ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರು ಮೀಸಲಾತಿ ಪರ ಮಾತನಾಡಿದ್ದಾರೆ. “ಸಮಾಜದಲ್ಲಿ ತಾರತಮ್ಯ ಇರುವವರೆಗೆ ಮೀಸಲಾತಿ ಮುಂದುವರಿಯಬೇಕು. ಅಲ್ಲಿಯವರೆಗೆ ಸಂವಿಧಾನ ನೀಡಿರುವ ಮೀಸಲಾತಿಯನ್ನು ನಾವು ಬೆಂಬಲಿಸುತ್ತೇವೆ” ಎಂದು ಅವರು ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಆರ್‌ಎಸ್‌ಎಸ್ ಮೀಸಲಾತಿ ವಿರೋಧಿ ಎಂಬ ಮಾತುಗಳು ಆಗಾಗ ಕೇಳಿಬರುವ ಮಧ್ಯೆಯೇ ಮೋಹನ್ ಭಾಗವತ್ ನೀಡಿದ ಹೇಳಿಕೆ ಮಹತ್ವ ಪಡೆದಿದೆ.
“ಸಾಮಾಜಿಕ ವ್ಯವಸ್ಥೆಯಲ್ಲಿ ನಮ್ಮವರನ್ನೇ ನಾವು ಹಿಂದೆ ತಳ್ಳಿದ್ದೇವೆ. ನಾವು ಅವರ ಬಗ್ಗೆ ಕಾಳಜಿ, ಮಾನವೀಯತೆ ತೋರಲಿಲ್ಲ. ಇದನ್ನೇ ನಾವು 2 ಸಾವಿರ ವರ್ಷಗಳವರೆಗೆ ಮಾಡಿದೆವು. ನಾವು ಅವರಿಗೆ ಸಮಾನತೆ ನೀಡುವವರೆಗೆ, ತಾರತಮ್ಯ ತೊಲಗುವವರೆಗೆ ಮೀಸಲಾತಿ ಮುಂದುವರಿಯಬೇಕು. ಅವರಿಗೆ ಸಮಾನತೆ ಸಿಗುವವರೆಗೆ ಆರ್‌ಎಸ್‌ಎಸ್ ಮೀಸಲಾತಿಯನ್ನು ಬೆಂಬಲಿಸುತ್ತದೆ” ಎಂದು ಹೇಳಿದರು.
“ಸಮಾಜದ ಒಂದು ವರ್ಗದ ಜನರನ್ನು ತಾರತಮ್ಯ ಮಾಡಲಾಗಿದೆ. ಅವರನ್ನು ಅಸಮಾನರನ್ನಾಗಿ ಕಾಣಲಾಗಿದೆ. ನಾವು (ಅಸಮಾನತೆ, ತಾರತಮ್ಯ ಎದುರಿಸದವರು) 200 ವರ್ಷ ಸ್ವಲ್ಪ ತೊಂದರೆ ಅನುಭವಿಸಿದರೂ ಪರವಾಗಿಲ್ಲ. ತಾರತಮ್ಯ ಎದುರಿಸಿದವರಿಗೆ ಸಮಾನತೆ ಸಿಗುವವರೆಗೆ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು. ಅವರು ಮೀಸಲಾತಿ ಸೇರಿ ಹಲವು ವಿಶೇಷ ಸವಲತ್ತುಗಳನ್ನು ಪಡೆಯಬೇಕು” ಎಂದು ತಿಳಿಸಿದರು.
ಅಖಂಡ ಭಾರತ ಕುರಿತು ಪ್ರತಿಕ್ರಿಯೆ
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬ ಅಖಂಡ ಭಾರತದ ಕುರಿತು ಮೋಹನ್ ಭಾಗವತ್ ಅವರಿಗೆ ಪ್ರಶ್ನೆ ಕೇಳಿದ. ಆಗ ಮೋಹನ್ ಭಾಗವತ್, “ಅಖಂಡ ಭಾರತವನ್ನು ಈಗಿನ ಯುವಪೀಳಿಗೆಯೇ ಕಣ್ಣಾರೆ ನೋಡಲಿದೆ. 1947ರಲ್ಲಿ ದೇಶವನ್ನು ವಿಭಜಿಸಿದವರೇ ಈಗ ಅಖಂಡ ಭಾರತದ ಬಗ್ಗೆ ಮಾತನಾಡುತ್ತಿದ್ದಾರೆ” ಎಂದರು. ‘1947ರಿಂದ 2002ರವರೆಗೆ ಆರ್‌ಎಸ್‌ಎಸ್ ಕಚೇರಿಯಲ್ಲಿ ತಿರಂಗಾ ಹಾರಿಸುತ್ತಿರಲಿಲ್ಲವೇ’ ಎಂದು ಮತ್ತೊಬ್ಬ ಕೇಳಿದ ಪ್ರಶ್ನೆಗೆ, “ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದಂದು ಆರ್‌ಎಸ್‌ಎಸ್ ಕಚೇರಿಯಲ್ಲಿ ತಿರಂಗಾ ಹಾರುತ್ತದೆ” ಎಂದು ಉತ್ತರಿಸಿದರು.