ನವದೆಹಲಿ: ದೇಶದಲ್ಲಿ ಭ್ರಷ್ಟಾಚಾರ, ಲಂಚಗುಳಿತನ ನಿಗ್ರಹದ ದಿಸೆಯಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. “ಲಂಚ ಪಡೆಯುವುದು ಕೂಡ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಮವಾಗಿದೆ. ಇಂತಹ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾದರೆ, ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ನಡೆಸಬಹುದು” ಎಂದು ಕೋರ್ಟ್ ತಿಳಿಸಿದೆ. ಆ ಮೂಲಕ ಇ.ಡಿ ಕಾರ್ಯವ್ಯಾಪ್ತಿಯನ್ನು ಕೋರ್ಟ್ ವಿಸ್ತರಿಸಿದಂತಾಗಿದೆ.
ತಮಿಳುನಾಡಿನಲ್ಲಿ 2011ರಿಂದ 2015ರ ಅವಧಿಯಲ್ಲಿ ಉದ್ಯೋಗಕ್ಕಾಗಿ ಲಂಚ ಪಡೆದ ಪ್ರಕರಣಗಳ ಕುರಿತು ಮತ್ತೆ ತನಿಖೆಗೆ ತಡೆ ನೀಡಿದ ಮದ್ರಾಸ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಕೆಯಾದ ಹಲವು ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಕೃಷ್ಣಮುರಾರಿ ಹಾಗೂ ವಿ. ರಾಮಸುಬ್ರಮಣಿಯನ್ ನೇತೃತ್ವದ ನ್ಯಾಯಪೀಠವು, ತನಿಖೆಗೆ ಸಮ್ಮತಿ ಸೂಚಿಸಿತು. ಹಾಗೆಯೇ, ಜಾರಿ ನಿರ್ದೇಶನಾಲಯವು ಅಕ್ರಮವಾಗಿ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ದಾಖಲಿಸಿದ ಪ್ರಕರಣಗಳ ವಿಚಾರಣೆಗೂ ಅನುಮತಿ ನೀಡಿತು.
“ಲಂಚ ಪಡೆಯುವುದು ಹಾಗೂ ಅಕ್ರಮವಾಗಿ ಆಸ್ತಿಯನ್ನು ಸಂಪಾದಿಸುವುದು ಗಂಭೀರ ಪ್ರಕರಣವಾಗಿದೆ. ಇದು ಯಾವುದೇ ಅಪರಾಧಕ್ಕಿಂತ ಕಡಿಮೆ ಇಲ್ಲ. ಹಾಗಾಗಿ, ಲಂಚಗುಳಿತನ ಹಾಗೂ ಗಂಭೀರ ಅಪರಾಧವು ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಹಾಗಾಗಿ, ಲಂಚ ಪಡೆಯುವುದು ಹಾಗೂ ಅಕ್ರಮವಾಗಿ ಆಸ್ತಿ ಸಂಪಾದಿಸುವುದು ಕೂಡ ಗಂಭೀರ ಪ್ರಕರಣವಾಗಿದೆ. ಲಂಚದ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾದರೆ, ಅಂತಹ ಪ್ರಕರಣಗಳ ಕುರಿತು ಇ.ಡಿ ಕೂಡ ತನಿಖೆ ನಡೆಸಬಹುದು” ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: Supreme Court: ಭಯದ ವಾತಾವರಣ ಸೃಷ್ಟಿಸಬೇಡಿ ಎಂದು ಇ.ಡಿ.ಗೆ ತಾಕೀತು ಮಾಡಿದ ಸುಪ್ರೀಂ ಕೋರ್ಟ್
ಏನಿದು ಪ್ರಕರಣ?
ತಮಿಳುನಾಡಿನಲ್ಲಿ 2011ರಿಂದ 2015ರ ಅವಧಿಯಲ್ಲಿ ರಾಜ್ಯ ಸಾರಿಗೆ ನಿಗಮದ ನೇಮಕದ ವೇಳೆ ಉದ್ಯೋಗ ನೀಡಲು ಲಂಚ ಪಡೆದ ಪ್ರಕರಣ ಇದಾಗಿದೆ. ಪ್ರಕರಣದಲ್ಲಿ ಡಿಎಂಕೆ ಶಾಸಕ ಸೆಂಥಿಲ್ ಬಾಲಾಜಿ ಸೇರಿ ಹಲವರು ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಕೇಸ್ ದಾಖಲಿಸಿದೆ.