Site icon Vistara News

Re-NEET: ನೀಟ್-ಯುಜಿ 2024 ವಿವಾದ; ಇಡೀ ಪರೀಕ್ಷೆಯ ಪಾವಿತ್ರ್ಯತೆಯ ಮೇಲೆ ಪರಿಣಾಮ ಬೀರಿದ್ದರೆ ಮಾತ್ರ ರಿಟೆಸ್ಟ್‌ ಎಂದ ಸುಪ್ರೀಂ ಕೋರ್ಟ್‌

Re-NEET

Re-NEET

ನವದೆಹಲಿ: ನೀಟ್-ಯುಜಿ 2024 (NEET UG 2024) ವಿವಾದಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme Court) ಅಕ್ರಮ ಇಡೀ ಪರೀಕ್ಷೆಯ ಮೇಲೆ ಪರಿಣಾಮ ಬೀರಿದೆ ಎಂದು ದೃಢಪಟ್ಟರೆ ಮಾತ್ರ ಮರು ಪರೀಕ್ಷೆ (Re-NEET) ಮಾಡಬಹುದು ಎಂದು ಹೇಳಿದೆ.

“ಇಡೀ ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ದೃಢವಾದರೆ ಮಾತ್ರ ಮರುಪರೀಕ್ಷೆ ನಡೆಸಬಹುದು” ಎಂದು ಸಿಜೆಐ (Chief Justice of India) ಡಿ.ವೈ.ಚಂದ್ರಚೂಡ್ ತಿಳಿಸಿದರು. “ವಿವಾದ ಬಗ್ಗೆ ಸಿಬಿಐ ತನಿಖೆ ನಡೆಯುತ್ತಿದೆ. ಸಿಬಿಐ ನಮಗೆ ಹೇಳಿದ್ದನ್ನೆಲ್ಲ ಬಹಿರಂಗಪಡಿಸಿದರೆ, ಅದು ತನಿಖೆಯ ಮೇಲೆ ಪರಿಣಾಮ ಬೀರುತ್ತದೆ” ಎಂದು ನ್ಯಾಯಪೀಠ ಹೇಳಿದೆ.

ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವ್ಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು ವಿವಾದಾತ್ಮಕ ನೀಟ್-ಯುಜಿ 2024ಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಗುರುವಾರ ಆರಂಭಿಸಿತು. ನಾವು ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತಿದ್ದೇವೆ. ಲಕ್ಷಾಂತರ ಯುವ ವಿದ್ಯಾರ್ಥಿಗಳು ಇದಕ್ಕಾಗಿ ಕಾಯುತ್ತಿದ್ದಾರೆ ನ್ಯಾಯಪೀಠ ಹೇಳಿದೆ. ಮೇ 5ರಂದು ಆಯೋಜಿಸಿದ್ದ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಅರ್ಜಿದಾರರಿಗೆ ಸೂಚಿಸಿದೆ.

“ಪ್ರಶ್ನೆ ಪತ್ರಿಕೆ ಸೋರಿಕೆಯು ತುಂಬಾ ವ್ಯವಸ್ಥಿತವಾಗಿದೆ ಮತ್ತು ಪರೀಕ್ಷೆಯನ್ನು ರದ್ದುಗೊಳಿಸಬೇಕಾದ ರೀತಿಯಲ್ಲಿ ದೇಶಾದ್ಯಂತ ಪರೀಕ್ಷೆಯ ಮೇಲೆ ಪರಿಣಾಮ ಬೀರಿದೆ ಎನ್ನುವುದನ್ನು ಸಾಬೀತುಪಡಿಸಿ. ಒಂದುವೇಳೆ ನಾವು ಮರು ಪರೀಕ್ಷೆಗೆ ಒಪ್ಪದಿದ್ದರೆ ಬೇರೆ ಯಾವ ತನಿಖೆಯ ಅಗತ್ಯವಿದೆ ಎಂದು ತಿಳಿಯಲು ಬಯಸುತ್ತೇವೆ” ಎಂದು ನ್ಯಾಯಪೀಠ ತಿಳಿಸಿದೆ.

ಒಂದು ಲಕ್ಷ ವಿದ್ಯಾರ್ಥಿಗಳು ಮರುಪರೀಕ್ಷೆ ಬಯಸುತ್ತಾರೆ ಅಥವಾ ಪ್ರವೇಶ ಪಡೆದಿಲ್ಲ ಎಂಬ ಕಾರಣಕ್ಕೆ ಮರು ಪರೀಕ್ಷೆಗೆ ಆದೇಶಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಸಿಜೆಐ ಡಿ.ವೈ.ಚಂದ್ರಚೂಡ್, ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆಯಾದರೆ ಮಾತ್ರ ಇದು ಸಾಧ್ಯ ಎಂದು ಹೇಳಿದರು.

