Site icon Vistara News

Reliance Foundation: ಕರ್ನಾಟಕದ 469 ವಿದ್ಯಾರ್ಥಿಗಳು ಸೇರಿ 5000 ವಿದ್ಯಾರ್ಥಿಗಳಿಗೆ ರಿಲಯನ್ಸ್ ಫೌಂಡೇಷನ್ ವಿದ್ಯಾರ್ಥಿ ವೇತನ

Reliance Foundation Scholarship for 5000 students including 469 students from Karnataka

ಮುಂಬೈ: ರಿಲಯನ್ಸ್ ಫೌಂಡೇಷನ್‌ನಿಂದ (Reliance Foundation) 2023-24ನೇ ಸಾಲಿಗಾಗಿ ದೇಶದಾದ್ಯಂತ ಐದು ಸಾವಿರ ವಿದ್ಯಾರ್ಥಿಗಳನ್ನು ಪದವಿಪೂರ್ವ ವಿದ್ಯಾರ್ಥಿ ವೇತನಕ್ಕಾಗಿ (Scholarship) ಆಯ್ಕೆ ಮಾಡಲಾಗಿದೆ. ಇದರಲ್ಲಿ ಕರ್ನಾಟಕದ 469 ವಿದ್ಯಾರ್ಥಿಗಳು ಸಹ ಇದ್ದು(Students from Karnataka), ಈ ವಿದ್ಯಾರ್ಥಿಗಳ ಆಯ್ಕೆಯ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಲಾಗಿದೆ. ವಿದ್ಯಾರ್ಥಿ ವೇತನವು ಉನ್ನತ ಶಿಕ್ಷಣಕ್ಕಾಗಿ ಭಾರತದಲ್ಲೇ ಅತಿದೊಡ್ಡ, ಒಳಗೊಳ್ಳುವ ಮತ್ತು ವೈವಿಧ್ಯಮಯ ಉಪಕ್ರಮವಾಗಿದೆ. ಈ ಯೋಜನೆ ಅಡಿಯಲ್ಲಿ ಪದವಿಪೂರ್ವ ವಿದ್ಯಾರ್ಥಿಗಳು (PU Students) ಎರಡು ಲಕ್ಷ ರೂಪಾಯಿ ತನಕ ಅನುದಾನ ಪಡೆಯುತ್ತಾರೆ ಮತ್ತು ಹಳೆಯ ವಿದ್ಯಾರ್ಥಿಗಳ ಅದ್ಭುತ ನೆಟ್ ವರ್ಕ್ ನ ಭಾಗವಾಗುತ್ತಾರೆ.

ಭಾರತದ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 5,500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 58,000 ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅಂತಿಮವಾಗಿ 5000 ಮಂದಿಯನ್ನು ವ್ಯವಸ್ಥಿತವಾದ ಮೆರಿಟ್-ಕಮ್-ಆರ್ಥಿಕ ಸ್ಥಿತಿಗತಿಯ ಆಧಾರದ ಮೇಲೆ ಪ್ರಕ್ರಿಯೆ ನಡೆಸಿ, ಆಯ್ಕೆ ಮಾಡಲಾಗಿದೆ. ಸಾಮರ್ಥ್ಯ ಪರೀಕ್ಷೆಯಲ್ಲಿನ ಅವರ ಸಾಧನೆ ಮತ್ತು ಅವರ ಗ್ರೇಡ್ 12ರ ಅಂಕಗಳ ಜೊತೆಗೆ, ಆಯ್ಕೆಯಾದ ಶೇ 75ರಷ್ಟು ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು 2.5 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇದೆ.

ತಮ್ಮ ಅರ್ಜಿಯ ಫಲಿತಾಂಶವನ್ನು ತಿಳಿಯಲು ಅರ್ಜಿದಾರರು ವೆಬ್ ಸೈಟ್ ವಿಳಾಸ www.reliancefoundation.orgಗೆ ಭೇಟಿ ನೀಡಬಹುದು. ತಮ್ಮನ್ನು ಹಾಗೂ ತಮ್ಮ ಸಮುದಾಯವನ್ನು ಮೇಲ್ ಸ್ತರಕ್ಕೆ ಒಯ್ಯುವುದಕ್ಕೆ ಮತ್ತು ಭಾರತದ ಭವಿಷ್ಯದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಲು ಯಾವುದೇ ಅಧ್ಯಯನದ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಬೆಂಬಲಿಸುವುದು ರಿಲಯನ್ಸ್ ಫೌಂಡೇಷನ್ ಪದವಿಪೂರ್ವ ವಿದ್ಯಾರ್ಥಿವೇತನದ ಉದ್ದೇಶವಾಗಿದೆ. ಇದಕ್ಕಾಗಿ ಮೆರಿಟ್-ಕಮ್-ಆರ್ಥಿಕ ಸ್ಥಿತಿಯ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಹಣಕಾಸಿನ ಹೊರೆಯಿಲ್ಲದೆ ಅವರ ಪದವಿಪೂರ್ವ ಅಧ್ಯಯನವನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ.

