ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಿಂದ (Reliance Industries) 2023-24 ರ ನಾಲ್ಕನೇ ತ್ರೈಮಾಸಿಕ (2024 ರ ಜನವರಿಯಿಂದ ಮಾರ್ಚ್) ಫಲಿತಾಂಶವನ್ನು ಸೋಮವಾರ ಪ್ರಕಟಿಸಲಾಗಿದ್ದು, ಪ್ರತಿ ಷೇರಿಗೆ 10 ರೂಪಾಯಿ ಮಧ್ಯಂತರ ಲಾಭಾಂಶ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: IPL 2024 : ಐಪಿಎಲ್ನಲ್ಲಿ ಹೊಸ ದಾಖಲೆ ಬರೆದ ಸ್ಪಿನ್ನರ್ ಯಜ್ವೇಂದ್ರ ಚಹಲ್
ಮಾರ್ಚ್ 31, 2024ಕ್ಕೆ ಕೊನೆಯಾದ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಕಾರ್ಯಾಚರಣೆಯಿಂದ ಬಂದಂಥ ಏಕೀಕೃತ ಆದಾಯವು 2.40 ಲಕ್ಷ ಕೋಟಿ ರೂಪಾಯಿ ಆಗಿದೆ. ರಿಲಯನ್ಸ್ ವರ್ಷದ ಹಿಂದಿನ ಇದೇ ಅವಧಿಯಲ್ಲಿ (2023ರ ಜನವರಿಯಿಂದ ಮಾರ್ಚ್) 2.16 ಲಕ್ಷ ಕೋಟಿ ರೂಪಾಯಿ ಆದಾಯ ಗಳಿಸಿತ್ತು. ಆಗಿನ ಮೊತ್ತಕ್ಕೆ ಹೋಲಿಸಿದಲ್ಲಿ ಈ ಬಾರಿ ಆದಾಯದಲ್ಲಿ ಶೇಕಡಾ 11ರಷ್ಟು ಹೆಚ್ಚಳವಾಗಿದೆ. 2024ರ ಜನವರಿಯಿಂದ ಮಾರ್ಚ್ ಅವಧಿಗೆ ಕಂಪನಿಯ ನಿವ್ವಳ ಲಾಭ 18,951 ಕೋಟಿ ರೂಪಾಯಿ ಆಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭ 19,299 ಕೋಟಿ ರೂಪಾಯಿ ಬಂದಿತ್ತು.
ಜಿಯೋ ಇನ್ಫೋಕಾಮ್
ರಿಲಯನ್ಸ್ ಜಿಯೋ ನಿವ್ವಳ ಲಾಭ 5,337 ಕೋಟಿ ರೂಪಾಯಿ ಬಂದಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಶೇಕಡಾ 13 ರಷ್ಟು ಹೆಚ್ಚಳವಾಗಿದೆ. 10.8 ಕೋಟಿಗೂ ಹೆಚ್ಚು ಚಂದಾದಾರರು ಜಿಯೋದ 5ಜಿ ನೆಟ್‌ವರ್ಕ್‌ಗೆ ಬದಲಾಗಿದ್ದಾರೆ. ಇನ್ನು ಜಿಯೋದ ಏರ್ ಫೈಬರ್ ಸೇವೆಯು 5,900 ನಗರಗಳು/ಪಟ್ಟಣಗಳಲ್ಲಿ ಸೇವೆ ಒದಗಿಸುತ್ತಿದೆ. ಜಿಯೋ ಪ್ರತಿ ಗ್ರಾಹಕರಿಂದ ಪಡೆಯುವಂತ ಸರಾಸರಿ ಆದಾಯವು (ಎಆರ್‌ಪಿಯು) 181.7 ರೂ. ಗೆ ಏರಿಕೆಯಾಗಿದೆ.