ಏತನ್ಮಧ್ಯೆ ನೀಟ್‌ಗಾಗಿ ಡೇಟಾ ವಿಶ್ಲೇಷಣೆ ಮಾಡಿದ ಮತ್ತು ಪರೀಕ್ಷೆಗೆ ಕ್ಲೀನ್ ಚಿಟ್ ನೀಡಿದ ಐಐಟಿ ಮದ್ರಾಸ್‌ನ ನಿರ್ದೇಶಕರು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯ ಆಡಳಿತ ಮಂಡಳಿಯಲ್ಲಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದರು. ಆದರೆ ಸರ್ಕಾರ ಇದನ್ನು ನಿರಾಕರಿಸಿದೆ. ವರದಿಯನ್ನು ಸಿದ್ಧಪಡಿಸಿದವರು ಎಂದಿಗೂ ಎನ್‌ಟಿಎಎಯ ಭಾಗವಾಗಿರಲಿಲ್ಲ ಎಂದು ತಿಳಿಸಿದೆ. ಕಳೆದ ವಾರ ಕೇಂದ್ರವು ಮರು ಪರೀಕ್ಷೆಯನ್ನು ವಿರೋಧಿಸಿದ ಅಫಿಡವಿಟ್‌ ಸಲ್ಲಿಸಿ, ಐಐಟಿ ಮದ್ರಾಸ್‌ನ ದತ್ತಾಂಶ ವಿಶ್ಲೇಷಣೆಯು ನೀಟ್‌ ಯುಜಿಯಲ್ಲಿ ಸಾಮೂಹಿಕ ದುಷ್ಕೃತ್ಯ ನಡೆದಿಲ್ಲ ಎಂದು ಉಲ್ಲೇಖಿಸಿದೆ ಎಂದು ಹೇಳಿತ್ತು.

ದೇಶಾದ್ಯಂತ 571 ನಗರಗಳಲ್ಲಿ ಹಾಗೂ ಹೊರಗಿನ 14 ನಗರಗಳು ಸೇರಿದಂತೆ 4750 ವಿವಿಧ ಕೇಂದ್ರಗಳಲ್ಲಿ 2024ರ ಮೇ 5ರಂದು ನೀಟ್‌ ಯುಜಿ ಪರೀಕ್ಷೆಯನ್ನು ನಡೆಸಲಾಗಿತ್ತು. ನೀಟ್‌ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದ 67 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಗ್ರೇಸ್‌ ಮಾರ್ಕ್ಸ್‌ ಆಧಾರದ ಮೇಲೆ ಟಾಪರ್‌ಗಳಾಗಿದ್ದರು. ಇನ್ನು, ಹರಿಯಾಣದಲ್ಲಿ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ಆರು ವಿದ್ಯಾರ್ಥಿಗಳು ಜಂಟಿಯಾಗಿ ಟಾಪ್‌ ಸ್ಥಾನ ಪಡೆದಿದ್ದಾರೆ. ಇದರಿಂದಾಗಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ, ಪ್ರಶ್ನೆಪತ್ರಿಕೆ ಸೋರಿಕೆ ಮಾಡಲಾಗಿದೆ ಎಂಬುದಾಗಿ ಕೆಲವು ಪೋಷಕರು ಆರೋಪ ಮಾಡಿದ್ದಾರೆ. ಗ್ರೇಸ್‌ ಮಾರ್ಕ್ಸ್‌ ಪಡೆದ 1,500 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯನ್ನೂ ನಡೆಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಮಾಸ್ಟರ್‌ ಮೈಂಡ್‌ ಅಮಿತ್‌ ಆನಂದ್‌ ಸೇರಿ ಹಲವರನ್ನು ಬಂಧಿಸಲಾಗಿದ್ದು, ಕ್ಷಿಪ್ರವಾಗಿ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: NEET UG 2024: ನೀಟ್‌ ಪರೀಕ್ಷೆ ವೇಳೆ ಸಾಮೂಹಿಕ ನಕಲು ನಡೆದಿಲ್ಲ, ಮರುಪರೀಕ್ಷೆ ಬೇಕಿಲ್ಲ; ಸುಪ್ರೀಂ ಕೇಂದ್ರ ಸ್ಪಷ್ಟನೆ

Exit mobile version