ಇಲ್ಲಿಯವರೆಗೆ ರಿಲಯನ್ಸ್ ಫೌಂಡೇಷನ್ ನಿಂದ 23,136 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗಿದ್ದು, ಅದರಲ್ಲಿ ಶೇ 48ರಷ್ಟು ಹುಡುಗಿಯರು ಮತ್ತು 3,001 ವಿಕಲಾಂಗ ವಿದ್ಯಾರ್ಥಿಗಳು ಇದ್ದಾರೆ. ಈ ವರ್ಷದ ಆಯ್ಕೆಯಲ್ಲಿ ಎಲ್ಲ ವಿಭಾಗದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ವಾಣಿಜ್ಯ, ಕಲೆ, ವ್ಯಾಪಾರ/ನಿರ್ವಹಣೆ, ಕಂಪ್ಯೂಟರ್ ಅಪ್ಲಿಕೇಷನ್‌ಗಳು, ವಿಜ್ಞಾನ, ವೈದ್ಯಕೀಯ, ಕಾನೂನು, ಶಿಕ್ಷಣ, ಆತಿಥ್ಯ, ವಾಸ್ತುಶಿಲ್ಪ, ಎಂಜಿನಿಯರಿಂಗ್/ತಂತ್ರಜ್ಞಾನ ಮತ್ತು ಇತರ ಪದವಿಪೂರ್ವ ಪದವಿಗಳನ್ನು ಒಳಗೊಂಡಂತೆ ಎಲ್ಲಾ ವಿಷಯದ ವಿಭಾಗಗಳಿಂದ ವಿದ್ಯಾರ್ಥಿಗಳನ್ನು ಒಳಗೊಂಡಿದೆ.

ರಿಲಯನ್ಸ್ 1996ನೇ ಇಸವಿಯಿಂದ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. 2022ರ ಡಿಸೆಂಬರ್ ತಿಂಗಳಲ್ಲಿ ರಿಲಯನ್ಸ್ ಸಂಸ್ಥಾಪಕ-ಅಧ್ಯಕ್ಷರಾದ ಧೀರೂಭಾಯಿ ಅಂಬಾನಿ ಅವರ 90ನೇ ಜನ್ಮ ದಿನದಂದು ಈ ಬಗ್ಗೆ ಘೋಷಣೆ ಮಾಡಲಾಯಿತು. ರಿಲಯನ್ಸ್ ಫೌಂಡೇಷನ್ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ನೀತಾ ಅಂಬಾನಿ ಅವರು, ರಿಲಯನ್ಸ್ ಫೌಂಡೇಷನ್ ಮುಂದಿನ 10 ವರ್ಷಗಳಲ್ಲಿ 50,000 ವಿದ್ಯಾರ್ಥಿವೇತನವನ್ನು ನೀಡಲಿದೆ ಎಂದು ಘೋಷಿಸಿದರು. 2023-24ನೇ ಸಾಲಿಗೆ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ 5000 ವಿದ್ಯಾರ್ಥಿಗಳ ಕುರಿತಾದ ಈ ಪ್ರಕಟಣೆಯು ಶಿಕ್ಷಣ ಮತ್ತು ಭಾರತದ ಭವಿಷ್ಯವನ್ನು ನಿರ್ಮಿಸುವತ್ತ ವಿದ್ಯಾರ್ಥಿಗಳನ್ನು ಪೋಷಿಸುವ ರಿಲಯನ್ಸ್‌ನ ನಿರಂತರ ಬದ್ಧತೆಯನ್ನು ಇನ್ನೂ ಮುಂದಕ್ಕೆ ಒಯ್ಯುತ್ತದೆ.

ಈ ಸುದ್ದಿಯನ್ನೂ ಓದಿ: Reliance Foundation Scholarship: ಪದವಿಪೂರ್ವ ಹಂತದ 5000 ವಿದ್ಯಾರ್ಥಿಗಳಿಗೆ ರಿಲಯನ್ಸ್ ಫೌಂಡೇಷನ್ ವಿದ್ಯಾರ್ಥಿವೇತನ ‌

Exit mobile version