ನವ ದೆಹಲಿ: 74ನೇ ಗಣರಾಜ್ಯೋತ್ಸವ (Republic Day 2023) ನಿಮಿತ್ತ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರು ಕರ್ತವ್ಯಪಥದಲ್ಲಿ ಧ್ವಜಾರೋಹಣ ನೆರವೇರಿಸಿದರು. ಈ ಕ್ಷಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಇತರ ಕೇಂದ್ರ ಸಚಿವರು ಸಾಕ್ಷಿಯಾದರು. ಹಾಗೇ, ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿರುವ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಉಪಸ್ಥಿತರಿದ್ದರು. ರಾಷ್ಟ್ರಗೀತೆ ಹಾಡಲಾಯಿತು. ಹಾಗೇ, ರಾಷ್ಟ್ರಪತಿಯವರಿಗೆ 21 ಕುಶಾಲ ತೋಪು ಸಿಡಿಸಿ ಗೌರವ ವಂದನೆ ನೀಡಲಾಯಿತು.
ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಆದ ಬಳಿಕ ಅವರಿಗೆ ಇದು ಮೊದಲ ಗಣರಾಜ್ಯೋತ್ಸವ. ಅವರು ಇದೇ ಮೊದಲ ಬಾರಿಗೆ ಕರ್ತವ್ಯಪಥದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ್ದಾರೆ. ಇಂದು ಗಣರಾಜ್ಯೋತ್ಸವ ನಿಮಿತ್ತ ಜ.25ರಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದ ಮುರ್ಮು ಜನರಿಗೆ 74ನೇ ಗಣರಾಜ್ಯೋತ್ಸವದ ಶುಭಾಶಯ ಕೋರಿದ್ದರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು, ಸಂವಿಧಾನ ಜಾರಿಯಾದ ನಂತರದಿಂದ ಇಂದಿನವರೆಗೆ ಭಾರತದ್ದು ಅದ್ಭುತವಾದ ಯಾನ. ಜಗತ್ತಿನ ಹಲವು ರಾಷ್ಟ್ರಗಳಿಗೆ ನಮ್ಮ ರಾಷ್ಟ್ರ ಮಾದರಿ. ಭಾರತದ ಇತಿಹಾಸ ಕೇಳಿದರೆ ಇಲ್ಲಿನ ಪ್ರತಿಯೊಬ್ಬ ಪ್ರಜೆಗೂ ಖಂಡಿತ ಹೆಮ್ಮೆ ಎನ್ನಿಸುತ್ತದೆ. ಒಂದು ದೇಶವಾಗಿ ನಾವು ಇಂದು ಏನು ಸಾಧಿಸಿದ್ದೇವೋ, ಅದನ್ನು ಸಂಭ್ರಮಿಸುವುದೇ ಗಣರಾಜ್ಯೋತ್ಸವ ಆಚರಣೆ’ ಎಂದು ಹೇಳಿದ್ದರು.
ಹಾಗೇ ಕರ್ತವ್ಯಪಥದಲ್ಲೂ ಇದೇ ಮೊದಲ ಗಣರಾಜ್ಯೋತ್ಸವ ಆಚರಣೆಯಾಗಿದೆ. ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ವರೆಗಿನ ಮಾರ್ಗವನ್ನು ಈ ಮೊದಲು ರಾಜಪಥ್ ಎಂದು ಕರೆಯಲಾಗುತ್ತಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಈ ಪಥಕ್ಕೆ ಕರ್ತವ್ಯಪಥ ಎಂದು ನಾಮಕರಣ ಮಾಡಿ, ಪ್ರಧಾನಿ ನರೇಂದ್ರ ಮೋದಿಯವರು ಮರು ಉದ್ಘಾಟನೆ ಮಾಡಿದ್ದಾರೆ. ಹೀಗೆ ಮರು ಲೋಕಾರ್ಪಣೆಗೊಂಡ ಕರ್ತವ್ಯಪಥದಲ್ಲಿ ಇದೇ ಮೊದಲ ಗಣರಾಜ್ಯೋತ್ಸವ ನಡೆಯುತ್ತಿದೆ.
ಇದನ್ನೂ ಓದಿ: Republic day 2023: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ರಸ್ತೆ ಸಂಚಾರದಲ್ಲಿ ಬದಲಾವಣೆ