧ್ಯಾ ರಾಮಮಂದಿರ ನಿರ್ಮಾಣ ಭೂಮಿಪೂಜೆಗೆ ಲಿಂಕ್ ಮಾಡಿದ ಅಮಿತ್ ಶಾರಿಗೆ ಕಾಂಗ್ರೆಸ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಅದರಲ್ಲೂ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ‘ಈ ಕೇಂದ್ರ ಸರ್ಕಾರ ರಾಮನ ಹೆಸರಿನಲ್ಲಿ ರಾವಣನನ್ನು ಪೂಜಿಸುತ್ತಿದೆ. ಇವರ ಆಳ್ವಿಕೆಯಲ್ಲಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇದೊಂದು ಜನ-ವಿರೋಧಿ ಮತ್ತು ಕಾರ್ಪೋರೇಟ್ ಪರವಾಗಿರುವ ಸರ್ಕಾರ ಎಂಬುದನ್ನು ನಮ್ಮ ಕಾಂಗ್ರೆಸ್ ಸಾಬೀತುಪಡಿಸಿದೆ. ನಾವು ಬೆಲೆ ಏರಿಕೆ ಮತ್ತು ನಿರುದ್ಯೋಗ ಹೆಚ್ಚಳದ ವಿರುದ್ಧ ಪ್ರತಿಭಟನೆ ನಡೆಸಿದ್ದನ್ನು ಬಿಜೆಪಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇಂಥ ಹುರುಳು ಇಲ್ಲದ ಆರೋಪವನ್ನು ನಮ್ಮ ಬಗ್ಗೆ ಮಾಡುತ್ತಿದೆ ಎಂದು ಹೇಳಿದ್ದಾರೆ.
ಅಮಿತ್ ಶಾ ಅವರ ಈ ಆರೋಪಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕೂಡ ತಿರುಗೇಟು ನೀಡಿದ್ದಾರೆ. ‘ಕೇಂದ್ರ ಸರ್ಕಾರದ ಹುಳುಕುಗಳನ್ನು ನಾವು ತೋರಿಸುತ್ತಿದ್ದೇವೆ. ಆದರೆ ತಮ್ಮ ತಪ್ಪು ಜನರಿಗೆ ಗೊತ್ತಾಗಿಬಿಡುತ್ತದಲ್ಲಾ ಎಂಬ ಹೆದರಿಕೆಯಿಂದ ಅವರ ಗಮನ ಬೇರೆಡೆಗೆ ಸೆಳೆಯಲು ಅಯೋಧ್ಯೆಯ ವಿಷಯವನ್ನು ಬಿಜೆಪಿ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದೆ. ಇಂಥ ಬೋಗಸ್ ವಿಷಯವನ್ನು ಎತ್ತಿದ್ದಾರೆ ಅಂದರೆ, ಪ್ರತಿಭಟನೆ ಬಿಸಿ ಸರಿಯಾಗಿ ತಟ್ಟಿದೆ ಎಂದೇ ಅರ್ಥ ’ ಎಂದಿದ್ದಾರೆ. ‘ಈ ದೇಶದ ಮಧ್ಯಮ ವರ್ಗದ ಜನರು-ಬಡವರ ಮೇಲೆ ಬೀಳುತ್ತಿರುವ ಹಣದುಬ್ಬರ ಹೊರೆಯನ್ನು ಹೋರಾಡುವ ಮಾರ್ಗವನ್ನು ನಮಗೆ ತೋರಿಸಿದ್ದೇ ಭಗವಾನ್ ಶ್ರೀರಾಮ’ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ.
ಇದನ್ನೂ ಓದಿ: Congress Protest Live | ಬ್ಯಾರಿಕೇಡ್ ಹಾರಿದ ಪ್ರಿಯಾಂಕಾ ಗಾಂಧಿಯನ್ನು ಬಂಧಿಸಿದ ಪೊಲೀಸ್