ಹೊಸದಿಲ್ಲಿ: ರಿಲಯನ್ಸ್ ಇಂಡಸ್ಟ್ರೀಸ್‌ನ (Reliance industries) ನಿರ್ದೇಶಕರ ಮಂಡಳಿ ಮುಖೇಶ್ ಅಂಬಾನಿ (mukesh ambani) ಅವರ ಮಕ್ಕಳಿಗೆ ಬಹುತೇಕ ಹಸ್ತಾಂತರವಾಗಿದೆ. ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಮಕ್ಕಳಾದ ಇಶಾ, ಆಕಾಶ್ ಮತ್ತು ಅನಂತ್ ಅವರನ್ನು ನಿರ್ದೇಶಕರ ಮಂಡಳಿಗೆ ಸೇರ್ಪಡೆಗೊಳಿಸಲಾಗಿದೆ.
ಷೇರ್ ಹೋಲ್ಡರ್‌ಗಳ ಮತದಾನದಲ್ಲಿ ಅವಳಿಗಳಾದ 32 ವರ್ಷದ ಇಶಾ ಮತ್ತು ಆಕಾಶ್ ಶೇಕಡಾ 98ಕ್ಕಿಂತ ಹೆಚ್ಚು ಮತಗಳನ್ನು ಪಡೆದರೆ, 28 ವರ್ಷದ ಅನಂತ್ ಅವರು 92.75 ಶೇಕಡಾ ಮತಗಳನ್ನು ಪಡೆದರು. ಮೂವರೂ ಕಳೆದ ಕೆಲವು ವರ್ಷಗಳಿಂದ ರಿಲಯನ್ಸ್‌ನ ಪ್ರಮುಖ ವ್ಯವಹಾರಗಳೊಂದಿಗೆ ನಿಕಟವಾಗಿ ತೊಡಗಿಸಿಕೊಂಡಿದ್ದಾರೆ ಮತ್ತು ನಿರ್ವಹಿಸುತ್ತಿದ್ದಾರೆ.
66ರ ಹರೆಯದ ಮುಖೇಶ್ ಅಂಬಾನಿ ಅವರು ತಮ್ಮ ಅಧ್ಯಕ್ಷ ಸ್ಥಾನದ ಮುಂದಿನ ಐದು ವರ್ಷಗಳಲ್ಲಿ ಸಂಸ್ಥೆಯನ್ನು ಡಿಜಿಟಲ್, ಗ್ರಾಹಕ ಸಂಪರ್ಕ ಮತ್ತು ಹಸಿರು ಶಕ್ತಿಯ ಬೃಹತ್ತಾದ ಸಂಸ್ಥೆಯಾಗಿ ಪರಿವರ್ತಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಲು ತಯಾರಿ ನಡೆಸುವುದಾಗಿ ಹೇಳಿದ್ದಾರೆ.
ಇಶಾ ಅಂಬಾನಿ, ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಿಂದ ಎಂಬಿಎ ಪಡೆದಿದ್ದು, ರಿಲಯನ್ಸ್ ರಿಟೇಲ್ ವ್ಯಾಪಾರವನ್ನು ಮುನ್ನಡೆಸುತ್ತಿದ್ದಾರೆ. ಅವರು ಭಾರತೀಯ ಬಿಲಿಯನೇರ್ ಅಜಯ್ ಪಿರಮಾಲ್ ಅವರ ಮಗ ಆನಂದ್ ಪಿರಮಾಲ್ ಅವರನ್ನು ವಿವಾಹವಾಗಿದ್ದಾರೆ. ಫಾರ್ಮಾಸ್ಯುಟಿಕಲ್ಸ್‌ನಿಂದ ರಿಯಲ್ ಎಸ್ಟೇಟ್‌ವರೆಗೆ ಅವರ ಆಸಕ್ತಿಗಳು ಹರಡಿವೆ.
ಇಶಾ ಅವರ ಅವಳಿ ಸಹೋದರ ಕಳೆದ ವರ್ಷ ಜೂನ್‌ನಲ್ಲಿ ರಿಲಯನ್ಸ್ ಜಿಯೋ ಇನ್ಫೋಕಾಮ್‌ನ ಅಧ್ಯಕ್ಷರಾಗಿದ್ದರು. ಅವರ ತಂದೆ ಅಲ್ಲಿಂದ ಕೆಳಗಿಳಿದ ನಂತರ ತಾವು ಚುಕ್ಕಾಣಿ ಹಿಡಿದರು. ಅನಂತ್ ಗ್ರೂಪ್‌ನ ಸಂಸ್ಥೆಗಳ ನವೀಕರಿಸಬಹುದಾದ ಶಕ್ತಿಯ ಪರಿವರ್ತನೆಯೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ.
ಇದನ್ನೂ ಓದಿ: Mukesh Ambani: ರಿಲಯನ್ಸ್ ಸಿಬ್ಬಂದಿಗೆ 1,500 ಕೋಟಿ ರೂ. ಮೌಲ್ಯದ ಉಡುಗೊರೆ ನೀಡಿದ ಅಂಬಾನಿ; ಯಾರು ಈ ಅದೃಷ್ಟವಂತ?