ಹೈದರಾಬಾದ್: ಉಚಿತ ಕುಡಿಯುವ ನೀರನ್ನು (Free water) ಒದಗಿಸಲು ವಿಫಲವಾದ ಮತ್ತು ಕಡ್ಡಾಯವಾಗಿ ಸೇವಾ ಶುಲ್ಕವನ್ನು ವಿಧಿಸಿದ್ದಕ್ಕಾಗಿ ಹೈದರಾಬಾದ್‌ನ ರೆಸ್ಟೋರೆಂಟ್‌ಗೆ ದಂಡದ ಬರೆ ಬಿದ್ದಿದೆ. 5,000 ರೂ.ಗಳ ಪರಿಹಾರವನ್ನು ಗ್ರಾಹಕನಿಗೆ ನೀಡುವಂತೆ ಹೈದರಾಬಾದ್‌ನ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ-3 ತನ್ನ ತೀರ್ಪಿನಲ್ಲಿ ತಿಳಿಸಿದೆ. 45 ದಿನಗಳಲ್ಲಿ ಗ್ರಾಹಕನಿಗೆ ಪರಿಹಾರ ಧನ ಪಾವತಿಸುವಂತೆ ಜುಬಿಲಿ ಹಿಲ್ಸ್‌ನ ರೆಸ್ಟೋರೆಂಟ್‌ಗೆ ಸೂಚಿಸಿದೆ.
ಘಟನೆಯ ವಿವರ
ದೂರುದಾರ ಸಿಕಂದರಾಬಾದ್ ನಿವಾಸಿಯಾಗಿದ್ದು, ಕೆಲವು ದಿನಗಳ ಹಿಂದೆ ಸಿಬಿಐ ಕಾಲನಿಯಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ನಡೆದ ಕಹಿ ಅನುಭವವನ್ನು ವಿವರಿಸಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು. ʼʼಪ್ಲಾಸ್ಟಿಕ್ ವಸ್ತುಗಳ ಅಲರ್ಜಿಯಿಂದಾಗಿ ನೀರು ಒದಗಿಸುವಂತೆ ವಿನಂತಿಸಿದ್ದೆ. ಆದರೆ ರೆಸ್ಟೋರೆಂಟ್ ಸಿಬ್ಬಂದಿ ನಿರಾಕರಿಸಿದ್ದರು. ಬಳಿಕ ರೆಸ್ಟೋರೆಂಟ್‌ನ ಸ್ವಂತ ಲೇಬಲ್‌ನ 500 ಎಂಎಲ್ ನೀರಿನ ಬಾಟಲಿಯನ್ನು 50 ರೂ.ಗೆ ಖರೀದಿಸುವ ಅನಿವಾರ್ಯತೆ ಎದುರಾಯಿತುʼʼ ಎಂದು ಅವರು ದೂರಿನಲ್ಲಿ ತಿಳಿಸಿದ್ದರು.
ʼʼಎರಡು ಬಗೆಯ ಆಹಾರ ಮತ್ತು ನೀರಿನ ಬಾಟಲಿಗೆ ಒಟ್ಟು 630 ರೂ.ಗಳ ಬಿಲ್ ಆಗಿತ್ತು. ಅದರ ಮೇಲೆ ರೆಸ್ಟೋರೆಂಟ್ 31.50 ರೂ.ಗಳ ಸೇವಾ ಶುಲ್ಕವನ್ನು ವಿಧಿಸಿತ್ತು. ರೆಸ್ಟೋರೆಂಟ್‌ನ ನೀರಿನ ಬಾಟಲಿ ಮತ್ತು ಸೇವಾ ಶುಲ್ಕ ಎರಡರ ಮೇಲೂ 5% ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿ ಹಾಕಲಾಗಿದ್ದು, ಕೊನೆಗೆ ಒಟ್ಟು ಬಿಲ್ 695 ರೂ.ಗೆ ಆಗಿತ್ತುʼʼ ಎಂದು ಗ್ರಾಹಕ ತಿಳಿಸಿದ್ದಾರೆ.
