Site icon Vistara News

Reasi Terror Attack : ಜಮ್ಮು – ಕಾಶ್ಮೀರ ಬಸ್ ದಾಳಿಯ ಹೊಣೆ ಹೊತ್ತುಕೊಂಡ ಪಾಕ್ ಲಷ್ಕರ್ ಬೆಂಬಲಿತ ಉಗ್ರ ಸಂಘಟನೆ

Reasi Terror Attack

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಭಾನುವಾರ ಪ್ರವಾಸಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ನಡೆದ ಭಯೋತ್ಪಾದಕ ದಾಳಿಯ (Reasi Terror Attack) ಹೊಣೆಯನ್ನು ಪಾಕಿಸ್ತಾನ ಬೆಂಬಲಿತ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್​​ಎಫ್) ವಹಿಸಿಕೊಂಡಿದೆ. ಪ್ರವಾಸಿಗರು ಮತ್ತು ಸ್ಥಳೀಯರಲ್ಲದವರ” ಮೇಲೆ ಇಂತಹ ದಾಳಿಗಳನ್ನು ಮುಂದವರಿಸುತ್ತೇವೆ ಎಂಬುದಾಗಿಯೂ ಉಗ್ರರು ಹೇಳಿಕೊಂಡಿದ್ದಾರೆ. ಅಲ್ಲದೆ ರಿಯಾಸಿ ದಾಳಿಯನ್ನು ‘ಹೊಸ ಆರಂಭಕ್ಕೆ ಮುನ್ನುಡಿ’ ” ಎಂದು ಕರೆದಿದೆ.

ಭಯೋತ್ಪಾದಕರನ್ನು ಪತ್ತೆಹಚ್ಚಲು ಉಗ್ರ ನಿಗ್ರ ದಳದ ಅಧಿಕಾರಿಗಳು ಬೃಹತ್ ಶೋಧ ಕಾರ್ಯಾಚರಣೆ ಪ್ರಾರಂಭಿಸಿದೆ. ಈ ಪ್ರದೇಶದಲ್ಲಿ ಭದ್ರತೆಯನ್ನು ಬಲಪಡಿಸಲಾಗಿದ್ದು, ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವಹಿಸಲಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

ಬಸ್ ಶಿವ ಖೋರಿ ದೇವಾಲಯದಿಂದ ಮಾತಾ ವೈಷ್ಣೋ ದೇವಿ ದೇವಾಲಯದ ಮೂಲ ಶಿಬಿರವಾದ ಕತ್ರಾಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಹತ್ತಿರದ ಕಾಡಿನಲ್ಲಿ ಅಡಗಿದ್ದ ಭಯೋತ್ಪಾದಕರು ವಾಹನದ ಮೇಲೆ ಹೊಂಚು ಹಾಕಿ ಗುಂಡು ಹಾರಿಸಿದರು. ಬಸ್ ಚಾಲಕನಿಗೆ ಗುಂಡು ತಗುಲಿ ಸಮತೋಲನ ಕಳೆದುಕೊಂಡಿದ್ದು, ವಾಹನವು ಕಮರಿಗೆ ಉರುಳಿ ಬಿದ್ದಿದೆ.

ಯಾರಿವರು ಉಗ್ರರು?


ಭಾರತವು 2023 ರಲ್ಲಿ ರೆಸಿಸ್ಟೆನ್ಸ್ ಫ್ರಂಟ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿತ್ತು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಇದನ್ನು 2019 ರಲ್ಲಿ ಉಗ್ರರು ಸ್ಥಾಪಿಸಿದ್ದರು. ಇದು ಡಜನ್​ಗಟ್ಟೆ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದೆ.

ರಿಯಾಸಿ ಬಸ್ ದಾಳಿಯಲ್ಲಿ ಎರಡರಿಂದ ಮೂರು ಭಯೋತ್ಪಾದಕರು ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ತಿಂಗಳು ರಾಜೌರಿ ಮತ್ತು ಪೂಂಛ್​​ ನಲ್ಲಿ ಇದೇ ಮಾದರಿಯಲ್ಲಿ ದಾಳಿ ನಡೆಸಿದ್ದರು. ಭಯೋತ್ಪಾದಕರು ಕಾಡಿನಲ್ಲಿ ಅಡಗಿ ಕುಳಿತು ದಾಳಿ ಮಾಡಿದ್ದಾರೆ. ಘಟನೆ ಬಳಿಕ ಭಯೋತ್ಪಾದಕರು ರಿಯಾಸಿಯಿಂದ ಪಲಾಯನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ಭಯೋತ್ಪಾದಕರೆಲ್ಲರೂ ಪಾಕಿಸ್ತಾನಿಗಳು ಮತ್ತು ಪಿರ್ ಪಂಜಾಲ್ ಪ್ರದೇಶದ ದಕ್ಷಿಣದಲ್ಲಿ ಎರಡು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಶೋಧ ಕಾರ್ಯಾಚರಣೆಗಾಗಿ ಉಗ್ರ ನಿಗ್ರಹ ದಳ ಡ್ರೋನ್​ಗಳನ್ನು ಬಳಸುತ್ತಿವೆ. ಇದಲ್ಲದೆ, ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ತಂಡವು ಕಾರ್ಯಾಚರಣೆ ನಡೆಸುತ್ತಿದೆ.

