ಮುಂಬಯಿ: ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಾನು ರಾಜೀನಾಮೆ ನೀಡಲು ಸಿದ್ಧ ಎಂದು ಘೋಷಿಸಿದ್ದಾರೆ. ಬುಧವಾರ ಸಂಜೆ ಫೇಸ್ ಬುಕ್ ಲೈವ್‌ನಲ್ಲಿ ಮಾತನಾಡಿದ ಅವರು, ನನ್ನ ಬದಲು ಯಾವುದೇ ಶಿವ ಸೈನಿಕ ಮುಖ್ಯಮಂತ್ರಿ ಆಗಬಹುದು ಎಂಬ ಆಫರ್ ನೀಡಿದ್ದಾರೆ.
ʻʻನನ್ನ ಶಾಸಕರೇ ನನ್ನನ್ನು ತಿರಸ್ಕರಿಸಿದ್ದಾರೆ ಎಂದಾದರೆ ರಾಜೀನಾಮೆಗೆ ನಾನು ಸಿದ್ಧನಾಗಿದ್ದೇನೆ. ಅಧಿಕಾರಕ್ಕೆ ಅಂಟಿ ಕುಳಿತುಕೊಳ್ಳುವುದಿಲ್ಲʼʼ ಎಂದಿದ್ದಾರೆ.
ಮಹಾರಾಷ್ಟ್ರ ರಾಜಕಾರಣದಲ್ಲಿ ಬುಧವಾರ ಬೆಳಗ್ಗಿನಿಂದಲೇ ನಿರಂತರ ಹೊಸ ಹೊಸ ಬೆಳವಣಿಗೆಗಳು ನಡೆಯುತ್ತಿದ್ದು, ಮಹತ್ವದ ಟರ್ನಿಂಗ್ ಪಾಯಿಂಟ್ ಎಂಬಂತೆ ಉದ್ಧವ್ ಠಾಕ್ರೆ ಅಧಿಕಾರ ತ್ಯಾಗ ಮಾಡಿ ಬೇರೆಯವರಿಗೆ ಅವಕಾಶ ನೀಡಲು ಸಿದ್ಧ ಎಂದು ಘೋಷಿಸುವಲ್ಲಿಗೆ ಬಂದು ನಿಂತಿದ್ದಾರೆ. ಉದ್ಧವ್ ಠಾಕ್ರೆ ಅವರ ಈ ಆಫರ್‌ಗೆ ಪಕ್ಷದ ಒಂದು ಗುಂಪು ಸ್ವಾಗತ ವ್ಯಕ್ತಪಡಿಸಿದ್ದರೆ, ಇನ್ನೊಂದು ಗುಂಪು ಮಾತ್ರ ವಿರೋಧ ವ್ಯಕ್ತಪಡಿಸಿದೆ.
ಈ ಎಲ್ಲ ಆಫರ್‌ಗಳ ನಡುವೆಯೇ ಉದ್ಧವ್ ಠಾಕ್ರೆ ಅವರು ಒಂದು ಷರತ್ತನ್ನು ವಿಧಿಸಿದ್ದಾರೆ. ಅದೇನೆಂದರೆ ಬಂಡಾಯ ಸಾರಿರುವ ಎಲ್ಲ ಶಾಸಕರ ಒಮ್ಮೆ ತನ್ನ ಬಳಿ ಬಂದು ಮಾತನಾಡಬೇಕು ಎನ್ನುವುದು! ಈ ಎಲ್ಲ ಬೆಳವಣಿಗೆಗಳಿಗೆ, ಆಫರ್‌ಗಳಿಗೆ ಮತ್ತು ಷರತ್ತುಗಳಿಗೆ ಬಂಡಾಯ ನಾಯಕ ಏಕನಾಥ ಶಿಂಧೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ. ಏಕನಾಥ ಶಿಂಧೆ ಅವರು ಸಂಜೆ ಏಳು ಗಂಟೆಗೆ ಪತ್ರಿಕಾಗೋಷ್ಠಿಯನ್ನು ಕರೆದಿದ್ದಾರೆ. ಅದರಲ್ಲಿ ತಮ್ಮ ನಿಲುವನ್ನು ಹೇಳುವ ಸಾಧ್ಯತೆ ಕಂಡುಬಂದಿದೆ.
ಸುದ್ದಿಗೋಷ್ಠಿಯಲ್ಲಿ ಉದ್ಧವ್ ಹೇಳಿದ್ದೇನು?
