ಇಂಧೋರ್: ಬರೋಬ್ಬರಿ 30 ಮುಸಲ್ಮಾನರು ಹಿಂದೂ ಧರ್ಮಕ್ಕೆ ಮತಾಂತರ(Religion conversion)ಗೊಂಡಿರುವ ಘಟನೆ ಮಧ್ಯ ಪ್ರದೇಶ(Madhya Pradesh)ದ ಇಂಧೋರ್‌ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಯಾವುದೇ ದೂರು ದಾಖಲಾಗಿಲ್ಲ. ಸ್ಥಳೀಯ ಸಂಘಟನೆ ಸಝಾ ಸಂಸ್ಕೃತಿ ಮಂಚ್ ಅಧ್ಯಕ್ಷ ಸ್ಯಾಮ್ ಪಾವ್ರಿ ಈ ಬಗ್ಗೆ ಮಾಹಿತಿ ನೀಡಿದ್ದು, ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ 2021ಯಡಿಯಲ್ಲಿ 14 ಮಹಿಳೆಯರು ಸೇರಿದಂತೆ 30 ಜನರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ಇಲ್ಲಿನ ಖಜರಾನ ಗಣೇಶ ದೇವಸ್ಥಾನದಲ್ಲಿ ನಡೆದ ವೈದಿಕ ಸ್ತೋತ್ರ ಪಠಣ ಸೇರಿದಂತೆ ಹಿಂದೂ ಧಾರ್ಮಿಕ ವಿಧಿಗಳಲ್ಲಿ ಈ ವ್ಯಕ್ತಿಗಳು ಪಾಲ್ಗೊಂಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಜನರು ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2021 ರ ಅಡಿಯಲ್ಲಿ ಜಿಲ್ಲಾಡಳಿತಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ, ಅವರು ಸ್ವಯಂಪ್ರೇರಣೆಯಿಂದ ತಮ್ಮ ಧರ್ಮವನ್ನು ಬದಲಾಯಿಸುತ್ತಿದ್ದಾರೆ ಎಂದು ಪಾವ್ರಿ ಹೇಳಿದರು.
ಖಜರಾನ ಗಣೇಶ ದೇವಸ್ಥಾನದಲ್ಲಿ 30 ಮಂದಿ ಸ್ವಯಂ ಪ್ರೇರಿತವಾಗಿ ಧರ್ಮ ಬದಲಾವಣೆಗೆ ತೊಡಗಿರುವ ಬಗ್ಗೆ ನಮಗೆ ಮಾಹಿತಿ ಬಂದಿದ್ದು, ಯಾವುದೇ ಒತ್ತಡ, ಪ್ರಭಾವ, ದುರಾಸೆಗೆ ಒಳಗಾಗಿ ಧರ್ಮ ಬದಲಾಯಿಸಿರುವ ಬಗ್ಗೆ ಇದುವರೆಗೆ ಯಾವುದೇ ದೂರು ಬಂದಿಲ್ಲ, ದೂರು ಬಂದರೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಉಪ ಪೊಲೀಸ್ ಆಯುಕ್ತ ಅಭಿನಯ್ ವಿಶ್ವಕರ್ಮ ಪಿಟಿಐಗೆ ತಿಳಿಸಿದ್ದಾರೆ.
ಒತ್ತಾಯಪೂರ್ವಕವಾಗಿ ಅಥವಾ ವಂಚನೆ ಅಥವಾ ದುರಾಸೆಯ ಮೂಲಕ ಧಾರ್ಮಿಕ ಮತಾಂತರಗಳನ್ನು ನಿಷೇಧಿಸಲು ಮಧ್ಯಪ್ರದೇಶದ ಧರ್ಮ ಸ್ವಾತಂತ್ರ್ಯ ಕಾಯಿದೆ 2021 ಅನ್ನು ಜಾರಿಗೊಳಿಸಲಾಗಿದೆ ಮತ್ತು ಉಲ್ಲಂಘಿಸುವವರು 10 ವರ್ಷಗಳವರೆಗೆ ಜೈಲು ಮತ್ತು Rs1 ಲಕ್ಷ ದಂಡವನ್ನು ಎದುರಿಸಬೇಕಾಗುತ್ತದೆ.