ಉಗ್ರದ ದಾಳಿಗೆ ಬಲಿಯಾದವರಲ್ಲಿ ಹೆಚ್ಚಿನವರು ಉತ್ತರ ಪ್ರದೇಶ ಮತ್ತು ರಾಜಸ್ಥಾನದವರು. ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ಬಸ್ ನ ಚಾಲಕ ಮತ್ತು ನಿರ್ವಾಹಕರನ್ನು ಸಹ ಗುರುತಿಸಲಾಗಿದ್ದು, ಇಬ್ಬರೂ ರಿಯಾಸಿ ಮೂಲದವರು. ಗಾಯಗೊಂಡವರಲ್ಲಿ 34 ಮಂದಿ ಉತ್ತರ ಪ್ರದೇಶದವರು, ಐವರು ದಿಲ್ಲಿಯವರು ಮತ್ತು ಇಬ್ಬರು ರಾಜಸ್ಥಾನದವರು.

ದಾಳಿಯ ಬಳಿಕ ವಾಹನ ಕಮರಿಗೆ ಬಿದ್ದಿದ್ದರೂ ಭಯೋತ್ಪಾದಕರು ಬಸ್ ಮೇಲೆ ಗುಂಡು ಹಾರಿಸುವುದನ್ನು ಮುಂದುವರಿಸಿದ್ದಾರೆ ಎಂದು ದಾಳಿಯಲ್ಲಿ ಬದುಕುಳಿದವರು ತಿಳಿಸಿದ್ದಾರೆ. ಭಯೋತ್ಪಾದಕರು ಕಮರಿಗೆ ಇಳಿದು ಹಲವಾರು ನಿಮಿಷಗಳ ಕಾಲ ಗುಂಡು ಹಾರಿಸುವುದನ್ನು ಮುಂದುವರಿಸಿದ್ದರು.

ಗ್ರಾಮಸ್ಥರ ಸಹಾಯದಿಂದ ಪೊಲೀಸರು ರಾತ್ರಿ ವೇಳೆಗೆ ಪ್ರಯಾಣಿಕರನ್ನು ಸ್ಥಳಾಂತರಿಸಿದ್ದರು. ರಿಯಾಸಿ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸ್ಥಳಾಂತರದ ಮೇಲ್ವಿಚಾರಣೆ ನಡೆಸಿದ್ದು. ಗಾಯಗೊಂಡವರನ್ನು ವಿವಿಧ ಆಸ್ಪತ್ರೆಗಳಿಗೆ ಸಾಗಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಭಯೋತ್ಪಾದಕ ದಾಳಿಯಲ್ಲಿ ಬಲಿಯಾದವರ ಕುಟುಂಬಗಳಿಗೆ 10 ಲಕ್ಷ ರೂ.ಗಳ ಆರ್ಥಿಕ ಸಹಾಯ ಘೋಷಿಸಿದ್ದಾರೆ.

ಪ್ರಧಾನಿ ಮೋದಿಯಿಂದ ಪ್ರತಿಕ್ರಿಯೆ

ಪ್ರಧಾನಿ ನರೇಂದ್ರ ಮೋದಿ ಅವರು ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಗಾಯಗೊಂಡ ಎಲ್ಲರಿಗೂ ಉತ್ತಮ ವೈದ್ಯಕೀಯ ಆರೈಕೆಯನ್ನು ಒದಗಿಸುವಂತೆ ನಿರ್ದೇಶನ ನೀಡಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಟ್ವೀಟ್ ಮಾಡಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ, ಕೇಂದ್ರ ಸಚಿವ ಅಮಿತ್ ಶಾ, ಅಧ್ಯಕ್ಷ ದ್ರೌಪದಿ ಮುರ್ಮು, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವರು ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ.

Exit mobile version