ನವ ದೆಹಲಿ ಈ ಸಲದ ಗಣರಾಜ್ಯೋತ್ಸವ (Republic Day 2023)ಕ್ಕೆ ಮುಖ್ಯ ಅತಿಥಿಯಾಗಿರುವ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ (Abdel Fattah el-Sisi) ಅವರು ದೆಹಲಿ ರಾಷ್ಟ್ರಪತಿ ಭವನ ತಲುಪಿದ್ದು, ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ(PM Modi) ಸ್ವಾಗತಿಸಿದರು. 2014ರಲ್ಲಿ ಈಜಿಪ್ಟ್ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಅಬ್ದೆಲ್ಲ ಫತ್ತಾಹ್ ಅವರು ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ಕೊಡುತ್ತಿದ್ದಾರೆ. ಭಾರತ-ಈಜಿಪ್ಟ್ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧ 75ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲೇ, ಭಾರತದ 74ನೇ ಗಣರಾಜ್ಯೋತ್ಸವಕ್ಕೆ ಈಜಿಪ್ಟ್ ಅಧ್ಯಕ್ಷರು ಆಗಮಿಸುತ್ತಿರುವುದು ಬಹಳ ಪ್ರಾಮುಖ್ಯತೆ ಪಡೆದಿದೆ. ಹಾಗೇ, ಭಾರತ-ಈಜಿಪ್ಟ್ ರಾಜತಾಂತ್ರಿಕ, ವ್ಯಾವಹಾರಿಕ ಸಂಬಂಧದ ದೃಷ್ಟಿಯಿಂದ ಇದೊಂದು ಐತಿಹಾಸಿಕ ಭೇಟಿ ಎಂದೇ ವಿಶ್ಲೇಷಿಸಲಾಗುತ್ತಿದೆ.
ಅಬ್ದುಲ್ ಫತ್ತಾಹ್ ಎಲ್-ಸಿಸಿ ಅವರು ಮಂಗಳವಾರ ಸಂಜೆ, ತಮ್ಮ ದೇಶದ ಐವರು ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ದೆಹಲಿಗೆ ಬಂದಿಳಿದಿದ್ದಾರೆ. ಇವರು ಜನವರಿ 27ರವರೆಗೆ ಭಾರತದಲ್ಲೇ ಇರಲಿದ್ದು, ಜ.26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ಗೌರವ ಸ್ವೀಕರಿಸುವರು. ಪಥಸಂಚಲನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೆಲ್ಲ ವೀಕ್ಷಿಸಲಿದ್ದಾರೆ.
ಇದನ್ನೂ ಓದಿ: Republic Day: ಈ ಬಾರಿ ಗಣರಾಜ್ಯೋತ್ಸವದಂದು ರಾಷ್ಟ್ರಪತಿಗೆ ಸಿಗಲಿದೆ ಸ್ವದೇಶಿ ಕುಶಾಲ ತೋಪು ಗೌರವ; ಇದು ಹೇಗೆ?
ಭಾರತ ತಲುಪಿದ ಈಜಿಪ್ಟ್ ಅಧ್ಯಕ್ಷರನ್ನು ಸ್ವಾಗತಿಸುವ ವೇಳೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಕೇಂದ್ರ ವಿದೇಶಾಂಗ ಇಲಾಖೆ ಸಚಿವ ಎಸ್.ಜೈಶಂಕರ್, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ವಾಣಿಜ್ಯ ಇಲಾಖೆ ಸಚಿವ ಪಿಯುಷ್ ಗೋಯೆಲ್, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರೂ ಇದ್ದರು. ಸಕಲ ಮಿಲಿಟರಿ ಗೌರವದೊಂದಿಗೆ ಅವರನ್ನು ಬರಮಾಡಿಕೊಳ್ಳಲಾಯಿತು. ಈಜಿಪ್ಟ್ ಅಧ್ಯಕ್ಷರು ರಾಷ್ಟ್ರಪತಿ-ಪ್ರಧಾನಿಯೊಂದಿಗೆ ವಿವಿಧ ಮೀಟಿಂಗ್, ಮಾತುಕತೆ ನಡೆಸಲಿದ್ದಾರೆ. ಹಾಗೇ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನೂ ಭೇಟಿಯಾಗಲಿದ್ದಾರೆ.