Site icon Vistara News

ಮಹಾರಾಷ್ಟ್ರದಲ್ಲಿ ಬಂಡಾಯವೆದ್ದಿರುವ ಸಚಿವ ಶಿಂಧೆ, ಶಿವಸೇನಾ ಶಾಸಕರು ಗುಜರಾತ್‌ನಿಂದ ಅಸ್ಸಾಂಗೆ ಶಿಫ್ಟ್

maharastra politics

ನವದೆಹಲಿ: ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಶಿವಸೇನೆಯ ಸುಮಾರು ೩೦ ಶಾಸಕರು ತಮ್ಮ ನಾಯಕ, ಹಾಲಿ ಸಚಿವ ಏಕನಾಥ್‌ ಶಿಂಧೆ ಅವರೊಂದಿಗೆ ಈಗ ಗುಜರಾತ್‌ನಿಂದ ಅಸ್ಸಾಂಗೆ ತೆರಳಿದ್ದಾರೆ ಎಂದು ವರದಿಯಾಗಿದೆ.

ಬಂಡಾಯವೆದ್ದಿರುವ ಶಿವಸೇನೆಯ ಶಾಸಕರು ಗುಜರಾತ್‌ನ ಸೂರತ್‌ನಿಂದ ಅಸ್ಸಾಂನ ಗುವಾಹಟಿಗೆ ತೆರಳಿದ್ದಾರೆ. ಇದರೊಂದಿಗೆ ಬಿಕ್ಕಟ್ಟು ಹೊಸ ತಿರುವು ಪಡೆದಿದೆ. ಒಟ್ಟು ೩೦ಕ್ಕೂ ಹೆಚ್ಚು ಶಾಸಕರು ಬಂಡಾಯವೆದ್ದಿದ್ದಾರೆ. ಹೀಗಾಗಿ ಶಿನಸೇನಾ-ಎನ್‌ಸಿಪಿ-ಕಾಂಗ್ರೆಸ್‌ ಸರಕಾರ ಬಿಕ್ಕ್ಟಿಗೆ ಸಿಲುಕಿದೆ. ರಾಜಕೀಯದ ಹೈಡ್ರಾಮಾ ನಡೆಯುತ್ತಿದೆ. ಅಸ್ಸಾಂ ಮತ್ತು ಗುಜರಾತ್‌ ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರಕಾರ ಇದೆ.‌ ತಮ್ಮ ಜತೆಗೆ ಒಟ್ಟು ೪೦ ಶಾಸಕರು ಇದ್ದಾರೆ ಎಂದು ಗುವಾಹಟಿಯಲ್ಲಿ ಏಕನಾಥ್‌ ಶಿಂಧೆ ಹೇಳಿದ್ದಾರೆ.

ಮಹಾರಾಷ್ಟ್ರ ರಾಜಕಾರಣದಲ್ಲೀಗ ಏಕನಾಥ್‌ ಶಿಂಧೆ ಸುಂಟರಗಾಳಿ ಎಬ್ಬಿಸಿದ್ದಾರೆ. ಒಂದು ಕಾಲದಲ್ಲಿ ಉದ್ಧವ್‌ ಠಾಕ್ರೆ ಅವರ ಬಲಗೈ ಬಂಟರಾಗಿದ್ದರು. ಪ್ರಸ್ತುತ ರಾಜ್ಯದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಾರೆ. ಈ ಬಿಕ್ಕಟ್ಟಿನ ಹಿಂದೆ ಬಿಜೆಪಿಯ ಕೈವಾಡ ಇದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ದೂರಿದ್ದಾರೆ.

ನಾವು ಬಾಳಾಸಾಹೇಬ್‌ ಠಾಕ್ರೆಯವರ ಶಿವ ಸೇನಾ ಬಿಟ್ಟಿಲ್ಲ. ಆದರೆ ನಾವು ಹಿಂದುತ್ವವನ್ನು ಪಾಲಿಸುತ್ತೇವೆ. ಹಿಂದುತ್ವವನ್ನು ಮುಂದೆಯೂ ಪ್ರತಿಪಾದಿಸುತ್ತೇವೆ ಎಂದು ಶಿಂದೆ ಹೇಳಿದ್ದಾರೆ. ಸಿಎಂ ಉದ್ಧವ್‌ ಠಾಕ್ರೆ ಬಂಡಾಯವನ್ನು ಉಪಶಮನಗೊಳಿಸಲು ಕಸರತ್ತು ಆರಂಭಿಸಿದ್ದಾರೆ. ಪ್ರತಿನಿಧಿಯೊಬ್ಬರನ್ನು ಬಂಡುಕೋರ ಶಾಸಕರನ್ನು ಸಂಪರ್ಕಿಸಲು ಕಳಿಸಿದ್ದಾರೆ.

ಮುಂದೇನಾಗಬಹುದು?

ಬಂಡಾಯವೆದ್ದಿರುವ ಶಾಸಕರು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಆದರೆ ಶಿವಸೇನಾವನ್ನು ಬಿಡುವುದಿಲ್ಲ ಎಂದು ಸಚಿವ ಏಕನಾಥ್‌ ಶಿಂಧೆ ಹೇಳಿದ್ದರು. ಶಿಂಧೆ ಅವರು ಇಂದು ಅಥವಾ ನಾಳೆ ರಾಜ್ಯಪಾಲರನ್ನು ಭೇಟಿಯಾಗುವ ನಿರೀಕ್ಷೆ ಇದೆ.

Exit mobile version