ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಮಹತ್ವಾಕಾಂಕ್ಷೆಯ ವಂದೇ ಭಾರತ್ (Vande Bharat Train) ರೈಲು ಸೇವೆ ಪರಿಣಾಮಕಾರಿಯಾಗುವತ್ತ ಸಾಗುತ್ತಿದೆ. ರಾಜ್ಯಗಳ ನಡುವೆ ಮತ್ತು ರಾಜ್ಯದೊಳಗೇ ಸಂಪರ್ಕ ಕಲ್ಪಿಸುವ ವಂದೇ ಭಾರತ್ ರೈಲು ಸೇವೆಯಿಂದಾಗಿ ವಿಮಾನಯಾನ ಶುಲ್ಕ ಗಣನೀಯವಾಗಿ ಇಳಿಕೆಯಾಗಿದ್ದು, ಮತ್ತಷ್ಟು ಅಗ್ಗವಾಗಿದೆ! ಹೌದು, ಹೆಚ್ಚುತ್ತಿರುವ ವಂದೇ ಭಾರತ್ ರೈಲು ಸೇವೆಯು ವಿಮಾನ ಪ್ರಮಾಣದ ಶುಲ್ಕದ ಮೇಲೆ ಪರಿಣಾಮ ಬೀರಿದೆ. ಉದ್ಯಮಗಳ ತಜ್ಞರ ವಿಶ್ಲೇಷಣೆಯ ಪ್ರಕಾರ, ವಿಮಾನಯಾನ ಸಂಚಾರದಲ್ಲಿ (Air Traffic) ಶೇ.10ರಿಂದ 20 ಮತ್ತು ಶುಲ್ಕದಲ್ಲಿ (airfare ) ಶೇ.20ರಿಂದ 30ರಷ್ಟು ಕಡಿಮೆಯಾಗಿದೆ.
ಭಾರತೀಯ ರೈಲ್ವೆಯು ವಂದೇ ಭಾರತ್ ರೈಲುಗಳ ಬೇಡಿಕೆಯನ್ನು ಲಿಂಗ ಮತ್ತು ಪ್ರಯಾಣಿಕರ ವಯಸ್ಸಿನ ಆಧಾರದ ಮೇಲೆ ಸಮೀಕ್ಷೆ ಮಾಡಲು ಆರಂಭಿಸಿದೆ. ಈ ದತ್ತಾಂಶವು ನಾಲ್ಕು ವಂದೇ ಭಾರತ್ ಮಾರ್ಗಗಳಲ್ಲಿ ಪ್ರಯಾಣಿಸುವ ಅಂದರೆ, ಮುಂಬೈನಿಂದ ಶಿರಡಿ, ಗೋವಾ, ಸೋಲಾಪುರ ಮಾರ್ಗಗಳಲ್ಲಿ ಸಂಚರಿಸುವ ಪುರುಷರು, ಮಹಿಳೆಯರು ಮತ್ತು ಮಂಗಳರಮುಖಿಯರ ಸಂಖ್ಯೆಯನ್ನು ಒಳಗೊಂಡಿದೆ.
ಮುಂಬೈನಿಂದ ಪ್ರಾರಂಭವಾಗುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ 31-45 ವರ್ಷ ವಯಸ್ಸಿನವರು, ನಂತರ 15-30 ವರ್ಷ ವಯಸ್ಸಿನವರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಕೇಂದ್ರ ರೈಲ್ವೆ ಮಾಹಿತಿ ನೀಡಿದೆ. ಸೆಪ್ಟೆಂಬರ್ 15ರಿಂದ ಅಕ್ಟೋಬರ್ 13ರ ನಡುವೆ ಒಟ್ಟು 85,600 ಪುರುಷರು, 57838 ಮಹಿಳೆಯರು ಮತ್ತು 26 ಮಂಗಳಮುಖಿಯರು ವಂದೆ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ್ದಾರೆಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ: Vande Bharat : ಗಮನಿಸಿ, ಧಾರವಾಡ-ಬೆಂಗಳೂರು ವಂದೇ ಭಾರತ್ ಸಮಯ ಬದಲಾಗಿದೆ, ಈಗ ಅರ್ಧ ಗಂಟೆ ಫಾಸ್ಟ್
ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸುವುದಕ್ಕಾಗಿ ಮತ್ತು ವಂದೇ ಭಾರತ್ ರೈಲಗಳನ್ನು ಜನಪ್ರಿಯ ಮಾಡುವುದಕ್ಕಾಗಿ ರೈಲ್ವೆ ಇಲಾಖೆಯು ಮಾಹಿತಿಯನ್ನು ಕಲೆ ಹಾಕುತ್ತಿದೆ. ಈ ಅವಧಿಯಲ್ಲಿ 1-14 ವರ್ಷದೊಳಗಿನ ಮಕ್ಕಳ ಸಂಖ್ಯೆ ಶೇ.5ರಷ್ಟಿದ್ದರೆ ವಂದೇ ಭಾರತ್ ರೈಲುಗಳಲ್ಲಿ ಮಂಗಳಮುಖಿಯರ ಪಯಣದ ಪ್ರಮಾಣ ಶೇ. 4.5ರಷ್ಟಿದೆ ಎಂದು ತಿಳಿದು ಬಂದಿದೆ.
ಎಲ್ಲ ರಾಜ್ಯಗಳಲ್ಲೂ ವಂದೇ ಭಾರತ್ ರೈಲು ಸೇವೆಯನ್ನು ಆರಂಭಿಸಲು ಹೊರಟಿರುವ ಕೇಂದ್ರ ಸರ್ಕಾರವು ಶೀಘ್ರವೇ ಕಾಶ್ಮೀರದಲ್ಲಿ ಈ ರೈಲು ಶುರುವಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ. ಕಾಶ್ಮೀರದ ಎತ್ತರ ಪ್ರದೇಶ ಹಾಗೂ ತಾಪಮಾನಕ್ಕೆ ಹೊಂದಾಣಿಕೆಯಾಗುವಂತೆ ಈ ರೈಲುಗಳನ್ನು ವಿನ್ಯಾಸ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.