ಇದನ್ನೂ ಓದಿ: MDH, Everest Spices: ಎವರೆಸ್ಟ್, ಎಂಡಿಎಚ್ ಮಸಾಲೆ ಪೌಡರ್‌ಗಳ ಗುಣಮಟ್ಟ ತಪಾಸಣೆಗೆ ಸೂಚನೆ
ರಿಲಯನ್ಸ್ ರೀಟೇಲ್
ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನ ನಿವ್ವಳ ಲಾಭವು ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇಕಡಾ 11.7ರಷ್ಟು ಏರಿಕೆಯಾಗಿದ್ದು, ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಬಂದಿದ್ದ 2,415 ಕೋಟಿ ರೂಪಾಯಿಗಳ ನಿವ್ವಳ ಲಾಭಕ್ಕೆ ಹೋಲಿಸಿದರೆ ಶೇಕಡಾ 11.7ರಷ್ಟು ಹೆಚ್ಚಳವಾಗಿ 2,698 ಕೋಟಿ ರೂಪಾಯಿಗೆ ತಲುಪಿದೆ. ಕಾರ್ಯಾಚರಣೆಯಿಂದ ಬರುವಂತ ಆದಾಯವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 9.8 ರಷ್ಟು ಏರಿಕೆಯಾಗಿ, 67,610 ಕೋಟಿ ರೂಪಾಯಿ ಮುಟ್ಟಿದೆ. ಇಷ್ಟು ಉತ್ತಮವಾದ ಫಲಿತಾಂಶ ಬರುವುದಕ್ಕೆ ದಿನಸಿ, ಫ್ಯಾಷನ್, ಲೈಫ್‌ಸ್ಟೈಲ್ ಹಾಗೂ ಗ್ರಾಹಕ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿನ ಅತ್ಯುತ್ತಮ ಮಾರಾಟ ಕೊಡುಗೆ ನೀಡಿದೆ. ಇದೇ ಮೊದಲ ಬಾರಿಗೆ 3 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 2,60,394 ಕೋಟಿ ರೂಪಾಯಿ ಬಂದಿತ್ತು.
ಮಾಧ್ಯಮ ವ್ಯವಹಾರ
ಮಾಧ್ಯಮ ವ್ಯವಹಾರದಲ್ಲಿ ತ್ರೈಮಾಸಿಕ ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡಾ 63ರಷ್ಟು ಏರಿಕೆಯಾಗಿದ್ದು, 2,419 ಕೋಟಿ ರೂಪಾಯಿ ಬಂದಿದೆ. ಕ್ರೀಡೆ, ಸಿನಿಮಾ ಹಾಗೂ ಸುದ್ದಿ ವರ್ಟಿಕಲ್‌ಗಳು ಇಂತಹ ಆದಾಯ ತಂದುಕೊಂಡಿದೆ. ಸುದ್ದಿ ವ್ಯವಹಾರದಲ್ಲಿ ವರ್ಷದಿಂದ ವರ್ಷಕ್ಕೆ ಆದಾಯ ಶೇಕಡಾ ಇಪ್ಪತ್ತೈದರಷ್ಟು ಹೆಚ್ಚಾಗಿದೆ. ವಯಾಕಾಮ್ 18 ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡಾ 83ರಷ್ಟು ಹೆಚ್ಚಾಗಿದೆ.
ರಿಲಯನ್ಸ್‌ನ ತೈಲದಿಂದ ರಾಸಾಯನಿಕ ತನಕ ವಿಭಾಗದಲ್ಲಿ ಆದಾಯವು ಶೇಕಡಾ 10.9ರಷ್ಟು ಏರಿಕೆಯಾಗಿ, 1,42,634 ಕೋಟಿ ರೂಪಾಯಿ ಬಂದಿದೆ. ಈ ತ್ರೈಮಾಸಿಕದಲ್ಲಿ ಇಬಿಐಟಿಡಿಎ 16,777 ಕೋಟಿ ರೂ. ಬಂದಿದ್ದು, ವರ್ಷದಿಂದ ವರ್ಷಕ್ಕೆ ಶೇಕಡಾ 3ರಷ್ಟು ಏರಿಕೆಯಾಗಿದೆ.
ಇದನ್ನೂ ಓದಿ: Car Accident: ಆಕಸ್ಮಿಕವಾಗಿ ಕಾರು ಹರಿದು ಒಂದೂವರೆ ವರ್ಷದ ಮಗು ಸಾವು; ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ರಿಲಯನ್ಸ್ ಇಂಡಸ್ಟ್ರೀಸ್ ತ್ರೈಮಾಸಿಕ ಫಲಿತಾಂಶ ಪ್ರಕಟವಾದ ಏ.22 ರಂದು ಸೋಮವಾರ ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಪ್ರತಿ ಷೇರಿನ ಮೌಲ್ಯ ದಿನದ ಕೊನೆಗೆ ಬಿಎಸ್ಇಯಲ್ಲಿ 2,960.60 ರೂಪಾಯಿಗೆ ತಲುಪಿದೆ.