ನವದೆಹಲಿ: ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಕಾರಣ ಅವರು ಲೋಕಸಭೆಯಿಂದ (Rahul Gandhi Disqualified) ಅನರ್ಹಗೊಂಡಿದ್ದಾರೆ. ಇದರ ಬೆನ್ನಲ್ಲೇ, ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಅಂತ್ಯ ಎಂದೇ ಹೇಳುತ್ತಿದ್ದಾರೆ. ಕಾಂಗ್ರೆಸ್ ಹೊರತಾಗಿ ಬೇರೆ ಪಕ್ಷಗಳು ಕೂಡ ರಾಹುಲ್ ಗಾಂಧಿ ಪರ ಮಾತನಾಡುತ್ತಿವೆ. ಇದರ ಮಧ್ಯೆಯೇ, ರಾಹುಲ್ ಗಾಂಧಿ ಅವರು ಅನರ್ಹತೆ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ್ದು, “ನಾನು ಎಲ್ಲದಕ್ಕೂ ಸಿದ್ಧ” ಎಂಬ ಸಂದೇಶ ರವಾನಿಸಿದ್ದಾರೆ.
ಎರಡು ಸಾಲಿನ ಟ್ವೀಟ್ ಮಾಡಿರುವ ಅವರು, “ನಾನು ಭಾರತೀಯರ ಧ್ವನಿ ಪರವಾಗಿ ಹೋರಾಡುತ್ತಿದ್ದೇನೆ. ನಾನು ಎಲ್ಲದಕ್ಕೂ ಸಿದ್ಧ” ಎಂದು ಹೇಳಿದ್ದಾರೆ. ಆ ಮೂಲಕ ಮುಂಬರುವ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತೇನೆ ಎಂಬ ಸಂದೇಶವನ್ನು ಬಿಜೆಪಿಗೆ ರವಾನಿಸಿದ್ದಾರೆ. ಗುರುವಾರ ಸೂರತ್ ಜಿಲ್ಲಾ ನ್ಯಾಯಾಲಯವು ತೀರ್ಪು ನೀಡಿದ ಬಳಿಕವೂ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, “ಸತ್ಯವೇ ಗೆಲ್ಲುತ್ತದೆ” ಎಂದು ಹೇಳಿದ್ದರು. ಹಾಗೆಯೇ, ಮಹಾತ್ಮ ಗಾಂಧೀಜಿಯವರ ಹೇಳಿಕೆಯನ್ನು ಉಲ್ಲೇಖಿಸಿದ್ದರು.
ರಾಹುಲ್ ಗಾಂಧಿ ಟ್ವೀಟ್
ಪ್ರಿಯಾಂಕಾ ವಾದ್ರಾ ಹೇಳಿದ್ದೇನು?
ರಾಹುಲ್ ಗಾಂಧಿ ಅನರ್ಹತೆ ಕುರಿತು ಪ್ರತಿಕ್ರಿಯಿಸಿರುವ ಪ್ರಿಯಾಂಕಾ ವಾದ್ರಾ, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ನೀರವ್ ಮೋದಿ 14 ಸಾವಿರ ಕೋಟಿ ರೂ. ಲೂಟಿ ಮಾಡಿದ್ದಾರೆ. ಲಲಿತ್ ಮೋದಿ 425 ಕೋಟಿ ರೂ. ಹಾಗೂ ಮೆಹುಲ್ ಚೋಕ್ಸಿ 13,500 ಕೋಟಿ ರೂ. ಲೂಟಿ ಮಾಡಿದ್ದಾರೆ. ಆದರೂ ಏಕೆ ಬಿಜೆಪಿ ಇವರನ್ನು ರಕ್ಷಿಸುತ್ತಿದೆ? ಏಕೆ ಪಕ್ಷವು ತನಿಖೆಯಿಂದ ದೂರ ಓಡುತ್ತಿದೆ” ಎಂದು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ನಾಯಕರು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2019ರ ಲೋಕಸಭೆ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಪ್ರಚಾರ ಮಾಡುತ್ತ ‘ಎಲ್ಲ ಕಳ್ಳರ ಹೆಸರುಗಳ ಉಪನಾಮ ಮೋದಿ ಎಂದೇ ಇರುತ್ತದೆ ಎಂಬ ಬಗ್ಗೆ ನನಗೆ ಅಚ್ಚರಿಯಾಗುತ್ತದೆ’ ಎಂದು ಹೇಳಿದ್ದರು. ರಾಹುಲ್ ಗಾಂಧಿ ಈ ಹೇಳಿಕೆ ವಿರುದ್ಧ ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ದೂರು ನೀಡಿದ್ದರು. ಹಾಗೇ, ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ್ದ ಸೂರತ್ ಕೋರ್ಟ್ ಮಾ.23ರಂದು ತೀರ್ಪು ನೀಡಿ ರಾಹುಲ್ ಗಾಂಧಿ ದೋಷಿ ಎಂದು ಹೇಳಿತ್ತು. ಅಷ್ಟೇ ಅಲ್ಲ, 15 ಸಾವಿರ ರೂಪಾಯಿ ದಂಡ ವಿಧಿಸಿತ್ತು. 30 ದಿನಗಳ ಜಾಮೀನು ನೀಡಿತ್ತು. ಅಷ್ಟರೊಳಗೆ ರಾಹುಲ್ ಗಾಂಧಿ ಪರ ಕಾಂಗ್ರೆಸ್ನ ಯಾರಾದರೂ ಮೇಲ್ಮನವಿ ಸಲ್ಲಿಸಿ, ಅವರಿಗೆ ನೀಡಿರುವ ಶಿಕ್ಷೆಯನ್ನು ರದ್ದುಗೊಳಿಸಬಹುದು ಎಂದು ಹೇಳಿದೆ.
ಇದನ್ನೂ ಓದಿ: Rahul Gandhi Disqualified: ರಾಹುಲ್ ಗಾಂಧಿ ಅನರ್ಹಕ್ಕೆ ಕನ್ನಡಿಗರೊಬ್ಬರೂ ಕಾರಣ, ಯಾರಿವರು?