ನವ ದೆಹಲಿ: 2000ರ ರೆಡ್ ಫೋರ್ಟ್ ಉಗ್ರ ದಾಳಿಯ (Red Fort Attack) ಅಪರಾಧಿಯ ನೇಣು ಶಿಕ್ಷೆ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಳ್ಳಿ ಹಾಕಿದೆ. ಗಲ್ಲು ಶಿಕ್ಷೆಗೆ ಗುರಿಯಾಗಿರುವ ಲಷ್ಕರೆ ತಯ್ಬಾ ಉಗ್ರ ಸಂಘಟನೆಯ ಮೊಹಮ್ಮದ್ ಆರೀಫ್ ಅಶ್ಫಾಕ್, ವಿಚಾರಣಾ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಪುನರ್ ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದ. 2000 ಡಿಸೆಂಬರ್ 22ರಂದು ಕೆಂಪುಕೋಟೆ ಮೇಲೆ ನಡೆದಿದ್ದ ಉಗ್ರರ ದಾಳಿಯಲ್ಲಿ ಮೂವರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು.
ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಅವರು, ಈ ಪ್ರಕರಣದಲ್ಲಿ ವಿದ್ಯುನ್ಮಾನ ದಾಖಲೆಗಳನ್ನು ಪರಿಗಣನೆಯಿಂದ ಹೊರಗಿಡಬೇಕು ಎಂಬ ಮನವಿಯನ್ನು ಪುರಸ್ಕರಿಸಿದ್ದೇವೆ. ಹಾಗಿದ್ದೂ ಅಶ್ಫಾಕ್ ವಿರುದ್ಧದ ಆರೋಪಗಳು ಸಾಬೀತಾಗಿವೆ. ನ್ಯಾಯಾಲಯವು ತನ್ನ ನಿರ್ಧಾರಕ್ಕೆ ಬದ್ಧವಾಗಿದ್ದು, ಪುನರ್ ಪರಿಶೀಲನಾ ಅರ್ಜಿಯನ್ನು ತಿರಸ್ಕರಿಸುತ್ತದೆ. ಚೀಫ್ ಜಸ್ಟೀಸ್ ನೇತೃತ್ವದ ಈ ಪೀಠದಲ್ಲಿ ನ್ಯಾಯಮೂರ್ತಿ ಬೆಲಾ ಎಂ ತ್ರಿವೇದಿ ಕೂಡ ಇದ್ದರು.
2000 ಡಿಸೆಂಬರ್ 22ರಂದು ಗುಂಪೊಂದು ಕೆಂಪುಕೋಟೆಯಲ್ಲಿ ಗುಂಡು ಹಾರಿಸಿ, ವಿಧ್ವಂಸಕ ಕೃತ್ಯ ಎಸಗಿತ್ತು. ಈ ವೇಳೆ, ಭದ್ರತಾ ಪಡೆಯ ಮೂವರು ಸಿಬ್ಬಂದಿ ಮೃತಪಟ್ಟಿದ್ದರು. ದಾಳಿ ನಡೆದ ಮೂರು ದಿನಗಳ ಬಳಿಕ ಉಗ್ರ ಆರೀಫ್‌ನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ತಾನು ಪಾಕಿಸ್ತಾನದ ಪ್ರಜೆ ಎಂದು ಒಪ್ಪಿಕೊಂಡಿದ್ದ. 2005ರಲ್ಲಿ ವಿಚಾರಣಾ ನ್ಯಾಯಾಲಯವು ಆರೀಫ್‌ನನ್ನು ದೋಷಿ ಎಂದು ಪರಿಗಣಿಸಿ, ಜೈಲು ಶಿಕ್ಷೆ ವಿಧಿಸಿತ್ತು. ಬಳಿಕ ದಿಲ್ಲಿ ಹೈಕೋರ್ಟ್ ಈ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.
ಇದನ್ನೂ ಓದಿ | Jammu Kashmir | ಪ್ರತ್ಯೇಕ ಎನ್‌ಕೌಂಟರ್, ಪಾಕಿಸ್ತಾನಿ ಸೇರಿದಂತೆ ನಾಲ್ವರು ಉಗ್ರರ ಹತ್ಯೆ