ಹಿಂದುತ್ವ ತೊರೆದಿಲ್ಲ
ಶಿವಸೇನೆ ಹಿಂದುತ್ವ ತೊರೆದಿಲ್ಲ. ಹಿಂದುತ್ವ ಬೇರೆಯಲ್ಲ, ಶಿವಸೇನೆ ಬೇರೆಯಲ್ಲ. ಶಿವಸೇನೆ ಹಿಂದುತ್ವದಿಂದ ದೂರ ಸರಿಯುವ ಪ್ರಶ್ನೆಯೇ ಇಲ್ಲ. ಶಾಸಕರು ನನ್ನ ಜತೆ ಮಾತನಾಡಿದಾಗ ಎಂದೂ ಇದರ ಬಗ್ಗೆ ಪ್ರಸ್ತಾಪಿಸಿಲ್ಲ. ಈಗ ಏಕಾಏಕಿ ಹಿಂದುತ್ವದ ವಿಚಾರ ಬಂದಿದೆ ಎನ್ನುವುದು ನನಗೆ ಅರ್ಥವಾಗಿಲ್ಲ. ನಾನು ಬಾಳಾ ಸಾಹೇಬ್ ಠಾಕ್ರೆ ಮಗ. ಯಾವತ್ತೂ ಹಿಂದುತ್ವಕ್ಕೆ ಬದ್ಧ. ಅಧಿಕಾರ ನನಗೆ ಮುಖ್ಯವಲ್ಲ.
ನಾನು ಸಿಎಂ ಅವಕಾಶ ಕೇಳಿದ್ದಲ್ಲ
ಕಳೆದ ೨೫-೩೦ ವರ್ಷಗಳಿಂದ ನಾವು ಕಾಂಗ್ರೆಸ್ ಮತ್ತು ಎನ್‌ಸಿಪಿಯನ್ನು ವಿರೋಧ ಮಾಡಿದ್ದೇವೆ. ನಾನು ಅಧಿಕಾರಕ್ಕಾಗಿ ಅವರ ಜತೆ ಮೈತ್ರಿಗೆ ಹೋಗಿಲ್ಲ. ಅವರೇ ನನ್ನನ್ನು ಸಿಎಂ ಎಂದು ಘೋಷಣೆ ಮಾಡಿದರು. ಆ ಬಳಿಕ ನಾನು ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದೆ.
ರಾಜ್ಯಪಾಲರಿಗೂ ಹೇಳಿದ್ದೇನೆ
ನಾನು ರಾಜೀನಾಮೆ ಕೊಡ್ತೀನಿ ಎಂದು ರಾಜ್ಯಪಾಲರಿಗೂ ಹೇಳಿದ್ದೇನೆ. ನೀವು ಬಂದು ರಾಜೀನಾಮೆ ಕೊಡಿ ಎಂದು ಹೇಳಿದ್ದಾರೆ. ಆದರೆ, ಅವರಿಗೂ ನನಗೂ ಇಬ್ಬರಿಗೂ ಕೋವಿಡ್ ಆಗಿರುವುದರಿಂದ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ನಾನು ಮುಖ್ಯಮಂತ್ರಿ ಹುದ್ದೆಗೆ ಮಾತ್ರವಲ್ಲ, ಪಕ್ಷದ ನಾಯಕತ್ವಕ್ಕೂ ರಾಜೀನಾಮೆ ನೀಡಲು ಸಿದ್ಧ.
ಒಂದೇ ಒಂದು ಷರತ್ತು ಇದೆ
ನಾನು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲು ಸಿದ್ಧ. ಆದರೆ, ಒಂದು ಸಣ್ಣ ಷರತ್ತಿದೆ. ಈಗ ಯಾರೆಲ್ಲ ಬಂಡಾಯವೆದ್ದು ಹೋಗಿದ್ದಾರಲ್ಲ. ಅವರೆಲ್ಲ ಬಂದು ನನ್ನ ಜತೆ ಒಮ್ಮೆ ಮಾತನಾಡಬೇಕು ಎನ್ನುವುದಷ್ಟೇ ನನ್ನ ಬೇಡಿಕೆ.
ಅನನುಭವಿ ನಾನು
ನಾನು ಅನನುಭವಿ. ಆದರೆ ನನ್ನ ಇತಿಮಿತಿಯಲ್ಲಿ ಸಿಎಂ ಹುದ್ದೆ ನಿಭಾಯಿಸಿದ್ದೇನೆ. ಕೊರೊನಾ ಕಗ್ಗಂಟನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ.