Site icon Vistara News

Republic Day Tableau: ಕರ್ತವ್ಯಪಥದಲ್ಲಿ 23 ಸ್ತಬ್ಧಚಿತ್ರ ಪ್ರದರ್ಶನಕ್ಕೆ ಸಿದ್ಧತೆ; ಯಾವ ರಾಜ್ಯಗಳ ಥೀಮ್​ ಏನು? ಇಲ್ಲಿದೆ ಮಾಹಿತಿ

Republic Day 2023 Tableau themes of States

ನವ ದೆಹಲಿ, ವಿಸ್ತಾರ ನ್ಯೂಸ್​ ವರದಿ: ಗಣರಾಜ್ಯೋತ್ಸವಕ್ಕೆ (Republic Day 2023) ರಾಷ್ಟ್ರರಾಜಧಾನಿ ದೆಹಲಿ ಸಜ್ಜಾಗಿದೆ. ಈ ಬಾರಿ ಕರ್ತವ್ಯಪಥದಲ್ಲಿ ಸಾಗಲು 17 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಮತ್ತು ವಿವಿಧ ಸಚಿವಾಲಯಗಳ 6 ಸ್ತಬ್ಧಚಿತ್ರಗಳು (Republic Day Tableau) ಸಿದ್ಧಗೊಂಡಿವೆ. ಕರ್ನಾಟಕದಿಂದ ಈ ಬಾರಿ ನಾರಿಶಕ್ತಿ ಮತ್ತು ಮಹಿಳಾ ಸಬಲೀಕರಣದ ಸ್ತಬ್ಧಚಿತ್ರ (Republic Day Tableau) ಪ್ರದರ್ಶನಗೊಳ್ಳಲಿದೆ. ಇನ್ನುಳಿದಂತೆ ಅಸ್ಸಾಂ, ಅರುಣಾಚಲ ಪ್ರದೇಶ, ತ್ರಿಪುರ, ಪಶ್ಚಿಮ ಬಂಗಾಳ, ಜಮ್ಮು ಕಾಶ್ಮೀರ, ಲಡಾಖ್, ದಾದರ್ ನಗರ್ ಹವೇಲಿ, ಡೀಯು&ದಾಮನ್, ಗುಜರಾತ್, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ್, ಜಾರ್ಖಂಡ್, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳ, ಕೇಂದ್ರ ಗೃಹ ಸಚಿವಾಲಯದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಕೃಷಿ ಸಚಿವಾಲಯ, ಬುಡಕಟ್ಟು ವ್ಯವಹಾರ ಹಾಗೂ ಸಂಸ್ಕೃತಿ ಸಚಿವಾಲಯಗಳಿಂದ ವಿವಿಧ ಟ್ಯಾಬ್ಲೋಗಳು ಪ್ರದರ್ಶನಗೊಳ್ಳಲಿವೆ.

ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳ ಥೀಮ್​ ವಿವರ ಇಲ್ಲಿದೆ.
ಅಸ್ಸಾಂ:
ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿರುವಂತಹ ಅಹೋಮ್ ಜನರಲ್ ಲಚಿತ್ ಬೋರ್ಫುಕನ್ ಮತ್ತು ಕಾಮಾಕ್ಯ ದೇವಾಲಯದಂತಹ ಸಾಂಸ್ಕೃತಿಕ ಪ್ರತಿಮೆಗಳನ್ನು ಅಸ್ಸಾಂ ರಾಜ್ಯ ಸರ್ಕಾರ ಈ ಸಲ ಕರ್ತವ್ಯಪಥ್​​ನಲ್ಲಿ ಪ್ರದರ್ಶನ ಮಾಡಲಿದೆ.

ಅರುಣಾಚಲ ಪ್ರದೇಶ: ಈ ರಾಜ್ಯಪ್ರವಾಸೋದ್ಯಮಕ್ಕೆ ವಿಶೇಷ ಆದ್ಯತೆ ನೀಡುತ್ತಿದ್ದು, ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟ ಸ್ತಬ್ಧಚಿತ್ರವನ್ನ ಪ್ರದರ್ಶನ ಮಾಡಲಿದೆ. 1962ರ ಥವಾಂಗ್ ಯುದ್ಧ, ರಾಜ್ಯದ ಸುಪ್ರಸಿದ್ಧ ಶಿಂಗ್ಫೋ ಹಬ್ಬ ಹಾಗೂ ಡೋನ್ಯಿ ಪೋಲೊ ವಿಮಾನ ನಿಲ್ದಾಣ ಈ ಬಾರಿಯ ಥೀಮ್ ಆಗಿರಲಿದೆ.

