Site icon Vistara News

Ranbir Kapoor: ಮೋದಿಯದ್ದು ‘ಆಯಸ್ಕಾಂತದಂಥ ವ್ಯಕ್ತಿತ್ವ’ ಎಂದ ರಣಬೀರ್‌ ಕಪೂರ್;‌ ಕನ್ನಡಿಗನಿಗೆ ನಟ ಹೇಳಿದ ಕತೆ ಏನು?

Ranbir Kapoor

Ranbir Kapoor Hails PM Narendra Modi's Magnetic Charm, Compares Shah Rukh Khan To Him

ಮುಂಬೈ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಭಾರತ ಸೇರಿ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯದ ಹೊರತಾಗಿಯೂ ಮೋದಿ ಅವರ ಶ್ರಮ, ವ್ಯಕ್ತಿತ್ವವನ್ನು ಮೆಚ್ಚುವವರಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ನರೇಂದ್ರ ಮೋದಿ ಅವರ ಕುರಿತು ಬಾಲಿವುಡ್‌ ನಟ ರಣಬೀರ್‌ ಕಪೂರ್‌ (Ranbir Kapoor) ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಜೆರೋದಾ ಸಂಸ್ಥಾಪಕ, ಕನ್ನಡಿಗ ನಿಖಿಲ್‌ ಕಾಮತ್‌ (Nikhil Kamath) ಅವರೊಂದಿಗಿನ ಪಾಡ್‌ಕಾಸ್ಟ್‌ ವೇಳೆ ರಣಬೀರ್‌ ಕಪೂರ್‌ ಅವರು ಮೋದಿ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ರಾಜಕೀಯದ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ನಿಖಿಲ್‌ ಕಾಮತ್‌ ಕೇಳಿದ ಪ್ರಶ್ನೆಗೆ ರಣಬೀರ್‌ ಕಪೂರ್‌ ಉತ್ತರಿಸಿದರು. “ನಾನು ರಾಜಕೀಯದ ಬಗ್ಗೆ ಜಾಸ್ತಿ ಯೋಚಿಸುವುದಿಲ್ಲ. ಆದರೆ, 4-5 ವರ್ಷಗಳ ಹಿಂದೆ ನಾನು ಸೇರಿ ಹಲವು ನಟರು ಹಾಗೂ ನಿರ್ದೇಶಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಹೋಗಿದ್ದೆವು. ನೀವು ಮೋದಿ ಅವರು ಹೇಗೆ ಮಾತನಾಡುತ್ತಾರೆ ಎಂಬುದನ್ನು ಟಿ.ವಿಯಲ್ಲಿ ನೋಡಿರುತ್ತೀರಿ. ನಮಗೂ ಕೂಡ ಅವರ ಆಯಸ್ಕಾಂತದಂತಹ ವ್ಯಕ್ತಿತ್ವದ ಅರಿವಾಯಿತು” ಎಂಬುದಾಗಿ ರಣಬೀರ್‌ ಕಪೂರ್‌ ಹೇಳಿದರು.

“ನಾವು ಅವರನ್ನು ಭೇಟಿಯಾಗಲು ಹೋಗಿದ್ದೆವು. ನಾವು ಕುಳಿತಿದ್ದಾಗ ಅವರು ಬಂದು ನಮ್ಮ ಜತೆ ಕುಳಿತರು. ಅವರು ಪ್ರತಿಯೊಬ್ಬರ ಜತೆಗೂ ಮಾತನಾಡಿದರು. ಪ್ರತಿಯೊಬ್ಬರ ವೈಯಕ್ತಿಕ ವಿಚಾರಗಳ ಬಗ್ಗೆ ಕೇಳಿದರು. ಆಗ ನನ್ನ ತಂದೆಯು ಚಿಕಿತ್ಸೆ ಪಡೆಯುತ್ತಿದ್ದರು. ಅದರ ಬಗ್ಗೆಯೂ ಮೋದಿ ಅವರು ಕೇಳಿದರು. ವಿಕ್ಕಿ ಕೌಶಲ್‌, ಕಿರಣ್‌ ಜೋಹರ್‌ ಸೇರಿ ಹಲವರ ವೈಯಕ್ತಿಕ ವಿಚಾರಗಳ ಕುರಿತು ಕೂಡ ಮೋದಿ ಮಾತನಾಡಿದರು. ಅದ್ಭುತ ವ್ಯಕ್ತಿಗಳು, ಸಾಧಕರು ಮಾತ್ರ ಇಷ್ಟೊಂದು ಶ್ರಮ ವಹಿಸಲು ಸಾಧ್ಯ. ಶಾರುಖ್‌ ಖಾನ್‌ ಸೇರಿ ಹಲವು ಸಾಧಕರು ಇಷ್ಟು ಶ್ರಮ ಹಾಕಲು ಸಾಧ್ಯ” ಎಂಬುದಾಗಿ ರಣಬೀರ್‌ ಕಪೂರ್‌ ಅವರು ಮೋದಿ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ನಿಖಿಲ್‌ ಕಾಮತ್‌ ಕೂಡ ಬಣ್ಣನೆ

ನರೇಂದ್ರ ಮೋದಿ ಅವರ ಜತೆಗೆ ಸಮಯ ಕಳೆದ ಅನುಭವದ ಕುರಿತು ನೀವು ಹೇಳಿ ಎಂಬುದಾಗಿ ರಣಬೀರ್‌ ಕಪೂರ್‌ ಅವರು ಕೇಳಿದಾಗ ನಿಖಿಲ್‌ ಕಾಮತ್‌ ಕೂಡ ಮೋದಿ ಬಗ್ಗೆ ಮೆಚ್ಚಗೆಯ ಮಾತುಗಳನ್ನಾಡಿದ್ದರು. “ನರೇಂದ್ರ ಮೋದಿ ಅವರ ಜತೆ ಎರಡು ಕಾರ್ಯಕ್ರಮಗಳಲ್ಲಿ ಭಾಗಿಯಾದೆ. ನಾವು ಅಮೆರಿಕದಲ್ಲಿದ್ದಾಗ ಮೋದಿ ಅವರು ನಿರಂತರವಾಗಿ ಕಾರ್ಯಕ್ರಮಗಳಲ್ಲಿ ಭೇಟಿಯಾಗುತ್ತಿದ್ದರು. ಅವರು ಬೆಳಗ್ಗೆಯಿಂದ ರಾತ್ರಿವರೆಗೆ ಒಂದಲ್ಲ ಒಂದು ಕಾರ್ಯಕ್ರಮ, ಚಟುವಟಿಕೆಯಲ್ಲಿ ತೊಡಗಿರುತ್ತಿದ್ದರು. ಅವರ ವಯಸ್ಸಿನಲ್ಲಿ, ಅವರಷ್ಟು ಶ್ರಮ ವಹಿಸುವುದು ನನಗೆ ಅಚ್ಚರಿಯಾಯಿತು. ಅವರು ಕೂಡ ನನಗೆ ಸ್ಫೂರ್ತಿ” ಎಂದು ನಿಖಿಲ್‌ ಕಾಮತ್‌ ತಿಳಿಸಿದ್ದಾರೆ.

ಇದನ್ನೂ ಓದಿ: Manu Bhaker : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಮನು ಭಾಕರ್ ಗೆ ಪ್ರಧಾನಿ ಮೋದಿ ಅಭಿನಂದನೆ

Exit mobile version