Site icon Vistara News

Randeep Hooda: ಸಾವರ್ಕರ್‌ ಪಾತ್ರಧಾರಿ ರಣದೀಪ್ ಹೂಡಾಗೆ ಬಿಜೆಪಿ ಲೋಕಸಭೆ ಟಿಕೆಟ್?

Randeep Hooda

Randeep Hooda likely to contest Lok Sabha Polls as BJP candidate from Rohtak: Sources

ನವದೆಹಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸೇರಿ ಸಕಲ ಪಕ್ಷಗಳು ರಣತಂತ್ರ ರೂಪಿಸುತ್ತಿವೆ. ಚುನಾವಣೆ ಪ್ರಚಾರ, ಅಭ್ಯರ್ಥಿಗಳ ಆಯ್ಕೆ ಸೇರಿ ಹಲವು ರೀತಿಯ ಕಸರತ್ತು ನಡೆಸುತ್ತಿವೆ. ಬಿಜೆಪಿಯು ಈಗಾಗಲೇ 195 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಗೆಲ್ಲುವ ಕುದುರೆಗಳಿಗೆ ಹೆಚ್ಚಿನ ಮಣೆ ಹಾಕುತ್ತಿದೆ. ಇನ್ನು, ‘ಸ್ವತಂತ್ರ ವೀರ ಸಾವರ್ಕರ್’ (Swatantrya Veer Savarkar)‌ ಸಿನಿಮಾದಲ್ಲಿ ವೀರ ಸಾವರ್ಕರ್‌ ಪಾತ್ರ ನಿರ್ವಹಿಸಿರುವ ನಟ ರಣದೀಪ್‌ ಹೂಡಾ (Randeep Hooda) ಅವರು ಕೂಡ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಸ್ಪರ್ಧಿಸಲಿದ್ದು, ಬಿಜೆಪಿ ಅವರಿಗೆ ಟಿಕೆಟ್‌ ನೀಡಲಿದೆ ಎಂದು ಹೇಳಲಾಗುತ್ತಿದೆ.

ಹರಿಯಾಣದ ರೋಹ್ಟಕ್‌ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ರಣದೀಪ್‌ ಹೂಡಾ ಅವರು ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ. ರಣದೀಪ್‌ ಹೂಡಾ ಅವರು ಹರಿಯಾಣದ ರೋಹ್ಟಕ್‌ನವರಾಗಿದ್ದು, ವೀರ ಸಾವರ್ಕರ್‌ ಸಿನಿಮಾ ಅವರಿಗೆ ಹೆಚ್ಚಿನ ಖ್ಯಾತಿ ತಂದುಕೊಡುತ್ತಿದೆ. ಅದರಲ್ಲೂ, ರಣದೀಪ್‌ ಹೂಡಾ ಹಾಗೂ ಬಿಜೆಪಿ ವಿಚಾರಗಳ ಮಧ್ಯೆ ಸಾಮ್ಯತೆ ಇರುವುದರಿಂದ ಬಿಜೆಪಿಯ ಹಿರಿಯ ನಾಯಕರು ರಣದೀಪ್‌ ಹೂಡಾ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ರೋಹ್ಟಕ್‌ ಲೋಕಸಭೆ ಕ್ಷೇತ್ರದ ಮೇಲೆ ಬಿಜೆಪಿಯು ಹಿಡಿತ ಸಾಧಿಸಿದೆ. ಬಿಜೆಪಿಯ ಅರವಿಂದ್‌ ಶರ್ಮಾ ಅವರು 2019ರಿಂದ ರೋಹ್ಟಕ್‌ ಸಂಸದರಾಗಿದ್ದಾರೆ. ಇವರು 2019ರಲ್ಲಿ ಕಾಂಗ್ರೆಸ್‌ನ ದೀಪೇಂದರ್‌ ಹೂಡಾ ಅವರನ್ನು ಸೋಲಿಸಿದ್ದರು. ರೋಹ್ಟಕ್‌ ಕ್ಷೇತ್ರದಲ್ಲಿ ಬಿಜೆಪಿಯು ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿದೆ. ಅದರಲ್ಲೂ, ಕ್ಷೇತ್ರದಲ್ಲಿ ಜಾಟ್‌ ಸಮುದಾಯದವರ ಪ್ರಾಬಲ್ಯ ಹೆಚ್ಚಾಗಿದ್ದು, ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಲಿದ್ದಾರೆ. ಇನ್ನು, ರಣದೀಪ್‌ ಹೂಡಾ ಅವರು ಕೂಡ ಜಾಟ್‌ ಸಮುದಾಯಕ್ಕೆ ಸೇರಿರುವ ಕಾರಣ ಬಿಜೆಪಿ ಸುಲಭವಾಗಿ ಗೆಲುವು ಸಾಧಿಸಲಿದೆ ಎಂಬುದು ಪಕ್ಷದ ನಾಯಕರ ಲೆಕ್ಕಾಚಾರ ಎನ್ನಲಾಗಿದೆ.

ಇದನ್ನೂ ಓದಿ: Harsh Vardhan: ಬಿಜೆಪಿ ಟಿಕೆಟ್‌ ನಿರಾಕರಣೆ; ರಾಜಕೀಯವನ್ನೇ ತೊರೆದ ಹರ್ಷವರ್ಧನ್!

ಹರಿಯಾಣದಲ್ಲಿ ಬಿಜೆಪಿಯು ಗೆಲ್ಲುವ ಉತ್ಸಾಹದಲ್ಲಿದೆ. ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಜೆಪಿ ಜತೆಗೂಡಿ ಮೈತ್ರಿ ಸರ್ಕಾರ ರಚಿಸಿವೆ. 2019ರ ಲೋಕಸಭೆ ಚುನಾವಣೆಯಲ್ಲಿ ಹರಿಯಾಣದ ಎಲ್ಲ 10 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಬಾರಿಯೂ ಕ್ಲೀನ್‌ ಸ್ವೀಪ್‌ ಮಾಡುವುದು ಬಿಜೆಪಿ ಉದ್ದೇಶವಾಗಿದೆ. ಅದಕ್ಕಾಗಿಯೇ ರಣದೀಪ್‌ ಹೂಡಾ ಅವರನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ತಿಳಿದುಬಂದಿದೆ. ರಣದೀಪ್‌ ಹೂಡಾ ಅವರು ನಟಿಸಿರುವ ಸ್ವತಂತ್ರ ವೀರ ಸಾವರ್ಕರ್‌ ಸಿನಿಮಾ ಮಾರ್ಚ್‌ 22ರಂದು ಬಿಡುಗಡೆಯಾಗಲಿದೆ. ಈಗಾಗಲೇ ಟ್ರೇಲರ್‌ ಬಿಡುಗಡೆಯಾಗಿದ್ದು, ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version