Site icon Vistara News

Ram Mandir: ಮೊದಲ ದಿನವೇ ರಾಮಮಂದಿರಕ್ಕೆ 5 ಲಕ್ಷ ಜನ ಭೇಟಿ; 3 ಕೋಟಿ ರೂ. ಆದಾಯ

Ram Mandir

Ayodhya Ram Mandir Construction To Resume From February 15

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರವು (Ram Mandir) ಭಕ್ತರ ದರ್ಶನಕ್ಕೆ ಮುಕ್ತವಾಗಿದೆ. ಲಕ್ಷಾಂತರ ಭಕ್ತರು ಅಯೋಧ್ಯೆಯಲ್ಲಿ (Ayodhya) ಬೀಡುಬಿಟ್ಟಿದ್ದು, ‘ಬಾಲಕ ರಾಮ’ನ (ರಾಮಲಲ್ಲಾ) ದರ್ಶನಕ್ಕೆ ಹಾತೊರೆಯುತ್ತಿದ್ದಾರೆ. ಇನ್ನು ರಾಮಮಂದಿರವು ಭಕ್ತರ ದರ್ಶನಕ್ಕೆ ಮುಕ್ತವಾದ ಜನವರಿ 23ರಂದು ಬರೋಬ್ಬರಿ 5 ಲಕ್ಷ ಜನ ದರ್ಶನ ಪಡೆದಿದ್ದಾರೆ ಹಾಗೂ ಒಂದೇ ದಿನದಲ್ಲಿ 3.17 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ ಎಂದು ರಾಮಮಂದಿರ ಟ್ರಸ್ಟ್‌ ಮಾಹಿತಿ ನೀಡಿದೆ.

“ಪ್ರಾಣ ಪ್ರತಿಷ್ಠೆ ನಂತರ ಸಾರ್ವಜನಿಕರಿಗೆ ರಾಮಮಂದಿರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಸುಮಾರು 10 ದೇಣಿಗೆ ಕೌಂಟರ್‌ಗಳನ್ನು ತೆರೆಯಲಾಗಿದೆ. ಮೊದಲ ದಿನ ಸುಮಾರು 5 ಲಕ್ಷಕ್ಕೂ ಅಧಿಕ ಜನ ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಮೊದಲ ದಿನವೇ ನಗದು ಹಾಗೂ ಆನ್‌ಲೈನ್‌ ಮೂಲಕ ಒಟ್ಟು 3.17 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ” ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟಿ ಅನಿಲ್‌ ಮಿಶ್ರಾ ಮಾಹಿತಿ ನೀಡಿದ್ದಾರೆ.

ಒಂದು ವಾರದ ದೇಣಿಗೆ ಸಂಗ್ರಹದ ಮೊತ್ತವನ್ನು ಪ್ರತಿ ಸೋಮವಾರ ಲೆಕ್ಕ ಹಾಕಲು ಟ್ರಸ್ಟ್‌ ತೀರ್ಮಾನಿಸಿದೆ. ಮಂಗಳವಾರ (ಜನವರಿ 23) ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡುತ್ತಲೇ ಲಕ್ಷಾಂತರ ಜನ ರಾಮನ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದರು. ಇದೇ ವೇಳೆ ನೂಕುನುಗ್ಗಲು, ಕಾಲ್ತುಳಿತದಿಂದ ಕೆಲವು ಭಕ್ತರು ಗಾಯಗೊಂಡಿದ್ದರು. ಜನರನ್ನು ನಿಯಂತ್ರಿಸಲು ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ಕೂಡ ನಿಯೋಜಿಸಲಾಗಿದೆ.

ಅಯೋಧ್ಯೆಯನ್ನು ಜಾಗತಿಕ ಆಧ್ಯಾತ್ಮಿಕ ಪ್ರವಾಸಿ ಕೇಂದ್ರವನ್ನಾಗಿ ಮಾಡಲು ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ. ಇದರ ಭಾಗವಾಗಿ ಕನಿಷ್ಠ 13 ಹೊಸ ದೇವಾಲಯಗಳ ನಿರ್ಮಾಣ ಮಾಡಲಾಗುತ್ತಿದೆ. ಈ ಪೈಕಿ ಆರು ಬೃಹತ್ ದೇವಾಲಯದ ಸಂಕೀರ್ಣದ ಒಳಗೆ ಮತ್ತು ಏಳು ಹೊರಗೆ ಇರಲಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಖಜಾಂಚಿ ಸ್ವಾಮಿ ಗುರುದೇವ್ ಗಿರಿಜಿ ಮಾಹಿತಿ ನೀಡಿ, ಮುಖ್ಯ ದೇವಾಲಯವನ್ನು ಪೂರ್ಣಗೊಳಿಸುವ ಕಾಮಗಾರಿ ಸೇರಿದಂತೆ ಎಲ್ಲ ಯೋಜನೆಗಳು ಪ್ರಗತಿಯಲ್ಲಿವೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: Ram Mandir: ಇದು ರಾಮಮಂದಿರ ಅಷ್ಟೇ ಅಲ್ಲ, ರಾಷ್ಟ್ರಮಂದಿರ: ಪ್ರಾಣ ಪ್ರತಿಷ್ಠೆ ಬಳಿಕ ಮೋದಿ ಭಾವುಕ ನುಡಿ

ರಾಮ ಮಂದಿರ ಸಂಕೀರ್ಣದ ಹೊರಗೆ ದೊಡ್ಡ ಪ್ರದೇಶದಲ್ಲಿ ಏಳು ದೇವಾಲಯಗಳು ಇರಲಿವೆ. ಭಗವಾನ್ ರಾಮನ ಜೀವನದಲ್ಲಿ ಪ್ರಧಾನ ಪಾತ್ರ ವಹಿಸಿದ ಮುಖ್ಯ ಏಳು ಮಂದಿಯ ದೇವಸ್ಥಾನ ಇದಾಗಿರಲಿದೆ. ಇವು ಋಷಿಗಳಾದ ವಾಲ್ಮೀಕಿ, ವಸಿಷ್ಠ, ವಿಶ್ವಾಮಿತ್ರ, ಶಬರಿ ಮತ್ತು ರಾಮನಿಗಾಗಿ ಪ್ರಾಣವನ್ನೇ ಸಮರ್ಪಿಸಿದ ಜಟಾಯುಗೆ ಸಂಬಂಧಿಸಿದ ದೇಗುಲಗಳು ಎನ್ನುವುದು ವಿಶೇಷ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version