Site icon Vistara News

Ramcharitmanas Row | ರಾಮಚರಿತಮಾನಸ ವಿವಾದ, ಸಚಿವ ಚಂದ್ರಶೇಖರ್ ನಾಲಗೆ ಕತ್ತರಿಸಿದರೆ 10 ಕೋಟಿ ರೂ. ಬಹುಮಾನ ಘೋಷಣೆ

Ramcharitmanas Row

ಅಯೋಧ್ಯೆ: ರಾಮಾಯಣವನ್ನು ಆಧಾರವಾಗಿ ಇಟ್ಟುಕೊಂಡು ರಚಿತವಾಗಿರುವ, ಹಿಂದೂ ಧರ್ಮದ ಪವಿತ್ರ ಗ್ರಂಥ ರಾಮಚರಿತಮಾನಸವು ಸಮಾಜದದಲ್ಲಿ ದ್ವೇಷವನ್ನು ಹರಡುತ್ತಿದೆ ಎಂದು ಬಿಹಾರ ಶಿಕ್ಷಣ (Ramcharitmanas Row) ಸಚಿವ ಡಾ. ಚಂದ್ರಶೇಖರ್ ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಅದರಲ್ಲೂ, ಅಯೋಧ್ಯೆ ಸಂತರೊಬ್ಬರು, “ಬಿಹಾರ ಶಿಕ್ಷಣ ಸಚಿವ ಚಂದ್ರಶೇಖರ್‌ ಅವರ ನಾಲಗೆ ಕತ್ತರಿಸಿದವರಿಗೆ 10 ಕೋಟಿ ರೂ. ಬಹುಮಾನ ನೀಡಲಾಗುವುದು” ಎಂದು ಘೋಷಿಸಿದ್ದಾರೆ.

“ರಾಮಚರಿತಮಾನಸ ಪುಸ್ತಕದ ಕುರಿತು ಬಿಹಾರ ಸಚಿವ ನೀಡಿದ ಹೇಳಿಕೆಯು ದ್ವೇಷ ಹರಡುವಂತಿದೆ. ಇದರಿಂದ ಇಡೀ ದೇಶದ ಜನರ ಮನಸ್ಸಿಗೆ ಘಾಸಿಯಾಗಿದೆ. ಸನಾತನಿಗಳಿಗೆ ಇದರಿಂದ ಅವಮಾನವಾಗಿದೆ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಒಂದು ವಾರದಲ್ಲಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಹೀಗಾಗದಿದ್ದರೆ, ಕ್ರಮ ತೆಗೆದುಕೊಳ್ಳದಿದ್ದರೆ, ಸಚಿವರ ನಾಲಗೆ ಕತ್ತರಿಸಿದವರಿಗೆ 10 ಕೋಟಿ ರೂ. ನೀಡಲಾಗುವುದು” ಎಂದು ಅಯೋಧ್ಯೆಯ ಜಗದ್ಗುರು ಪರಮಹಂಸ ಆಚಾರ್ಯ ಹೇಳಿದ್ದಾರೆ.

ಸಚಿವ ಹೇಳಿದ್ದೇನು?
“ಮನುಸ್ಮೃತಿ ಮತ್ತು ರಾಮಚರಿತಮಾನಸಗಳು ಸಮಾಜದಲ್ಲಿ ದ್ವೇಷವನ್ನು ಹರಡುವ ಪುಸ್ತಕಗಳಾಗಿವೆ. ಇವು ದಲಿತರು- ಹಿಂದುಳಿದ ಮತ್ತು ಮಹಿಳೆಯರು ಶಿಕ್ಷಣ ಪಡೆಯುವುದನ್ನು ತಡೆಯುತ್ತವೆ. ಮನುಸ್ಮೃತಿ, ರಾಮಚರಿತಮಾನಸ, ಗುರು ಗೋಳ್ವಾಲ್ಕರ್ ಅವರ ಬಂಚ್ ಆಫ್ ಥಾಟ್ಸ್ ಪುಸ್ತಕಗಳು ದ್ವೇಷವನ್ನು ಹರಡುವ ಪುಸ್ತಕಗಳಾಗಿವೆ. ದ್ವೇಷವು ದೇಶವನ್ನು ಅಭಿವೃದ್ಧಿಯಾಗುವುದನ್ನು ತಡೆಯುತ್ತದೆ, ಪ್ರೀತಿಯು ದೇಶವನ್ನು ಶ್ರೇಷ್ಠಗೊಳಿಸುತ್ತದೆ” ಎಂದಿದ್ದರು.

ಇದನ್ನೂ ಓದಿ | Bihar Education Minister | ರಾಮಚರಿತಮಾನಸ, ಮನುಸ್ಮೃತಿಯಿಂದ ಸಮಾಜದಲ್ಲಿ ದ್ವೇಷ: ಬಿಹಾರ ಶಿಕ್ಷಣ ಸಚಿವ

Exit mobile version