ಪಾಟ್ನಾ: ರಾಮಾಯಣ ಆಧರವಾಗಿಟ್ಟುಕೊಂಡು ರಚಿತವಾಗಿರುವ, ಹಿಂದೂ ಧರ್ಮದ ಪವಿತ್ರ ಗ್ರಂಥ ರಾಮಚರಿತಮಾನಸವು ಸಮಾಜದದಲ್ಲಿ ದ್ವೇಷವನ್ನು ಹರಡುತ್ತಿದೆ ಎಂದು ಬಿಹಾರ ಶಿಕ್ಷಣ (Bihar Education Minister) ಸಚಿವ ಡಾ. ಚಂದ್ರಶೇಖರ್ ಅವರು ಹೇಳಿದ್ದಾರೆ. ಶಿಕ್ಷಣ ಸಚಿವರ ಈ ಹೇಳಿಕೆಯು ಭಾರಿ ವಿವಾದಕ್ಕೆ ಕಾರಣವಾಗಿದೆ.
ನಳಂದಾ ಓಪನ್ ವಿವಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿ ಮಾತನಾಡುತ್ತಿದ್ದ ಬಿಹಾರ ಶಿಕ್ಷಣ ಸಚಿವ ಡಾ. ಚಂದ್ರಶೇಖರ್ ಅವರು, ಮನುಸ್ಮೃತಿ ಮತ್ತು ರಾಮಚರಿತಮಾನಸ ಗ್ರಂಥಗಳು ಸಮಾಜವನ್ನು ಒಡೆಯುತ್ತಿವೆ ಎಂದು ಅಭಿಪ್ರಾಯಪಟ್ಟರು.
ಮನುಸ್ಮೃತಿ ಮತ್ತು ರಾಮಚರಿತಮಾನಸಗಳು ಸಮಾಜದಲ್ಲಿ ದ್ವೇಷವನ್ನು ಹರಡುವ ಪುಸ್ತಕಗಳಾಗಿವೆ. ಇವು ದಲಿತರು- ಹಿಂದುಳಿದ ಮತ್ತು ಮಹಿಳೆಯರು ಶಿಕ್ಷಣ ಪಡೆಯುವುದನ್ನು ತಡೆಯುತ್ತವೆ. ಮನುಸ್ಮೃತಿ, ರಾಮಚರಿತಮಾನಸ, ಗುರು ಗೋಳ್ವಾಲ್ಕರ್ ಅವರ ಬಂಚ್ ಆಫ್ ಥಾಟ್ಸ್ ಪುಸ್ತಕಗಳು ದ್ವೇಷವನ್ನು ಹರಡುವ ಪುಸ್ತಕಗಳಾಗಿವೆ. ದ್ವೇಷವು ದೇಶವನ್ನು ಅಭಿವೃದ್ಧಿಯಾಗುವುದನ್ನು ತಡೆಯುತ್ತದೆ, ಪ್ರೀತಿಯು ದೇಶವನ್ನು ಶ್ರೇಷ್ಠಗೊಳಿಸುತ್ತದೆ ಎಂದು ಅವರು ಹೇಳಿದರು.
ರಾಮಚರಿತಮಾನಸ ಕುರಿತು ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಯೋಧ್ಯೆಯ ಧರ್ಮದರ್ಶಿ ಜಗದ್ಗುರು ಪರಮಹಂಸ ಆಚಾರ್ಯ ಅವರು, ಡಾ. ಚಂದ್ರಶೇಖರ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.