ಶಿಲ್ಲಾಂಗ್: ಕಳೆದ ಎಂಟು ವರ್ಷದಲ್ಲಿ ಈಶಾನ್ಯ ಭಾರತದ ಹಿತಕ್ಕಾಗಿ ಭ್ರಷ್ಟಾಚಾರ, ದಂಗೆ, ರಾಜಕೀಯ ಪಕ್ಷಪಾತ ಸೇರಿದಂತೆ ಎಲ್ಲ ಅಡ್ಡಿಗಳನ್ನು ಮೀರಿ ಕೇಂದ್ರ ಸರ್ಕಾರವು ಕೆಲಸ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದರು. ಮೇಘಾಲಯದ ಶಿಲ್ಲಾಂಗ್ ನಗರ ಫುಟ್ಬಾಲ್ ಗ್ರೌಂಡ್‌ನಲ್ಲಿ ಆಯೋಜಿಸಲಾಗಿದ್ದ ಈಶಾನ್ಯ ಸಮಿತಿ(Northeastern Council)ಯ ಸುವರ್ಣಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಫುಟ್ಬಾಲ್‌ನಲ್ಲಿ ಯಾರಾದರೂ ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ಆಟವಾಡಿದರೆ, ಅವರಿಗೆ ರೆಡ್ ಕಾರ್ಡ್ ತೋರಿಸಲಾಗುತ್ತದೆ. ಅದೇ ರೀತಿ, ಈಶಾನ್ಯ ಭಾರತದಲ್ಲೂ ಈ 8 ವರ್ಷದ ಅವಧಿಯಲ್ಲಿ ಭ್ರಷ್ಟಾಚಾರ, ದಂಗೆ ಸೇರಿದಂತೆ ಎಲ್ಲ ಸಮಸ್ಯೆಗಳಿಗೆ ರೆಡ್ ಕಾರ್ಡ್ ತೋರಿಸಿದ್ದೇವೆ ಎಂದು ಹೇಳಿದರು.
ಈಶಾನ್ಯ ಭಾರತದಲ್ಲಿ ಕ್ರೀಡಾ ಅಭಿವೃದ್ಧಿಗೆ ಭಾರತವು ಕಂಕಣಬದ್ಧವಾಗಿದೆ. ಈ ಪ್ರದೇಶದಲ್ಲಿ ದೇಶದ ಮೊದಲ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಕತಾರ್‌ನಲ್ಲಿ ಇಂದು(ಭಾನುವಾರ) ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ನಾವು ವಿದೇಶಿ ತಂಡಗಳನ್ನು ಬೆಂಬಲಿಸುತ್ತಿದ್ದೇವೆ. ಆದರೆ ನಾವು ಅಂತಹ ಜಾಗತಿಕ ಕ್ರೀಡಾಕೂಟಗಳನ್ನು ಆಯೋಜಿಸುವ ದಿನಗಳು ದೂರವಿಲ್ಲ. ಈ ಬಗ್ಗೆ ನಿಮಗೆ ನಾನು ಭರವಸೆ ನೀಡುತ್ತೇನೆ. ನಾವು ನಮ್ಮ ತಂಡವನ್ನು ಹುರಿದುಂಬಿಸುವ, ಬೆಂಬಲಿಸುವ ದಿನಗಳು ದೂರ ಇಲ್ಲ ಎಂದು ಮೋದಿ ಅವರು ಹೇಳಿದರು.
2014ರಲ್ಲಿ ಈ ಪ್ರದೇಶಕ್ಕೆ ವಾರಕ್ಕೆ ಕೇವಲ 900 ವಿಮಾನಗಳು ಸಂಪರ್ಕವನ್ನು ಕಲ್ಪಿಸುತ್ತಿದ್ದವು. ಈಗ ಸುಮಾರು 1900 ವಿಮಾನಗಳು ಹಾರಾಟ ನಡೆಸುತ್ತಿವೆ. ವಿಮಾನಯಾನ ಸಂಪರ್ಕ ಹೆಚ್ಚಳದಿಂದಾಗಿ ಈ ಭಾಗದ ಕೃಷಿಕರಿಗೆ ಹೆಚ್ಚು ಉಪಯೋಗವಾಗಿದೆ. ಇದಕ್ಕೆ ಕೃಷಿ ಉಡಾನ್ ಯೋಜನೆ ಬಲ ನೀಡಿದೆ ಎಂದು ಪ್ರಧಾನಿಗಳು ಹೇಳಿದರು. ಅದೇ ರೀತಿ, ಈಶಾನ್ಯ ಭಾರತಕ್ಕೆ ತಮ್ಮ ನೇತೃತ್ವದ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ನೆರೆದಿದ್ದ ಜನರಿಗೆ ತಿಳಿಸಿದರು.
ಇದನ್ನೂ ಓದಿ | Modi in Bengaluru | ನಾಡಪ್ರಭು ಕೆಂಪೇಗೌಡ ಪ್ರತಿಮೆ, ರಾಜ್ಯ, ದೇಶದ ಅಭಿವೃದ್ಧಿಗೆ ಸ್ಫೂರ್ತಿದಾಯಕ: ಪ್ರಧಾನಿ ನರೇಂದ್ರ ಮೋದಿ