ನವದೆಹಲಿ: “ಜಮ್ಮು-ಕಾಶ್ಮೀರದಲ್ಲಿ ಯಾವ ಸಮಯದಲ್ಲಿ ಬೇಕಾದರೂ ವಿಧಾನಸಭೆ ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ” ಎಂದು ಸುಪ್ರೀಂ ಕೋರ್ಟ್‌ಗೆ (Supreme Court) ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಜಮ್ಮು-ಕಾಶ್ಮೀರಕ್ಕೆ (Jammu Kashmir) ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ (Article 370) ರದ್ದು ತೀರ್ಮಾನ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
“ಜಮ್ಮು-ಕಾಶ್ಮೀರಕ್ಕೆ ಅನ್ವಯವಾಗುತ್ತಿದ್ದ 370ನೇ ವಿಧಿ ರದ್ದುಗೊಳಿಸಿದ ಬಳಿಕ ಕಣಿವೆಯಲ್ಲಿ ಕಲ್ಲುತೂರಾಟದ ಪ್ರಕರಣಗಳು ಶೇ.97.2ರಷ್ಟು ಕಡಿಮೆಯಾಗಿವೆ. ದಾಳಿಗೆ ಭದ್ರತಾ ಸಿಬ್ಬಂದಿ ಹುತಾತ್ಮರಾಗುವುದು ಶೇ.65.9ರಷ್ಟು ಕುಂಠಿತವಾಗಿದೆ. ಹಾಗೆಯೇ, ಕಣಿವೆಯಲ್ಲಿ ಸ್ಥಳೀಯ ಸಂಸ್ಥೆ, ವಿಧಾನಸಭೆ ಸೇರಿ ಮೂರು ಚುನಾವಣೆ ಬಾಕಿ ಇವೆ. ಯಾವಾಗ ಬೇಕಾದರೂ ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದೆ” ಎಂದು ಸುಪ್ರೀಂ ಕೋರ್ಟ್‌ಗೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು.
ರಾಜ್ಯ ಸ್ಥಾನಮಾನದ ಬಗ್ಗೆ ಹೇಳಿದ್ದೇನು?
ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡುವ ಕುರಿತು ಕೇಂದ್ರ ಸರ್ಕಾರ ಕಾಲಮಿತಿ ಹಾಗೂ ಚೌಕಟ್ಟು ರೂಪಿಸಬೇಕು ಎಂದು ಅಟಾರ್ನಿ ಜನರಲ್ ಹಾಗೂ ಸಾಲಿಸಿಟರ್ ಜನರಲ್‌ಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಇದಕ್ಕೆ ಸಾಲಿಸಿಟರ್ ಜನರಲ್ ಉತ್ತರ ನೀಡಿದ್ದು, “ಇಂತಿಷ್ಟೇ ಸಮಯದಲ್ಲಿ ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡಲಾಗುತ್ತದೆ ಎಂದು ಹೇಳಲು ಆಗುವುದಿಲ್ಲ. ಆದರೆ, ಪೂರ್ಣ ರಾಜ್ಯ ಸ್ಥಾನಮಾನ ನೀಡುವ ಕುರಿತು ಚಿಂತನೆ ನಡೆಯುತ್ತಿದೆ” ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: Article 370: ರಸ್ತೆ ಮೇಲೆ ಯೋಧರ ನೆತ್ತರು ಹರಿದಿದ್ದೇ 370 ವಿಧಿ ರದ್ದುಗೊಳಿಸಲು ಕಾರಣ; ಸುಪ್ರೀಂಗೆ ಕೇಂದ್ರ ಸ್ಪಷ್ಟನೆ
ಕೇಂದ್ರ ಸರ್ಕಾರವು 2019ರ ಆಗಸ್ಟ್ 5ರಂದು 370ನೇ ವಿಧಿ ರದ್ದುಗೊಳಿಸಿದೆ. ಇದನ್ನು ಪ್ರಶ್ನಿಸಿ 23 ಅರ್ಜಿಗಳು ಸಲ್ಲಿಕೆಯಾದ ಕಾರಣ ಎಲ್ಲ ಅರ್ಜಿಗಳ ವಿಚಾರಣೆಯನ್ನು ಪ್ರತಿದಿನ ನಡೆಸಲಾಗುತ್ತಿದೆ. ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜಯ್ ಖನ್ನಾ, ಬಿ.ಆರ್.ಗವಾಯಿ ಹಾಗೂ ಸೂರ್ಯಕಾಂತ್ ಅವರಿರುವ ಪಂಚ ಸದಸ್ಯರ ಪೀಠವು ಪ್ರತಿದಿನ ವಿಚಾರಣೆ ನಡೆಸುತ್ತಿದೆ.