ಜೈಪುರ: ಬಾಲಕಿಯ ಒಳಉಡುಪನ್ನು ತೆಗೆದು, ಆಕೆಯನ್ನು ಬೆತ್ತಲೆಗೊಳಿಸುವುದು ಅತ್ಯಾಚಾರಕ್ಕೆ ನಡೆಸಿದ ಯತ್ನವಲ್ಲ ಎಂಬುದಾಗಿ ರಾಜಸ್ಥಾನ ಹೈಕೋರ್ಟ್ (Rajasthan High Court) ತೀರ್ಪು ನೀಡಿದೆ. ಸುಮಾರು 33 ವರ್ಷಗಳ ಹಿಂದಿನ ಪ್ರಕರಣದ ಕುರಿತು ಆದೇಶ ಹೊರಡಿಸಿದ ನ್ಯಾಯಾಲಯವು, ಯಾವುದೇ ವ್ಯಕ್ತಿಯು ಅಪ್ರಾಪ್ತೆಯ ಒಳಉಡುಪು ಬಿಚ್ಚಿ, ಆಕೆಯನ್ನು ವಿವಸ್ತ್ರಗೊಳಿಸಿದರೆ, ಅದನ್ನು ಅತ್ಯಾಚಾರಕ್ಕೆ ಯತ್ನ (Attempt To Rape) ಮಾಡಿದ ಪ್ರಕರಣ ಆಗುವುದಿಲ್ಲ ಎಂದು ನ್ಯಾಯಮೂರ್ತಿ ಅನೂಪ್ ಕುಮಾರ್ ಧಾಂಡ್ ಅವರ ಏಕಸದಸ್ಯ ಪೀಠವು ತಿಳಿಸಿತು.
ಸುಮಾರು 33 ವರ್ಷಗಳ ಹಿಂದೆ ಅಂದರೆ, 1991ರ ಮಾರ್ಚ್ 9ರಂದು ವ್ಯಕ್ತಿಯೊಬ್ಬ 6 ವರ್ಷದ ಬಾಲಕಿಯನ್ನು ಕರೆದುಕೊಂಡು ಹೋಗಿ, ಆಕೆಯನ್ನು ವಿವಸ್ತ್ರಗೊಳಿಸಿದ್ದ. ಟೋಂಕ್ ಜಿಲ್ಲೆಯ ತೋಡಾರೈಸಿಂಗ್ ಪ್ರದೇಶದಲ್ಲಿ ರಾತ್ರಿ 8 ಗಂಟೆಗೆ ಬಾಲಕಿಯನ್ನು ಧರ್ಮಶಾಲೆಯೊಂದಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ಬಾಲಕಿಯ ಅಂಡರ್‌ವೇರ್ ಬಿಚ್ಚಿ, ಆಕೆಯನ್ನು ಬೆತ್ತಲೆಗೊಳಿಸಿದ್ದ. ಇದಾದ ಬಳಿಕ ಬಾಲಕಿಯು ಜೋರಾಗಿ ಕಿರುಚಿದ ಕಾರಣ ಗ್ರಾಮಸ್ಥರು ಬಂದು ಬಾಲಕಿಯನ್ನು ರಕ್ಷಿಸಿದ್ದರು.
ಪ್ರಕರಣದ ಬಳಿಕ ನನ್ನ ಮೊಮ್ಮಗಳ ಮೇಲೆ ಸುವಾಲಾಲ್ ಎಂಬಾತ (ಪ್ರಕರಣದ ವೇಳೆ ವ್ಯಕ್ತಿಗೆ 25 ವರ್ಷ ವಯಸ್ಸು) ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂಬುದಾಗಿ ಬಾಲಕಿಯ ಅಜ್ಜ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದಾದ ಬಳಿಕ ಪ್ರಕರಣವು ಗಂಭೀರ ಸ್ವರೂಪ ಪಡೆದು, ಜಿಲ್ಲಾ ನ್ಯಾಯಾಲಯವು ಸುವಾಲಾಲ್‌ನನ್ನು ಅಪರಾಧಿ ಎಂದು ಘೋಷಿಸಿ, ಜೈಲು ಶಿಕ್ಷೆ ವಿಧಿಸಿತ್ತು. ವಿಚಾರಣೆ ವೇಳೆಯೇ ಸುವಾಲಾಲ್ ಎರಡೂವರೆ ತಿಂಗಳು ಜೈಲು ವಾಸ ಅನುಭವಿಸಿದ್ದರು.
ಹೈಕೋರ್ಟ್ ಆದೇಶವೇನು?
ಯಾವುದೇ ವ್ಯಕ್ತಿಯು ಬಾಲಕಿಯನ್ನು ವಿವಸ್ತ್ರಗೊಳಿಸಿದರೆ ಅದು ಅತ್ಯಾಚಾರಕ್ಕೆ ಯತ್ನ ಮಾಡಿದಂತೆ ಆಗುವುದಿಲ್ಲ. ಮೊದಲು ವ್ಯಕ್ತಿಯ ತಲೆಯಲ್ಲಿ ಅತ್ಯಾಚಾರದ ಯೋಚನೆ ಇರಬೇಕು. ಬಾಲಕಿಯ ಜತೆ ಲೈಂಗಿಕ ಸಂಪರ್ಕ ಸಾಧಿಸಲು ಮುಂದಾಗಿರಬೇಕು. ಇಲ್ಲದಿದ್ದರೆ ಅದು ಅತ್ಯಾಚಾರಕ್ಕೆ ಯತ್ನ ಮಾಡಿದಂತೆ ಆಗುವುದಿಲ್ಲ. ಬಾಲಕಿಯನ್ನು ವಿವಸ್ತ್ರಗೊಳಿಸಿದರೆ 376 ಹಾಗೂ 511 ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ವಿಧಿಸಲು ಆಗುವುದಿಲ್ಲ. ಆದರೆ, ಬಾಲಕಿಯನ್ನು ಬೆತ್ತಲೆಗೊಳಿಸಿದರೆ, ಅದು ಆಕೆಯ ಘನತೆಗೆ ಧಕ್ಕೆ ತಂದಂತೆ. ಸೆಕ್ಷನ್ 354ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ತಿಳಿಸಿತು. ಜಿಲ್ಲಾ ನ್ಯಾಯಾಲಯದ ಆದೇಶವನ್ನು ಬದಲಾಯಿಸಿ, ಸೆಕ್ಷನ್ 354ರ ಅಡಿಯಲ್ಲಿ ಮಾತ್ರ ಅಪರಾಧಿ ಎಂದು ಘೋಷಿಸಿತು.
ಇದನ್ನೂ ಓದಿ: Arvind Kejriwal: ದೆಹಲಿ ಹೈಕೋರ್ಟ್‌ನಿಂದ ಸಿಕ್ಕಿಲ್ಲ ರಿಲೀಫ್; ಸುಪ್ರೀಂ ಕೋರ್ಟ್ ಕದ ತಟ್ಟಿದ ಅರವಿಂದ್ ಕೇಜ್ರಿವಾಲ್