Site icon Vistara News

Ramcharitmanas Row: ರಾಮಚರಿತಮಾನಸವನ್ನು ಸೈನೈಡ್‌ಗೆ ಹೋಲಿಸಿದ ಇಂಡಿಯಾ ಒಕ್ಕೂಟದ ಸಚಿವ

Bihar Minister Chandra Shekhar On Ramcharitmanas

Ramcharitmanas Contains Potassium Cyanide: Says Bihar Minister Chandra Shekhar

ಪಟನಾ: ಸನಾತನ ಧರ್ಮದ (Sanatana Dharma) ನಿರ್ಮೂಲನೆ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ನೀಡಿದ ಹೇಳಿಕೆಯು ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟದಲ್ಲೇ (INDIA Bloc) ಭಿನ್ನಾಭಿಪ್ರಾಯ ಮೂಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಇಂತಹ ಹೇಳಿಕೆಗಳನ್ನು ಖಂಡಿಸಿದ್ದಾರೆ. ಇದರ ಬೆನ್ನಲ್ಲೇ, ಬಿಹಾರ ಶಿಕ್ಷಣ ಸಚಿವ ಡಾ.ಚಂದ್ರಶೇಖರ್‌ (Chandra Shekhar) ಅವರು ಹಿಂದುಗಳ ಪವಿತ್ರ ಗ್ರಂಥವಾದ ರಾಮಚರಿತಮಾನಸದಲ್ಲಿ (Ramcharitmanas Row) ಪೊಟ್ಯಾಶಿಯಂ ಸೈನೈಡ್‌ (Potassium Cyanide) ಇದೆ ಎಂದು ಹೇಳಿದ್ದಾರೆ. ಇದು ಈಗ ಮತ್ತೆ ವಿವಾದಕ್ಕೆ ಕಾರಣವಾಗಿದೆ.

ಪೊಟ್ಯಾಶಿಯಂ ಸೈನೈಡ್‌ ಒಂದು ವಿಷಕಾರಿ ರಾಸಾಯನಿಕವಾಗಿದ್ದು, ಇದು ಬಣ್ಣರಹಿತ ಉಪ್ಪಾಗಿದೆ. ಸಕ್ಕರೆಯಂತೆ ಕಾಣುವ ಪೊಟ್ಯಾಶಿಯಂ ಸೈನೈಡ್‌ಅನ್ನು ಚಿನ್ನದ ಗಣಿಗಾರಿಕೆಗೆ ಹೆಚ್ಚು ಬಳಸುತ್ತಾರೆ. ಇಂತಹ ವಿಷಕಾರಿ ರಾಸಾಯನಿಕದ ಜತೆಗೆ ರಾಮಚರಿತಮಾನಸ ಗ್ರಂಥವನ್ನು ಹೋಲಿಕೆ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. 16ನೇ ಶತಮಾನದ ಭಕ್ತಿಕವಿ ತುಳಸಿದಾಸರು, ರಾಮಾಯಣವನ್ನು ಆಧಾರವಾಗಿಟ್ಟುಕೊಂಡು ರಚಿಸಿರುವ ‘ರಾಮಚರಿತ ಮಾನಸ’ ಹಿಂದುಗಳ ಪಾಲಿಗೆ ಪವಿತ್ರ ಧಾರ್ಮಿಕ ಗ್ರಂಥವಾಗಿದೆ.

