ನವದೆಹಲಿ: ಪುರಾತನ ಇತಿಹಾಸವಿರುವ ರಾಮಸೇತುವನ್ನು (Ram Setu) ‘ರಾಷ್ಟ್ರೀಯ ಪಾರಂಪರಿಕ ಸ್ಮಾರಕ’ (National Heritage Monument) ಎಂಬುದಾಗಿ ಘೋಷಿಸಬೇಕು ಎಂದು ರಾಜ್ಯಸಭೆ ಬಿಜೆಪಿ ಮಾಜಿ ಸದಸ್ಯ, ಪಕ್ಷದ ಮುಖಂಡ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಅರ್ಜಿಯನ್ನು ಫೆಬ್ರವರಿಯಲ್ಲಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಹಾಗೆಯೇ, ಫೆಬ್ರವರಿ ಮೊದಲ ವಾರದೊಳಗೆ ಈ ಕುರಿತು ಪ್ರತಿಕ್ರಿಯೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಸಾಂವಿಧಾನಿಕ ಪೀಠ ಅಸ್ತಿತ್ವದಲ್ಲಿರುವುದರಿಂದ ಈಗಲೇ ವಿಚಾರಣೆ ಮಾಡಲು ಕಷ್ಟಸಾಧ್ಯ. ಹಾಗಾಗಿ, ಫೆಬ್ರವರಿ ಮೊದಲ ವಾರದಲ್ಲಿ ವಿಚಾರಣೆ ನಡೆಸಲಾಗುತ್ತದೆ. ಮೊದಲ ವಾರದೊಳಗೆ ಕೇಂದ್ರ ಸರ್ಕಾರವು ಪ್ರತಿಕ್ರಿಯೆ ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾ.ಪಿ.ಎಸ್. ನರಸಿಂಹ ಅವರಿದ್ದ ಪೀಠ ತಿಳಿಸಿತು.
ತಮಿಳುನಾಡಿನ ಕರಾವಳಿಯಲ್ಲಿರುವ ಪಂಬನ್ ದ್ವೀಪ ಹಾಗೂ ಶ್ರೀಲಂಕಾದ ಮನ್ನಾರ್ ದ್ವೀಪದ ನಡುವಿನ ಸುಣ್ಣದ ಕಲ್ಲುಗಳ ಸರಪಳಿಯನ್ನು ರಾಮಸೇತು ಎಂದು ಕರೆಯಲಾಗುತ್ತದೆ. ಇದಕ್ಕೆ ಆ್ಯಡಮ್ಸ್ ಸೇತುವೆ ಎಂದೂ ಕರೆಯಲಾಗುತ್ತದೆ. ಇದನ್ನು ರಾಷ್ಟ್ರೀಯ ಸ್ಮಾರಕ ಎಂಬುದಾಗಿ ಘೋಷಿಸಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಅರ್ಜಿ ಸಲ್ಲಿಸಿದ್ದಾರೆ. “ರಾಮಸೇತುವಿನ ಅಸ್ತಿತ್ವವನ್ನು ಕೇಂದ್ರ ಸರ್ಕಾರ ಒಪ್ಪಿರುವುದು ನನಗೆ ಸಿಕ್ಕ ಮೊದಲ ಜಯ” ಎಂದು ಸುಬ್ರಮಣಿಯನ್ ಸ್ವಾಮಿ ಈಗಾಗಲೇ ಹೇಳಿದ್ದಾರೆ.
ಇದನ್ನೂ ಓದಿ | ಉತ್ತರ ಪ್ರದೇಶದಲ್ಲಿ ಪತ್ತೆಯಾದ ಈ ತೇಲುವ ಕಲ್ಲು ರಾಮಸೇತುವಿನದ್ದೇ?: ಹೆಚ್ಚಿದ ಕುತೂಹಲ