ನವದೆಹಲಿ: ಅಡುಗೆ ಅನಿಲ ಸಿಲಿಂಡರ್ ಬೆಲೆ ಇಳಿಕೆ (LPG Price Cut) ಮಾಡಿದ್ದರಿಂದ ನನ್ನ ಸಹೋದರಿಯರಿಗೆ ಅನುಕೂಲವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದ್ದಾರೆ. ಈ ಕುರಿತು ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ನರೇಂದ್ರ ಮೋದಿ, ರಕ್ಷಾ ಬಂಧನ (Raksha Bandhan Festival) ಹಬ್ಬವು ಕುಟುಂಬದಲ್ಲಿ ಸಂತೋಷವನ್ನು ಹೆಚ್ಚಿಸುವ ದಿನವಾಗಿದೆ. ಗ್ಯಾಸ್ ಬೆಲೆಯಲ್ಲಿನ ಕಡಿತವು ನನ್ನ ಕುಟುಂಬದ ಸಹೋದರಿಯರ ಸೌಕರ್ಯವನ್ನು ಹೆಚ್ಚಿಸುತ್ತದೆ ಮತ್ತು ಅವರ ಜೀವನವನ್ನು ಸುಲಭಗೊಳಿಸುತ್ತದೆ. ನನ್ನ ಪ್ರತಿಯೊಬ್ಬ ಸಹೋದರಿಯೂ ಸಂತೋಷವಾಗಿರಲಿ, ಆರೋಗ್ಯವಾಗಿರಲಿ, ನನ್ನ ಹಾರೈಕೆ ಎಂದು ಬರೆದುಕೊಂಡಿದ್ದಾರೆ.
ಅಡುಗೆ ಸಿಲಿಂಡರ್ ಬೆಲೆಯಲ್ಲಿ 200 ರೂ. ಇಳಿಕೆ
ದೇಶದ ಹೆಣ್ಣುಮಕ್ಕಳಿಗೆ ಕೇಂದ್ರ ಸರ್ಕಾರವು ರಕ್ಷಾ ಬಂಧನದ ಉಡುಗೊರೆ ನೀಡಿದೆ. ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 200 ರೂ. ಇಳಿಕೆ ಮಾಡಿದೆ. ಇದರಿಂದ ಕೋಟ್ಯಂತರ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಭಾರಿ ಅನುಕೂಲವಾಗಲಿದೆ. ಉಜ್ವಲ ಯೋಜನೆ ಅಡಿಯಲ್ಲಿ ಸಿಲಿಂಡರ್ ಖರೀದಿಸುವವರಿಗೆ ಈಗಾಗಲೇ 200 ರೂ. ಸಬ್ಸಿಡಿ ನೀಡಲಾಗುತ್ತದೆ. ಇದರ ಜತೆಗೆ 200 ರೂ. ಕಡಿಮೆ ಮಾಡಿರುವುದರಿಂದ ಅವರಿಗೆ 700 ರೂ.ಗೆ ಅಡುಗೆ ಅನಿಲ ಸಿಲಿಂಡರ್ ದೊರೆತಂತಾಗಲಿದೆ.
ದೇಶಾದ್ಯಂತ ಈಗ 14 ಕೆ.ಜಿಯ ಒಂದು ಸಿಲಿಂಡರ್ ಬೆಲೆ 1,100 ರೂಪಾಯಿ ಇದೆ. ಇದು ಬಡವರು ಹಾಗೂ ಮಧ್ಯಮ ವರ್ಗದವರಿಗೆ ತುಂಬ ಹೊರೆಯಾಗಿದೆ. ಹಾಗಾಗಿ, ಕೇಂದ್ರ ಸರ್ಕಾರವು 200 ರೂ. ಇಳಿಕೆ ಮಾಡಿರುವುದು ಕೋಟ್ಯಂತರ ಬಡ-ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದೆ. ರಕ್ಷಾಬಂಧನ ಹಾಗೂ ಓಣಂ ಹಬ್ಬದ ಹಿನ್ನೆಲೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ ಮಾಡಲು ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದರು.
ಈ ಸುದ್ದಿಯನ್ನೂ ಓದಿ: LPG Price Cut: ದೇಶದ ಹೆಣ್ಣುಮಕ್ಕಳಿಗೆ ಮೋದಿ ಭರ್ಜರಿ ಗಿಫ್ಟ್; ಎಲ್‌ಪಿಜಿ ಸಿಲಿಂಡರ್ ದರ 200 ರೂ. ಇಳಿಕೆ
ಲೋಕಸಭೆ ಚುನಾವಣೆಗೆ ರಣತಂತ್ರ?
ಮುಂದಿನ ವರ್ಷ ನಡೆಯುವ ಲೋಕಸಭೆ ಹಾಗೂ ವರ್ಷಾಂತ್ಯದಲ್ಲಿ ಕೆಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬೆಲೆ ಇಳಿಕೆಯ ತಂತ್ರ ರೂಪಿಸಿದೆ ಎಂದು ತಿಳಿದುಬಂದಿದೆ. ಇತ್ತೀಚಿನ ಚುನಾವಣೆಗಳಲ್ಲಿ ಬೆಲೆಯೇರಿಕೆಯು ಪ್ರಮುಖ ವಿಷಯವಾಗಿದೆ. ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಅವರು ಸಿಲಿಂಡರ್ ಬೆಲೆ ಇಳಿಕೆ ಮಾಡಿದ್ದಾರೆ. ಕಾಂಗ್ರೆಸ್ ಉಚಿತ ಕೊಡುಗೆಗಳ ಗ್ಯಾರಂಟಿಗಳನ್ನು ನೀಡುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರವು ಸಿಲಿಂಡರ್ ಬೆಲೆ ಇಳಿಕೆ ಮೂಲಕ ಜನರ ಅಸಮಾಧಾನ ತಣಿಸಲು ನಿರ್ಧಾರ ತೆಗೆದುಕೊಂಡಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.