ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನಿವಾಸದ ಮೇಲೆ ಶಂಕಾಸ್ಪದವಾಗಿ ಡ್ರೋನ್ ಹಾರಾಟ ನಡೆಸಿದ್ದು, ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆಳಗಿನ ಜಾವ 5.30ರ ಸುಮಾರಿಗೆ 7 ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದ ಮೇಲೆ ಡ್ರೋನ್ ಹಾರಾಟ ನಡೆಸಿರುವುದನ್ನು ಮೋದಿ ಭದ್ರತೆಗಾಗಿ ನಿಯೋಜನೆಗೊಂಡಿರುವ ವಿಶೇಷ ರಕ್ಷಣಾ ದಳದ ಅಧಿಕಾರಿಗಳು ನೋಡಿದ್ದಾರೆ. ಇದಾದ ಕೂಡಲೇ ದೆಹಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ. ಡ್ರೋನ್ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
Information about flying a drone in the no-flying zone above the Prime Minister's residence was received. SPG contacted the police at 5:30 am. Investigation is underway: Delhi Police
— ANI (@ANI) July 3, 2023
ಪ್ರಧಾನಿ ನಿವಾಸದ ಬಳಿಯ ಹಾರಾಟ ನಿಷೇಧಿತ ವಲಯದಲ್ಲಿ (No Flying Zone Or No Drone Zone) ಬೆಳಗ್ಗೆ ಡ್ರೋನ್ ಹಾರಾಟ ನಡೆಸಿದೆ. ಇದರಿಂದ ಎಸ್‌ಪಿಜಿಯು ಕೂಡಲೇ ಎಚ್ಚೆತ್ತುಕೊಂಡು, ಪ್ರಕರಣವನ್ನು ವರದಿ ಮಾಡಿದೆ. ದೆಹಲಿ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿದ್ದಾರೆ. ಡ್ರೋನ್ ಪತ್ತೆಗಾಗಿ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಲಾಗಿದೆ. ಆದಾಗ್ಯೂ, ಇದುವರೆಗೆ ಯಾವುದೇ ಡ್ರೋನ್ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Modi in Karnataka: ಮೋದಿ ರೋಡ್ ಶೋ ವೇಳೆ ಭದ್ರತಾ ವೈಫಲ್ಯ; ನಿಷೇಧಿತ ಪ್ರದೇಶಕ್ಕೆ ನುಗ್ಗಿದ ಇಬ್ಬರು ವಶಕ್ಕೆ
“ಪ್ರಧಾನಿ ನಿವಾಸದ ಬಳಿ ಡ್ರೋನ್ ಹಾರಾಟ ನಡೆಸಿರುವ ಕುರಿತು ಎನ್‌ಡಿಡಿ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಲಾಯಿತು. ಇದಾದ ಬಳಿಕ ಡ್ರೋನ್ ಪತ್ತೆಗೆ ಕಾರ್ಯಾಚರಣೆ ಕೈಗೊಳ್ಳಲಾಯಿತು. ಏರ್ ಟ್ರಾಫಿಕ್ ಕಂಟ್ರೋಲ್ ರೂಮ್‌ಅನ್ನು ಕೂಡ ಸಂಪರ್ಕಿಸಲಾಯಿತು. ಇದುವರೆಗೆ ಯಾವುದೇ ಡ್ರೋನ್ ಪತ್ತೆಯಾಗಿಲ್ಲ” ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಶಂಕಾಸ್ಪದವಾಗಿ ಡ್ರೋನ್ ಹಾರಾಟ ನಡೆಸಿರುವುದು ಭದ್ರತಾ ವೈಫಲ್ಯ ಎಂದೇ ಹೇಳಲಾಗುತ್ತಿದೆ. ಆದಾಗ್ಯೂ, ಡ್ರೋನ್ ಕಾಣಿಸಿಕೊಳ್ಳುತ್ತಲೇ ಎಸ್‌ಪಿಜಿ ಅಲರ್ಟ್ ಆದ ಕಾರಣ ಕೂಡಲೇ ಡ್ರೋನ್ ಬೇರೆಡೆ ಹಾರಿದೆ ಎಂದು ಮೂಲಗಳು ತಿಳಿಸಿವೆ. ಡ್ರೋನ್ ಯಾವ ಕಡೆಯಿಂದ ನರೇಂದ್ರ ಮೋದಿ ನಿವಾಸದ ಬಳಿ ಬಂತು, ಅದು ಎಲ್ಲಿಗೆ ಹೋಯಿತು ಎಂಬ ಕುರಿತು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.