ನವದೆಹಲಿ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸಹೋದರಿ (ಅಕ್ಕ), ಖ್ಯಾತ ಲೇಖಕಿ, ಪತ್ರಕರ್ತೆ ಗೀತಾ ಮೆಹ್ತಾ (80) (Gita Mehta) ಅವರು ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನವದೆಹಲಿಯಲ್ಲಿ ಮೃತಪಟ್ಟಿದ್ದಾರೆ. ಗೀತಾ ಮೆಹ್ತಾ ನಿಧನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಲೇಖಕಿಯಾಗಿ, ಪತ್ರಕರ್ತೆಯಾಗಿ ಹಾಗೂ ಸಿನಿಮಾ ಸಾಹಿತ್ಯದಿಂದಲೇ ಗುರುತಿಸಿಕೊಂಡಿದ್ದ ಗೀತಾ ಮೆಹ್ತಾ ಅವರು 1971ರಲ್ಲಿ ನಡೆದ ಬಾಂಗ್ಲಾ ವಿಮೋಚನೆಗಾಗಿ ನಡೆದ ಯುದ್ಧದ ವರದಿಯಿಂದಲೇ ಹೆಚ್ಚು ಖ್ಯಾತಿ ಗಳಿಸಿದರು. 1943ರಲ್ಲಿ ಜನಿಸಿದ ಗೀತಾ ಮೆಹ್ತಾ, ಬ್ರಿಟನ್‌ನ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉನ್ನತ ಪದವಿ ಪಡೆದರು. ಇವರು ಖ್ಯಾತ ಪತ್ರಕರ್ತ, ಪ್ರಕಾಶಕ ಸನ್ನಿ ಮೆಹ್ತಾ ಅವರನ್ನು ವಿವಾಹವಾಗಿದ್ದರು. ಸನ್ನಿ ಮೆಹ್ತಾ 2019ರಲ್ಲಿ ನಿಧನರಾಗಿದ್ದಾರೆ. ಗೀತಾ ಮೆಹ್ತಾ ಹಾಗೂ ಸನ್ನಿ ಮೆಹ್ತಾ ಅವರಿಗೆ ಒಬ್ಬ ಪುತ್ರನಿದ್ದಾನೆ.
ಪ್ರಧಾನಿ ಮೋದಿ ಸಂತಾಪ
ಗೀತಾ ಮೆಹ್ತಾ ನಿಧನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. “ಖ್ಯಾತ ಲೇಖಕಿ ಗೀತಾ ಮೆಹ್ತಾ ಅವರ ಅಗಲಿಕೆಯ ಸುದ್ದಿ ತಿಳಿದು ಬೇಸರವಾಯಿತು. ಸಿನಿಮಾ, ಬರವಣಿಗೆ ಸೇರಿ ಹಲವು ಕ್ಷೇತ್ರಗಳಲ್ಲಿ ಅವರು ನೈಪುಣ್ಯ ಸಾಧಿಸಿ ಬಹುಮುಖ ಪ್ರತಿಭೆ ಎನಿಸಿದ್ದರು. ನವೀನ್ ಪಟ್ನಾಯಕ್ ಅವರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಗೀತಾ ಮೆಹ್ತಾ ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Sholay Actor Satinder Kumar Khosla: ʻಶೋಲೆ’ ಸಿನಿಮಾದ `ಬೀರ್‌ಬಲ್’ ಖ್ಯಾತಿಯ ಸತೀಂದರ್ ಕುಮಾರ್ ಖೋಸ್ಲಾ ಇನ್ನಿಲ್ಲ
I am saddened by the passing away of noted writer Smt. Gita Mehta Ji. She was a multifaceted personality, known for her intellect and passion towards writing as well as film making. She was also passionate about nature and water conservation. My thoughts are with @Naveen_Odisha…
— Narendra Modi (@narendramodi) September 16, 2023
ಪದ್ಮಶ್ರಿ ಪ್ರಶಸ್ತಿ ತಿರಸ್ಕರಿಸಿದ್ದ ಗೀತಾ ಮೆಹ್ತಾ
2019ರಲ್ಲಿ ಕೇಂದ್ರ ಸರ್ಕಾರವು ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರಗಳಲ್ಲಿ ಒಂದಾದ ಪದ್ಮಶ್ರೀ ಘೋಷಿಸಿತ್ತು. ಆದರೆ, ಗೀತಾ ಮೆಹ್ತಾ ಅವರು ಪ್ರಶಸ್ತಿಯನ್ನು ತಿರಸ್ಕರಿಸಿದ್ದರು. ಪ್ರಶಸ್ತಿ ಘೋಷಿಸಿದ ಅವಧಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಅವರು ಪ್ರಶಸ್ತಿಯನ್ನು ತಿರಸ್ಕರಿಸಿದ್ದರು. ಗೀತಾ ಮೆಹ್ತಾ ಅವರು ಕರ್ಮ ಕೋಲಾ, ಎ ರಿವರ್ ಸೂತ್ರ, ದಿ ಎಟರ್ನಲ್ ಗಣೇಶ ಸೇರಿ ಹಲವು ಕೃತಿಗಳನ್ನು ರಚಿಸಿದ್ದಾರೆ.