ಕಳೆದ ವರ್ಷ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ 250 ಹಿಂದುಗಳನ್ನು ಮಾತೃ ಧರ್ಮಕ್ಕೆ ವಾಪಸ್ ಕರೆತರಲಾಗಿದ್ದು (Ghar Wapsi), ಅಖಿಲ ಭಾರತೀಯ ಘರ್ ವಾಪ್ಸಿ ಸಮಿತಿಯ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿತ್ತು. ಕಳೆದ ವರ್ಷ ಫೆಬ್ರವರಿ 21ರಂದು ಇಲ್ಲಿನ ಚಿಕ್ನಿಪಲಿ ಎಂಬಲ್ಲಿ ಕಾರ್ಯಕ್ರಮ ಆಯೋಜಿಸಿ, ಗಂಗಾಜಲದಲ್ಲಿ ಪಾದ ತೊಳೆಯುವ ಮೂಲಕ ಮಾತೃ ಧರ್ಮಕ್ಕೆ ವಾಪಸ್ ಕರೆತರಲಾಗಿದೆ. ಧರ್ಮ ಜಾಗರಣ್ ಸಮನ್ವಯ ವಿಭಾಗ ಹಾಗೂ ಆರ್ಯ ಸಾಮ್ ಸಂಸ್ಥೆಯೂ ಈ ಕಾರ್ಯಕ್ರಮದ ನೇತೃತ್ವ ವಹಿಸಿತ್ತು.
ಅಖಿಲ ಭಾರತೀಯ ಘರ್ ವಾಪ್ಸಿ ಸಮಿತಿಯ ಪ್ರಬಲ್ ಪ್ರತಾಪ್ ಸಿಂಗ್ ಜುದೇವ್ ಅವರು ಕಾರ್ಯಕ್ರಮದ ಬಳಿಕ ಮಾತನಾಡಿ, ಕಾಂಗ್ರೆಸ್ ಆಡಳಿತವಿರುವ ಛತ್ತೀಸ್ಗಢದಲ್ಲಿ ಮತಾಂತರಕ್ಕೆ ಸರಕಾರದ ಆಶ್ರಯ ದೊರೆಯುತ್ತಿದೆ. ಈ ಮೂಲಕ ಹಿಂದು ಧರ್ಮವನ್ನು ದುರ್ಬಲಗೊಳಿಸುವ ತಂತ್ರ ಮಾಡಲಾಗುತ್ತಿದೆ. ಹಿಂದುಗಳು ಅದಕ್ಕೆ ಆಸ್ಪದ ಕೊಡಬಾರದು ಎಂಬುದಾಗಿ ಕರೆಕೊಟ್ಟರು.
ಜುದೇವ್ ಹಾಗೂ ಅವರ ತಂಡ ಸುಮಾರು 20 ಸಾವಿರ ಮಂದಿಯನ್ನು ಹಿಂದು ಧರ್ಮಕ್ಕೆ ವಾಪಸ್ ತರುವ ಕೆಲಸ ಮಾಡಿದ್ದಾರೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಅವರು ಒಡಿಶಾದ ಸುಂದರ್ಗಢ್ ಜಿಲ್ಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 171 ಕುಟುಂಬಗಳ 500ಕ್ಕೂ ಅಧಿಕ ಮಂದಿಯನ್ನು ಹಿಂದು ಧರ್ಮಕ್ಕೆ ವಾಪಸ್ ಕರೆತಂದಿದ್ದರು. ಚತ್ತೀಸ್ಗಢದಲ್ಲಿ 2021ರಲ್ಲಿ ನಡೆದ ಕಾರ್ಯಕ್ರಮದಲ್ಲಿ 1200 ಮಂದಿಯನ್ನು ಕ್ರೈಸ್ತ ಧರ್ಮದಿಂದ ಘರ್ ವಾಪ್ಸಿ ಮಾಡಿದ್ದರು.
ಇದನ್ನೂ ಓದಿ: Indian Armed Forces: ಸಹಪಾಠಿಗಳು ಈ ಭಾರತೀಯ ಸೇನೆ ಮತ್ತು ನೌಕಾಪಡೆ ಮುಖ್ಯಸ್ಥರು; ಇದು ದೇಶದ ಇತಿಹಾಸದಲ್ಲೇ ಮೊದಲು!