Site icon Vistara News

Jitan Ram Manjhi: ರಾಮಾಯಣ ಕಾಲ್ಪನಿಕ, ರಾಮನಿಗಿಂತ ರಾವಣ ಶ್ರೇಷ್ಠ; ವಿವಾದ ಸೃಷ್ಟಿಸಿದ ಬಿಹಾರ ಮಾಜಿ ಸಿಎಂ

Jitan Ram Manjhi

Jitan Ram Manjhi

ಪಟನಾ: ರಾಮಾಯಣವನ್ನು (Ramayana) ಆಧಾರವಾಗಿಟ್ಟುಕೊಂಡು ರಚಿತವಾಗಿರುವ, ಹಿಂದೂ ಧರ್ಮದ ಪವಿತ್ರ ಗ್ರಂಥ ರಾಮಚರಿತಮಾನಸವು (Ramcharitmanas) ಸಮಾಜದದಲ್ಲಿ ದ್ವೇಷವನ್ನು ಹರಡುತ್ತಿದೆ ಎಂದು ಹೇಳಿ ಬಿಹಾರ ಶಿಕ್ಷಣ ಸಚಿವ ಡಾ. ಚಂದ್ರಶೇಖರ್ ಅವರು ಕೆಲ ದಿನಗಳ ಹಿಂದೆ ವಿವಾದ ಸೃಷ್ಟಿಸಿದ್ದರು. ಈಗ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್‌ ರಾಮ್‌ ಮಾಂಝಿ (Jitan Ram Manjhi) ಅವರೂ ತುಳಸಿದಾಸರು ರಚಿಸಿರುವ ರಾಮಚರಿತಮಾನಸದ ಕುರಿತು ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದೆ.

“ರಾಮಾಯಣವು ಪೌರಾಣಿಕ ಸೃಷ್ಟಿಯಾಗಿದೆ. ಹಾಗೆ ನೋಡಿದರೆ, ಕಾಲ್ಪನಿಕ ಕತೆಯಲ್ಲಿಯೂ ರಾವಣನು ರಾಮನಿಗಿಂತ ಹೆಚ್ಚಿನ ಬೌದ್ಧಿಕ ಸಾಮರ್ಥ್ಯ ಹೊಂದಿದ್ದ. ನಾವು ರಾಮಾಯಣದ ಬಗ್ಗೆ ಮಾತನಾಡುವ ಜತೆಗೆ ರಾವಣನು ರಾಮನಿಗಿಂತ ಹೆಚ್ಚು ಪರಿಶ್ರಮಿಯಾಗಿದ್ದ, ಶ್ರೇಷ್ಠನಾಗಿದ್ದ ಎಂಬುದನ್ನು ಗಮನಿಸಬೇಕು. ಹಾಗೆಯೇ, ಕಾಲ್ಪನಿಕ ಪಾತ್ರಗಳಾದ ರಾಮ ಹಾಗೂ ರಾವಣರ ಬಗ್ಗೆ ಹೆಚ್ಚು ಮಾತನಾಡುವ ಬದಲು ಬಿಜೆಪಿಯು ಬಡವರ ಬಗ್ಗೆ ಹೆಚ್ಚು ಮಾತನಾಡಬೇಕು” ಎಂದು ಹೇಳಿದ್ದಾರೆ.

ಜಿತನ್‌ ರಾಮ್‌ ಮಾಂಝಿ ಅವರು ಹಿಂದೂಸ್ತಾನಿ ಅವಾಮ್‌ ಮೋರ್ಚಾ ನಾಯಕರೂ ಆಗಿದ್ದು, ಇವರ ಪಕ್ಷವು ರಾಜ್ಯದಲ್ಲಿ ಆಡಳಿತಾರೂಢ ಮಹಾಘಟಬಂಧನ್‌ ಸರ್ಕಾರದ ಭಾಗವಾಗಿದೆ. ಕೆಲ ದಿನಗಳ ಹಿಂದೆ ರಾಜ್ಯ ಸಚಿವ ಡಾ.ಚಂದ್ರಶೇಖರ್‌ ಅವರೂ ರಾಮಚರಿತಮಾನಸದ ಬಗ್ಗೆ ಮಾತನಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಈಗ ಜಿತನ್‌ ರಾಮ್‌ ಮಾಂಝಿ ಅವರೂ ವಿವಾದ ಸೃಷ್ಟಿಸಿದ್ದಾರೆ.

ವಾಲ್ಮೀಕಿಗಿಂತ ತುಳಸಿದಾಸರಿಗೆ ಹೆಚ್ಚು ಗೌರವ

“ರಾಮಾಯಣವನ್ನು ಮೊದಲು ರಚಿಸಿದವರು ವಾಲ್ಮೀಕಿ. ಆದರೆ, ನಂತರ ರಾಮಾಯಣ ರಚಿಸಿದ ತುಳಸಿದಾರನ್ನು ವಾಲ್ಮೀಕಿ ಅವರಿಗಿಂತ ಹೆಚ್ಚಾಗಿ ಗೌರವದಿಂದ ಕಾಣಲಾಗುತ್ತದೆ. ನಾನು ರಾಮಚರಿತಮಾನಸ ಗ್ರಂಥವನ್ನು ಗೌರವಿಸುತ್ತೇನೆ. ಆದರೆ, ಅದರಲ್ಲಿ ಸಾಮಾಜಿಕ ತಾರತಮ್ಯವೂ ಇದೆ ಎಂಬುದನ್ನು ಮರೆಯಬಾರದು” ಎಂದು ಸುದ್ದಿಗಾರರ ಜತೆ ಮಾತನಾಡುವಾಗ ಪ್ರಸ್ತಾಪಿಸಿದ್ದಾರೆ.

ಮಾಂಝಿ ವಿರುದ್ಧ ಬಿಜೆಪಿ ಆಕ್ರೋಶ

ರಾಮಾಯಣ, ರಾಮ, ರಾವಣ ಹಾಗೂ ರಾಮಚರಿತ ಮಾನಸದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಜಿತನ್‌ ರಾಮ್‌ ಮಾಂಝಿ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. “ಹಿಂದು ಧರ್ಮದ ಕುರಿತು ಅವಹೇಳನಕಾರಿಯಾಗಿ ಮಾತನಾಡುವುದು, ಅವಮಾನ ಮಾಡುವುದು ಆರ್‌ಜೆಡಿ, ಸಮಾಜವಾದಿ ಪಕ್ಷಗಳು ಸೇರಿ ಹಲವು ಪಕ್ಷಗಳ ನಾಯಕರಿಗೆ ರೂಢಿಯಾಗಿದೆ. ಈಗ ಜಿತನ್‌ ರಾಮ್‌ ಮಾಂಝಿ ಅವರೂ ಹಿಂದು ವಿರೋಧಿ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ. ಹಿಂದುಗಳ ಭಾವನೆಗಳಿಗೆ ಧಕ್ಕೆ ತರುವುದೇ ಇವರ ಉದ್ದೇಶ” ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಖಿಲ್‌ ಆನಂದ್‌ ಹೇಳಿದ್ದಾರೆ.

ಇದನ್ನೂ ಓದಿ: Ramcharitmanas Row | ಬಿಹಾರದಲ್ಲಿ ಆರ್​ಜೆಡಿ-ಜೆಡಿಯು ಮಧ್ಯೆ ಬಿರುಕು ಮೂಡಿಸಿದ ರಾಮಚರಿತಮಾನಸ ವಿವಾದ

Exit mobile version