ತ್ರಿಪುರ: ತ್ರಿಪುರ ರಾಜ್ಯವೂ ಸಹ ಈ ಬಾರಿ ನಾರಿಶಕ್ತಿ ಥೀಮ್ ಉಳ್ಳ ಸ್ತಬ್ಧಚಿತ್ರವನ್ನ ಪ್ರದರ್ಶನ ಮಾಡಲು ಸಿದ್ಧತೆ ಮಾಡಿಕೊಂಡಿದೆ

ಪಶ್ಚಿಮ ಬಂಗಾಳ: ಈ ರಾಜ್ಯದ ವಿಶೇಷವಾಗಿರುವ ದುರ್ಗಾ ಪೂಜೆಯನ್ನು ಬಿಂಬಿಸುವ ಸ್ತಬ್ಧಚಿತ್ರವನ್ನೇ ಪಶ್ಚಿಮ ಬಂಗಾಳ ರಾಜ್ಯವು ಗಣರಾಜ್ಯೋತ್ಸವದಲ್ಲಿ ಪ್ರದರ್ಶಿಸಲಿದೆ. ಹಾಗೇ, ಇಲ್ಲಿನ ದುರ್ಗಾ ಪೂಜೆ ಯುನೆಸ್ಕೋದ ಸಾಂಸ್ಕೃತಿಕ ಪಟ್ಟಿಗೆ ಸೇರಿರುವುದನ್ನೂ ಈ ಸಲ ಟ್ಯಾಬ್ಲೋದಲ್ಲಿ ಉಲ್ಲೇಖ ಮಾಡಲಾಗಿದೆ.

ಜಮ್ಮು ಮತ್ತು ಕಾಶ್ಮೀರ: ಇಲ್ಲಿನ ಅನಂತ್​​ನಾಗ್​ ಜಿಲ್ಲೆಯಲ್ಲಿರುವ ಹಿಂದೂ ಪವಿತ್ರ ಯಾತ್ರಾ ಸ್ಥಳವಾದ ಅಮರನಾಥ್​​ದ ಶಿವಲಿಂಗ ಈ ಬಾರಿ ಆ ರಾಜ್ಯದ ಟ್ಯಾಬ್ಲೋ ಆಗಿದೆ.

ದಾದರ್ ಆ್ಯಂಡ್​ ನಗರ ಹವೇಲಿ: ಈ ಕೇಂದ್ರಾಡಳಿತ ಪ್ರದೇಶವೂ ಕೂಡ ಪ್ರವಾಸೋದ್ಯಮಕ್ಕೆ ಒತ್ತು ಕೊಡುವ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವದಲ್ಲಿ ಪ್ರದರ್ಶನಕ್ಕೆ ಇಟ್ಟಿದೆ. ಇಲ್ಲಿನ ಪ್ರವಾಸಿ ತಾಣಗಳ ವೈಶಿಷ್ಟ್ಯತೆ ಬಿಂಬಿಸುವ ತಮಾಮ್ ದೀವ್ ಥೀಮ್​​ನ್ನು ಟ್ಯಾಬ್ಲೋದಲ್ಲಿ ಅಳವಡಿಸಲಾಗಿದೆ.

ಹರಿಯಾಣ: ಭಗವಾನ್ ಶ್ರೀಕೃಷ್ಣ, ಮಹಾಭಾರತ ಕಾಲದಲ್ಲಿ ದ್ರೋಣಚಾರ್ಯರು ಅವರ ಶಿಷ್ಯರಿಗೆ ವಿದ್ಯೆ ಹೇಳಿಕೊಟ್ಟ ಪರಿ ಹಾಗೂ ಕುರುಕ್ಷೇತ್ರವನ್ನು ಬಿಂಬಿಸುವ ಸ್ತಬ್ಧಚಿತ್ರವನ್ನು ಈ ಸಲ ಹರಿಯಾಣ ಪ್ರದರ್ಶಿಸಲಿದೆ.

ಉತ್ತರಾಖಂಡ್: ಇಲ್ಲಿನ ಆಲ್ಮೋರಾ ರಾಜ್ಯದ ಹಿಂದೂಗಳ ಪವಿತ್ರ ಸ್ಥಳದಲ್ಲಿ ಒಂದಾದ ಜಾಗೇಶ್ವರ್ ಧಾಮ್ ದೇವಾಲಯ, ಜ್ಯೋತಿರ್ಲಿಂಗ ಹಾಗೂ ಸುತ್ತಲಿನ ಸ್ವಚ್ಛಂದ ಪರಿಸರವನ್ನು ಬಿಂಬಿಸುವ ಸ್ತಬ್ಧಚಿತ್ರ ಪ್ರದರ್ಶನಗೊಳ್ಳಲಿದೆ.

ಮಹಾರಾಷ್ಟ್ರ: ರಾಜ್ಯದಲ್ಲಿ ಬಹು ಪ್ರಸಿದ್ಧಿ ಪಡೆದಿರುವ ಸಾಡೆ ತೀನ್ ಶಕ್ತಿ ಪೀಠದ ಮಹತ್ವ ಹಾಗೂ ಸ್ತ್ರೀಶಕ್ತಿ ಮಹತ್ವವನ್ನ ಸಾರುವ ಟ್ಯಾಬ್ಲೋ ಪ್ರದರ್ಶನಕ್ಕೆ ಮಹಾರಾಷ್ಟ್ರ ಸಿದ್ಧತೆ ನಡೆಸಿದೆ.