ಚಂದ್ರಶೇಖರ್‌ ಭಾಷಣದ ವಿಡಿಯೊ

ಹಿಂದಿ ದಿವಸ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ರಾಮಚರಿತಮಾನಸವು ಜಾತಿವಾದದ ಪರವಿದೆ. ಹಾಗಾಗಿ ನಾನು ಆ ಗ್ರಂಥದ ವಿರುದ್ಧ ಇದ್ದೇನೆ. ಜಾತಿವಾದವನ್ನು ಪ್ರೇರೇಪಿಸುವ ಗ್ರಂಥಗಳನ್ನು ನಾನು ವಿರೋಧಿಸುತ್ತೇನೆ. ನನ್ನ ಅಭಿಪ್ರಾಯವನ್ನು ಜನ ಒಪ್ಪುವುದಿಲ್ಲ. ಅವರು ನನ್ನನ್ನು ವಿರೋಧಿಸುತ್ತಾರೆ. ನನ್ನ ತಲೆಗೆ ಬಹುಮಾನ ಘೋಷಿಸುತ್ತಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಡಿಎಂಕೆ ನಾಯಕರಾದ ಉದಯನಿಧಿ ಸ್ಟಾಲಿನ್‌, ಎ. ರಾಜಾ ಅವರು ಸನಾತನ ಧರ್ಮದ ನಿರ್ಮೂಲನೆ ಜತೆಗೆ ಅದನ್ನು ಡೆಂಗ್ಯೂ, ಕೊರೊನಾ, ಮಲೇರಿಯಾ, ಏಡ್ಸ್‌ಗೆ ಹೋಲಿಕೆ ಮಾಡಿರುವುದರ ಕುರಿತು ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ನರೇಂದ್ರ ಮೋದಿ ಅವರಂತೂ, “ಸನಾತನ ಧರ್ಮವನ್ನು ದೇಶದಲ್ಲಿ ನಿರ್ಮೂಲನೆ ಮಾಡುವುದೇ ಇಂಡಿಯಾ ಒಕ್ಕೂಟದ ಉದ್ದೇಶವಾಗಿದೆ. ಇಂತಹ ಶಕ್ತಿಗಳ ವಿರುದ್ಧ ಹೋರಾಡಬೇಕು” ಎಂದು ಕರೆ ನೀಡಿದ್ದಾರೆ. ಇದರ ಬೆನ್ನಲ್ಲೇ ಇಂಡಿಯಾ ಒಕ್ಕೂಟದ ಪಕ್ಷವಾದ ಜೆಡಿಯು ನಾಯಕ, ಸಚಿವ ಡಾ.ಚಂದ್ರಶೇಖರ್‌ ನೀಡಿರುವ ಹೇಳಿಕೆಯು ವಿವಾದದ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಇದನ್ನೂ ಓದಿ: Bihar Education Minister | ರಾಮಚರಿತಮಾನಸ, ಮನುಸ್ಮೃತಿಯಿಂದ ಸಮಾಜದಲ್ಲಿ ದ್ವೇಷ: ಬಿಹಾರ ಶಿಕ್ಷಣ ಸಚಿವ

ಇದಕ್ಕೂ ಮೊದಲು ಕೂಡ ವಿವಾದ

ರಾಮಚರಿತಮಾನಸ ಗ್ರಂಥದ ಕುರಿತು ಡಾ.ಚಂದ್ರಶೇಖರ್‌ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲೆ. ಕೆಲ ತಿಂಗಳ ಹಿಂದಷ್ಟೇ ಅವರು, “ಮನುಸ್ಮೃತಿ ಮತ್ತು ರಾಮಚರಿತಮಾನಸಗಳು ಸಮಾಜದಲ್ಲಿ ದ್ವೇಷವನ್ನು ಹರಡುವ ಪುಸ್ತಕಗಳಾಗಿವೆ. ಇವು ದಲಿತರು- ಹಿಂದುಳಿದ ಮತ್ತು ಮಹಿಳೆಯರು ಶಿಕ್ಷಣ ಪಡೆಯುವುದನ್ನು ತಡೆಯುತ್ತವೆ. ಮನುಸ್ಮೃತಿ, ರಾಮಚರಿತಮಾನಸ, ಗುರು ಗೋಳ್ವಾಲ್ಕರ್ ಅವರ ಬಂಚ್ ಆಫ್ ಥಾಟ್ಸ್ ಪುಸ್ತಕಗಳು ದ್ವೇಷವನ್ನು ಹರಡುವ ಪುಸ್ತಕಗಳಾಗಿವೆ. ದ್ವೇಷವು ದೇಶವನ್ನು ಅಭಿವೃದ್ಧಿಯಾಗುವುದನ್ನು ತಡೆಯುತ್ತದೆ, ಪ್ರೀತಿಯು ದೇಶವನ್ನು ಶ್ರೇಷ್ಠಗೊಳಿಸುತ್ತದೆ” ಎಂದಿದ್ದರು. ಇದು ಬಿಹಾರ ಜೆಡಿಯು ನಾಯಕರಲ್ಲಿಯೇ ಒಡಕು ಮೂಡಿಸಿತ್ತು.

Exit mobile version