Site icon Vistara News

Republic Day 2024: ಗಣರಾಜ್ಯೋತ್ಸವ ಸಂಭ್ರಮ; ದೆಹಲಿಯಲ್ಲಿ ಪರೇಡ್‌ಗೆ ಕ್ಷಣಗಣನೆ

Republic Day

Republic Day 2024: Droupadi Murmu Unfurls The National Flag

ನವದೆಹಲಿ: ದೇಶವು 75ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿದೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ (Republic Day 2024) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು (Droupadi Murmu) ಧ್ವಜಾರೋಹಣ ನೆರವೇರಿಸಿದ್ದಾರೆ. ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ ಅವರ ಸಮ್ಮುಖದಲ್ಲಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿದ್ದಾರೆ. ಇದಾದ ಬಳಿಕ ಬೆಳಗ್ಗೆ 10.30ರಿಂದ ವಿಜಯ್‌ ಚೌಕ್‌ನಿಂದ ಕರ್ತವ್ಯ ಪಥದವರೆಗೆ ಪರೇಡ್‌ ನಡೆಯಲಿದೆ. ದೇಶದ ಹಲವು ರಾಜ್ಯಗಳಿಂದ ಆಗಮಿಸಿದ ಸ್ತಬ್ಧಚಿತ್ರಗಳ ಮೆರವಣಿಗೆ ಕೂಡ ನಡೆಯಲಿದೆ.

ಶುಭಕೋರಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ. “75ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಜೈ ಹಿಂದ್”‌ ಎಂದು ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಪರೇಡ್‌ ವೀಕ್ಷಣೆಗೆ 77 ಸಾವಿರ ಜನರಿಗೆ ಅವಕಾಶ ನೀಡಲಾಗಿದೆ. ಪರೇಡ್‌ ವೀಕ್ಷಿಸುವ 77 ಸಾವಿರ ಜನರಲ್ಲಿ 42 ಸಾವಿರ ಸಾರ್ವಜನಿಕರೂ ಇದ್ದಾರೆ. ಭಾರತದ 75 ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಆ ದಿನದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಅರಿತುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಹೆಚ್ಚುವರಿಯಾಗಿ ಜನವರಿ 26ರಂದು ಗಣರಾಜ್ಯೋತ್ಸವವನ್ನು ಏಕೆ ನಿರ್ದಿಷ್ಟವಾಗಿ ಆಚರಿಸಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕೂಡ ಅಗತ್ಯ..

ಜನವರಿ 26ರ ಆಯ್ಕೆಯನ್ನು ಅರ್ಥಮಾಡಿಕೊಳ್ಳಲು ಭಾರತದ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕಾಗುತ್ತದೆ. ಜನವರಿ 26, 1930ರಂದು ಮಹಾತ್ಮ ಗಾಂಧಿ ನೇತೃತ್ವದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ‘ಪೂರ್ಣ ಸ್ವರಾಜ್’ ಅಥವಾ ಸಂಪೂರ್ಣ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು. ಇದು ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ಪಡೆಯುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಅದಕ್ಕಿಂತ ಹೆಚ್ಚಾಗಿ ಪ್ರಜಾಪ್ರಭುತ್ವ ಮತ್ತು ಸಾರ್ವಭೌಮತ್ವದ ತತ್ವಗಳಿಂದ ದೇಶವನ್ನು ನಿರ್ಮಿಸುವುದಕ್ಕೆ ಇಲ್ಲಿಯೇ ಅಡಿಗಲ್ಲು ಹಾಕಲಾಯಿತು.

ಇದನ್ನೂ ಓದಿ: Republic Day Parade 2024: ಮಹಿಳೆಯರ ಪಾರುಪತ್ಯ, ಮ್ಯಾಕ್ರಾನ್‌ ಅತಿಥಿ; ಇಂದಿನ ಗಣರಾಜ್ಯ ಪರೇಡ್ ವಿಶೇಷತೆಗಳು ಏನೇನು?

ಪೂರ್ಣ ಸ್ವರಾಜ್ಯ ಘೋಷಣೆಯ ಎರಡು ದಶಕಗಳ ನಂತರ ಡಾ.ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಮಿತಿಯು ಭಾರತದ ಸಂವಿಧಾನವನ್ನು ರಚಿಸಿತು. ಇದು ಭಾರತ 1947ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕ ನಡೆದ ಮುಖ್ಯ ಘಟನೆಯಾಗಿದೆ. ಈ ಸಂವಿಧಾನವನ್ನು ಜನವರಿ 26, 1950 ರಂದು ಭಾರತ ಅಂಗೀಕರಿಸಿತು. ಇದರ ಮೂಲಕ ರಾಷ್ಟ್ರದ ಆಡಳಿತಕ್ಕೆ ಅಡಿಪಾಯ ಹಾಕಲಾಯಿತು. ಭಾರತ ಗಣರಾಜ್ಯದ (ಒಕ್ಕೂಟ ವ್ಯವಸ್ಥೆಯ) ಜನನಕ್ಕೆ ನಾಂದಿ ಹಾಡಿತು. ಹೀಗಾಗಿ ಜನವರಿ 26ರಂದು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ. ಹೀಗಾಗಿ ಈ ದಿನವನ್ನು ಸಂಪೂರ್ಣ ಸ್ವರಾಜ್ಯ ಘೋಷಣೆಯ ಹಿನ್ನೆಲೆಯಲ್ಲೂ ನೋಡಲಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version