ನವದೆಹಲಿ: ಕೊಲಿಜಿಯಂ ವ್ಯವಸ್ಥೆ ಅನ್ವಯ ಉನ್ನತ ನ್ಯಾಯಾಲಯಗಳಿಗೆ ನ್ಯಾಯಮೂರ್ತಿಗಳ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ಮಧ್ಯೆ ಜಟಾಪಟಿ ನಡೆಯುತ್ತಿರುವ ಬೆನ್ನಲ್ಲೇ ಜಡ್ಜ್‌ಗಳ ನೇಮಕದಲ್ಲಿ ಕಾಲಮಿತಿ ಅನುಸರಿಸದ (Delay In Judges Appointment) ಕುರಿತು ಸಂಸದೀಯ ಸಮಿತಿಯು ಬೇಸರ ವ್ಯಕ್ತಪಡಿಸಿದೆ.
ಕಾನೂನು ಮತ್ತು ಸಿಬ್ಬಂದಿ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು ಸಂಸತ್ತಿಗೆ ವರದಿ ಸಲ್ಲಿಸಿದ್ದು, ಇದರಲ್ಲಿ ಶಾಸಕಾಂಗ ಹಾಗೂ ನ್ಯಾಯಾಂಗದ ಮಧ್ಯೆ ಸಮನ್ವಯತೆ ಇಲ್ಲದಿರುವ ಕುರಿತು ಉಲ್ಲೇಖಿಸಲಾಗಿದೆ. “ಉನ್ನತ ನ್ಯಾಯಾಲಯಗಳಿಗೆ ಜಡ್ಜ್‌ಗಳ ನೇಮಕ, ಅದರಲ್ಲೂ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕದ ವಿಚಾರದಲ್ಲಿ ಶಾಸಕಾಂಗ ಹಾಗೂ ನ್ಯಾಯಾಂಗಕ್ಕೆ ನಿಗದಿತ ಕಾಲಮಿತಿಯೇ ಇಲ್ಲ. ಇದರಿಂದಾಗಿ, ಖಾಲಿ ಇರುವ ಹುದ್ದೆಗಳ ನೇಮಕದ ವಿಚಾರದಲ್ಲಿ ಅನಗತ್ಯವಾಗಿ ವಿಳಂಬವಾಗುತ್ತಿದೆ” ಎಂದು ಸಮಿತಿ ತಿಳಿಸಿದೆ.
“ಶಾಸಕಾಂಗ ಹಾಗೂ ನ್ಯಾಯಾಂಗವು ಇದುವರೆಗೆ ಕಾಲಮಿತಿ ಅಳವಡಿಸಿಕೊಳ್ಳದಿರುವುದು ಬೇಸರದ ಸಂಗತಿಯಾಗಿದೆ. ೨೦೨೧ರ ಡಿಸೆಂಬರ್ ವೇಳೆಗೆ ಸರ್ಕಾರವೇ ನೀಡಿದ ಮಾಹಿತಿ ಪ್ರಕಾರ, ತೆಲಂಗಾಣ, ಪಟನಾ ಹಾಗೂ ದೆಹಲಿ ಹೈಕೋರ್ಟ್‌ಗಳಲ್ಲಿ ಶೇ.೫೦ರಷ್ಟು ಹುದ್ದೆಗಳು ಖಾಲಿ ಇವೆ. ೧೦ ಹೈಕೋರ್ಟ್‌ಗಳಲ್ಲಿ ಶೇ.೪೦ರಷ್ಟು ಹುದ್ದೆಗಳ ನೇಮಕ ಬಾಕಿ ಇದೆ. ಇನ್ನಾದರೂ, ಶಾಸಕಾಂಗ ಹಾಗೂ ನ್ಯಾಯಾಂಗವು ಕಾಲಮಿತಿ ರೂಢಿಸಿಕೊಳ್ಳಬೇಕು” ಎಂದು ಹೇಳಿದೆ. ದೇಶದಲ್ಲಿ ೨೫ ಹೈಕೋರ್ಟ್‌ಗಳಿದ್ದು, ೧,೧೦೮ ನ್ಯಾಯಮೂರ್ತಿಗಳ ನೇಮಕ ಮಾಡಿಕೊಳ್ಳಬಹುದಾಗಿದೆ. ಆದರೆ, ಇಷ್ಟೂ ಹೈಕೋರ್ಟ್‌ಗಳಲ್ಲಿ ೭೭೮ ಜಡ್ಜ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ | Supreme Court | ಕೊಲಿಜಿಯಂ ಕಾನೂನುಬದ್ಧ, ಅನುಸರಿಸಬೇಕು : ಕೇಂದ್ರಕ್ಕೆ ಸುಪ್ರೀಂ ಸೂಚನೆ