ಇದನ್ನೂ ಓದಿ: Republic Day 2023: ಕರ್ನಾಟಕದ ನಾರಿಶಕ್ತಿ ಟ್ಯಾಬ್ಲೋ ಜತೆ ಉತ್ತರ ಕನ್ನಡದ ಹಾಲಕ್ಕಿ ಸುಗ್ಗಿ ಕುಣಿತ

ತಮಿಳುನಾಡು: ಈ ಬಾರಿ ರಾಜ್ಯದಲ್ಲಿನ ನಾರಿಶಕ್ತಿ ಪ್ರದರ್ಶನಕ್ಕೆ ತಮಿಳುನಾಡು ಮುಂದಾಗಿದೆ. ಸಂಗೀತ ವಾದ್ಯದೊಂದಿಗೆ ಎಂಎಸ್ ಸುಬ್ಬುಲಕ್ಷ್ಮಿ ಹಾಗೂ ವೈದ್ಯರ ಬ್ಯಾಗ್ ಹಿಡಿದಿರುವ ಡಾ ಮುತ್ತುಲಕ್ಷ್ಮಿ ರೆಡ್ಡಿ ಅಮ್ಮಯ್ಯರ್‌, ತಂಜಾವೂರು ಬಾಲಸರಸ್ವತಿ ನೃತ್ಯ, ಮುವಲೂರಿನ ರಾಮಾಮೃತಮ್ಮನ ಪ್ರತಿಮೆ ಇರಲಿದೆ.

ಕೇರಳ: ತೆಂಗಿನ ನಾರು ಮತ್ತು ಮರದಿಂದ ತಯಾರಾದ ಬೇಪೋರ್ ಉರು ಎಂಬ ಸಾಂಪ್ರದಾಯಿಕವಾದ ದೋಣಿ, 96 ನೇ ವಯಸ್ಸಿನಲ್ಲಿ ಸಾಕ್ಷರತೆ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿ, ನಂತರ ಕೇಂದ್ರ ಸರ್ಕಾರದಿಂದಲೂ ನಾರಿಶಕ್ತಿ ಪ್ರಶಸ್ತಿಗೆ ಭಾಜನರಾಗಿದ್ದ ಕಾರ್ತ್ಯಾಯಿನಿ ಅಮ್ಮನವರ ಪ್ರತಿಮೆಯನ್ನೊಳಗೊಂಡ ಸ್ತಬ್ಧಚಿತ್ರವನ್ನು ಕೇರಳ ಸರ್ಕಾರ ಸಿದ್ಧಪಡಿಸಿಕೊಂಡಿದೆ.

ಸಂಸ್ಕೃತಿ ಸಚಿವಾಲಯ: ಈ ಸಚಿವಾಲಯವು ಪಶ್ಚಿಮ ಬಂಗಾಳದ ಪುಡುದಿಯಾ, ಚಾವು ನೃತ್ಯ ಹಾಗೂ ಕೇರಳದ ನೃತ್ಯ ಪ್ರಕಾರಗಳನ್ನ ತನ್ನ ಸ್ತಬ್ಧಚಿತ್ರದಲ್ಲಿ ಪ್ರದರ್ಶಿಸಲಿದೆ.

ಕೇಂದ್ರ ಗೃಹ ಸಚಿವಾಲಯದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ: ಭಾರತೀಯ ವಾಯುಪಡೆ, ಯುದ್ಧ ವಿಮಾನಗಳು ಹಾಗೂ ಭಾರತೀಯ ಸೇನೆ, ಇಲ್ಲಿನ ಮಹಿಳಾ ಸೈನಿಕರನ್ನೊಳಗೊಂಡ ನಾರಿಶಕ್ತಿ ಥೀಮ್ ಉಳ್ಳ ಸ್ತಬ್ಧಚಿತ್ರವನ್ನು ಪ್ರದರ್ಶನ ಮಾಡಲಿದೆ.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ: Together we can do it ಎಂಬ ಘೋಷ ವಾಕ್ಯದೊಂದಿಗೆ ನಶಾ ಮುಕ್ತ ಭಾರತ ನಮ್ಮ ಗುರಿ ಎಂಬ ಟ್ಯಾಬ್ಲೋವನ್ನು ಪ್ರದರ್ಶಿಸಲಿದೆ.

ಬುಡಕಟ್ಟು ವ್ಯವಹಾರ ಹಾಗೂ ಸಂಸ್ಕೃತಿ ಸಚಿವಾಲಯ: ಈ ಸಚಿವಾಲಯವು ಆಧುನಿಕ ವಸತಿ ಶಾಲೆ (Modern residential school) ಹಾಗೂ ಬುಡಕಟ್ಟು ಜನಾಂಗದ ಮಕ್ಕಳಿಗೆ ಉಚಿತ ಶಿಕ್ಷಣ ಎಂಬುದರ ಬಗೆಗಿನ ಟ್ಯಾಬ್ಲೋ ಪ್ರದರ್ಶನ ಮಾಡಲಿದೆ.

Exit mobile version