ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನ ನೂತನ ಮೂರ್ತಿಯ (Ram Lalla New Idol) ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದ್ದು, ಇದಕ್ಕಾಗಿ ನೇಪಾಳದಿಂದ ವಿಶೇಷ ಶಿಲೆಗಳನ್ನು ತರಿಸಲಾಗುತ್ತಿದೆ. ಸದ್ಯ ಇರುವ ರಾಮಲಲ್ಲಾನ ಮೂರ್ತಿಯು ಚಿಕ್ಕದಾಗಿದ್ದು, ಭಕ್ತರಿಗೆ 19 ಅಡಿ ದೂರದಿಂದ ಕಾಣಿಸುತ್ತಿಲ್ಲ. ಹಾಗಾಗಿ, ನೂತನ ಮೂರ್ತಿಯನ್ನು 3 ಅಡಿ ಎತ್ತರದಲ್ಲಿ ಕೆತ್ತಿಸಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತೀರ್ಮಾನಿಸಿದೆ.
ನೇಪಾಳದ ವಿಶೇಷ ಶಿಲೆಗಳ ರವಾನೆ
ನೇಪಾಳದ ಗಂಡಕಿ ನದಿಯ ಬಳಿ ಎರಡು ವಿಶೇಷ ಶಿಲೆಗಳು ಸಿಕ್ಕಿವೆ. ಮುಸ್ತಂಗ್ ಜಿಲ್ಲೆಯ ಸಾಲಿಗ್ರಾಮ ಅಥವಾ ಮುಕ್ತಿನಾಥ ಪ್ರದೇಶಕ್ಕೆ ಸಮೀಪವಿರುವ ನದಿಯಲ್ಲಿ ಶಿಲೆಗಳು ದೊರಕಿದ್ದು, ಇವುಗಳನ್ನು ವಿಷ್ಣುವಿನ ಸ್ವರೂಪ ಎಂದೇ ಪರಿಗಣಿಸಲಾಗುತ್ತದೆ. ಹಾಗಾಗಿ, ರಾಮ ಲಲ್ಲಾನ ಮೂರು ಅಡಿ ಮೂರ್ತಿಯನ್ನು ನಿರ್ಮಿಸಲು ಇಲ್ಲಿಂದ ಎರಡು ಶಿಲೆಗಳನ್ನು ತರಿಸಲಾಗುತ್ತಿದೆ.
6 ಕೋಟಿ ವರ್ಷಗಳ ಇತಿಹಾಸ
ಗಂಡಕಿ ನದಿಯ ಸಾಲಿಗ್ರಾಮದ ಶಿಲೆಗಳು 6 ಕೋಟಿ ಇತಿಹಾಸ ಹೊಂದಿವೆ. ಒಂದು ಕಲ್ಲು 26 ಟನ್ ಇದ್ದರೆ, ಮತ್ತೊಂದು 14 ಟನ್ ಇರುತ್ತದೆ. ಫೆಬ್ರವರಿ 1ರಂದು ಶಿಲೆಗಳು ಅಯೋಧ್ಯೆಗೆ ತಲುಪಲಿವೆ. ಬಳಿಕ ಅವುಗಳನ್ನು ಮೂರ್ತಿಯಾಗಿ ಕೆತ್ತಲಾಗುತ್ತದೆ. “ವಿಶ್ವ ಹಿಂದು ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ರಾಜೇಂದ್ರ ಸಿಂಗ್ ಪಂಕಜ್ ಅವರು ಶಿಲೆಗಳನ್ನು ತರಿಸುವ ಉಸ್ತುವಾರಿ ವಹಿಸಿಕೊಂಡಿದ್ದು, ಶಿಲೆಗಳ ಜತೆ ಅವರು ಪ್ರಯಾಣ ಆರಂಭಿಸಿದ್ದಾರೆ. ಎರಡೂ ಶಿಲೆಗಳು ಗುರುವಾರ ಅಯೋಧ್ಯೆಗೆ ತಲುಪುವ ಸಾಧ್ಯತೆ ಇದೆ” ಎಂದು ಟ್ರಸ್ಟ್ ಕಚೇರಿ ಉಸ್ತುವಾರಿ ಪ್ರಕಾಶ್ ಗುಪ್ತಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Ram Mandir | 2024ರ ಜನವರಿಯಲ್ಲಿ ಭಕ್ತರಿಗೆ ರಾಮಮಂದಿರ ಮುಕ್ತ, ಅಮಿತ್ ಶಾ ಮಹತ್ವದ ಘೋಷಣೆ