ಲಖನೌ: ಭ್ರಷ್ಟಾಚಾರಕ್ಕೂ, ಭಾರತಕ್ಕೂ ಅವಿನಾಭಾವ ನಂಟಿದೆ. ಬಹುತೇಕ ಸರ್ಕಾರಿ ಕಚೇರಿಗಳಲ್ಲಿ, ಇಲಾಖೆಗಳಲ್ಲಿ ‘ಕೈ ಬಿಸಿ’ ಮಾಡದೆ ಜನರ ಕೆಲಸ ಆಗುವುದಿಲ್ಲ. ತುಂಬ ಸಂದರ್ಭದಲ್ಲಿ ಲಂಚ ತೆಗೆದುಕೊಳ್ಳುವ ಅಧಿಕಾರಿಗಳ ವಿರುದ್ಧ ದೂರು ನೀಡಿದರೂ, ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಆದರೆ, ಉತ್ತರ ಪ್ರದೇಶದಲ್ಲಿ ರೈಲ್ವೆ ಇಲಾಖೆಯ ೮೨ ವರ್ಷದ ನಿವೃತ್ತ ನೌಕರರೊಬ್ಬರು ೩೨ ವರ್ಷದ ಹಿಂದೆ ಲಂಚ ಪಡೆದಿದ್ದಕ್ಕೆ (Viral News) ಈಗ ಶಿಕ್ಷೆಯಾಗಿದೆ.
ರಾಮ ನಾರಾಯಣ ವರ್ಮಾ ೧೯೯೧ರಲ್ಲಿ ರೈಲ್ವೆ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಇದೇ ವೇಳೆ ಅವರು ೧೦೦ ರೂ. ಲಂಚ ಪಡೆದಿದ್ದರು. ಪ್ರಕರಣದ ತನಿಖೆಯಾಗಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಸಿಬಿಐ ವಿಶೇಷ ನ್ಯಾಯಾಲಯವು ಇವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. “ವಯಸ್ಸಿನ ಕಾರಣದಿಂದಾಗಿ ಜೈಲು ಶಿಕ್ಷೆಯ ಅವಧಿಯನ್ನು ಕಡಿತಗೊಳಿಸಬೇಕು” ಎಂದು ರಾಮ ನಾರಾಯಣ ವರ್ಮಾ ಮನವಿ ಮಾಡಿದರಾದರೂ ಇದನ್ನು ನ್ಯಾಯಾಧೀಶ ಅಜಯ್ ವಿಕ್ರಮ್ ಸಿಂಗ್ ನಿರಾಕರಿಸಿದರು.
“ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾದಂತಾಗುತ್ತದೆ. ಹಾಗಾಗಿ, ನಿಮಗೆ ಜೈಲು ಶಿಕ್ಷೆಯ ಅವಧಿಯನ್ನು ಕಡಿತಗೊಳಿಸಲು ಆಗುವುದಿಲ್ಲ” ಎಂದು ನ್ಯಾಯಾಧೀಶ ಸ್ಪಷ್ಟಪಡಿಸಿದರು. ನಿವೃತ್ತ ರೈಲ್ವೆ ಚಾಲಕ ರಾಮ್ ಕುಮಾರ್ ತಿವಾರಿ ಎಂಬುವವರಿಗೆ ದಾಖಲಾತಿ ನೀಡಲು ರಾಮ ನಾರಾಯಣ ವರ್ಮಾ ೧೦೦ ಲಂಚ ರೂ. ಪಡೆದಿದ್ದರು. ಬಳಿಕ ವರ್ಮಾ ವಿರುದ್ಧ ತಿವಾರಿ ಎಫ್‌ಐಆರ್ ದಾಖಲಿಸಿದ್ದರು.
ಇದನ್ನೂ ಓದಿ: Dhawan And Iyer: ಇಂಗ್ಲೀಷ್ ಹಾಡಿಗೆ ಹೆಜ್ಜೆ ಹಾಕಿದ ಶಿಖರ್ ಧವನ್, ಶ್ರೇಯಸ್ ಅಯ್ಯರ್; ವಿಡಿಯೊ ವೈರಲ್