ಇದನ್ನು ಗಮನಿಸಿದ ಆಯೋಗವು ತನ್ನ ತೀರ್ಪಿನಲ್ಲಿ ಜಿಎಸ್‌ಟಿಯೊಂದಿಗೆ ಸೇವಾ ಶುಲ್ಕವನ್ನು ಮರುಪಾವತಿಸುವಂತೆ ರೆಸ್ಟೋರೆಂಟ್‌ಗೆ ಆದೇಶಿಸಿದೆ. ಹೆಚ್ಚುವರಿಯಾಗಿ ಮಾರ್ಚ್ 22ಕ್ಕೆ ಅನ್ವಯವಾಗುವಂತೆ 45 ದಿನಗಳಲ್ಲಿ ಸಂತ್ರಸ್ತ ಗ್ರಾಹಕರಿಗೆ 5,000 ರೂ.ಗಳ ಪರಿಹಾರ ಮತ್ತು 1,000 ರೂ.ಗಳ ದಾವೆ ವೆಚ್ಚವನ್ನು ಭರಿಸಲು ನಿರ್ದೇಶಿಸಿದೆ.
ತೆಲಂಗಾಣ ಸರ್ಕಾರದ ಎಂಎ & ಯುಡಿ ( MA&UD) ಇಲಾಖೆ 2023ರಲ್ಲಿ ಜಿಎಚ್ಎಂಸಿ ವ್ಯಾಪ್ತಿಯಲ್ಲಿರುವ ಎಲ್ಲ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಶುದ್ಧೀಕರಿಸಿದ ನೀರನ್ನು ಮತ್ತು ಬಾಟಲಿ ನೀರನ್ನು ಉಚಿತವಾಗಿ ಒದಗಿಸಬೇಕು ಎನ್ನುವ ಕಾನೂನನ್ನು ಕಡ್ಡಾಯಗೊಳಿಸಿತ್ತು. ಇದು ಎಲ್ಲ ಗ್ರಾಹಕರಿಗೆ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಗುರಿ ಹೊಂದಿದೆ. ಉಚಿತ ನೀರನ್ನು ನಿರಾಕರಿಸುವ ಮತ್ತು ಸೇವಾ ಶುಲ್ಕವನ್ನು ಸುಮ್ಮನೆ ವಿಧಿಸುವ ಅಭ್ಯಾಸ ಸ್ವೀಕಾರಾರ್ಹವಲ್ಲ ಎಂದು ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿ ಆಯೋಗ ಈ ಆದೇಶ ಹೊರಡಿಸಿದೆ.
ಇತ್ತೀಚೆಗೆ ನಡೆದ ಮತ್ತೊಂದು ಘಟನೆಯಲ್ಲಿ ಸಸ್ಯಾಹಾರಿ ಗ್ರಾಹಕರಿಗೆ ಮಾಂಸಾಹಾರ ವಿತರಿಸಿದ್ದಾಕ್ಕಾಗಿ ನಗರದ ಬೇರೆ ರೆಸ್ಟೋರೆಂಟ್ ಮತ್ತು ಸ್ವಿಗ್ಗಿಗೆ 10,000 ರೂ.ಗಳ ದಂಡ ವಿಧಿಸಿ ಆದೇಶ ಹೊರಡಿಸಲಾಗಿತ್ತು. ಈ ಮೊತ್ತವನ್ನು ಗ್ರಾಹಕರಿಗೆ ನೀಡುವಂತೆ ಸೂಚಿಸಲಾಗಿತ್ತು. ದೂರುದಾರರು ಸಲ್ಲಿಸಿದ ಪುರಾವೆಗಳಲ್ಲಿ ಸಸ್ಯಾಹಾರ ಎಂದು ವಿತರಿಸಿದ ರೋಲ್‌ನಲ್ಲಿ ಚಿಕನ್ ತುಂಡು ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ತೀರ್ಪು ಪ್ರಕಟಿಸಲಾಗಿತ್ತು.
ಇದನ್ನೂ ಓದಿ: Beef Samosa: ಗೋಮಾಂಸ ಬೆರೆತ ಸಮೋಸಾ ಮಾರಾಟ; 6 ಮಂದಿಯ ಬಂಧನ