ಭೋಪಾಲ್: ಮಧ್ಯಪ್ರದೇಶದಲ್ಲಿ (Madhya Pradesh) ನಿವೃತ್ತ ಯೋಧರೊಬ್ಬರು ವೇದಿಕೆ ಮೇಲೆ ತಿರಂಗಾ ಹಿಡಿದು ನೃತ್ಯ ಮಾಡುತ್ತಿರುವಾಗಲೇ ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾರೆ. ಇಂದೋರ್‌ನ ಫೂಟಿ ಖೋಟಿ ಪ್ರದೇಶದಲ್ಲಿ ನಡೆದ ಯೋಗ ಶಿಬಿರದಲ್ಲಿ ನಿವೃತ್ತ ಯೋಧ ದೇಶಭಕ್ತಿ ಗೀತೆಗೆ ನೃತ್ಯ ಮಾಡುತ್ತಿದ್ದರು. ಸೇನೆಯ ಸಮವಸ್ತ್ರ ಧರಿಸಿ, ಕೈಯಲ್ಲಿ ತಿರಂಗಾ ಹಿಡಿದು ಯೋಧ ವೇದಿಕೆ ಮೇಲೆ ಕುಣಿಯುತ್ತಿದ್ದರು. ಇದೇ ವೇಳೆ ಅವರು ಕುಸಿದುಬಿದ್ದು ಮೃತಪಟ್ಟಿದ್ದಾರೆ. ಈ ಮನಕಲಕುವ ವಿಡಿಯೊ ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾರತೀಯ ಸೇನೆಯ ನಿವೃತ್ತ ಯೋಧ, 73 ವರ್ಷದ ಬಲವೀರ್ ಸಿಂಗ್ ಛಬ್ರಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಯೋಗ ಶಿಬಿರದ ಹಿನ್ನೆಲೆಯಲ್ಲಿ ಬಲವೀರ್ ಸಿಂಗ್ ಛಬ್ರಾ ಅವರನ್ನು ಶುಕ್ರವಾರ (ಮೇ 31) ಆಹ್ವಾನಿಸಲಾಗಿತ್ತು. ವಿದ್ಯಾರ್ಥಿಗಳು, ಯುವತಿಯರು ಸೇರಿ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಲವೀರ್ ಸಿಂಗ್ ಛಬ್ರಾ ಅವರು ಉತ್ಸಾಹದಿಂದಲೇ ದೇಶಭಕ್ತಿ ಗೀತೆಗೆ ಪ್ರದರ್ಶನ ನೀಡುತ್ತಿದ್ದರು. ಇದೇ ವೇಳೆ ಅವರು ವೇದಿಕೆ ಮೇಲೆಯೇ ಕುಸಿದುಬಿದ್ದಿದ್ದಾರೆ. ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
A retired army officer had a heart attack during a performance in front of children. People were clapping, thinking he was acting. 😲😲 pic.twitter.com/k7OwJuE5fd
— Prayag (@theprayagtiwari) May 31, 2024
ಬಿದ್ದರೂ ಚಪ್ಪಾಳೆ ತಟ್ಟುತ್ತಿದ್ದ ಜನ
ಬಲವೀರ್ ಸಿಂಗ್ ಛಬ್ರಾ ಅವರು ವೇದಿಕೆ ಮೇಲೆ ಉತ್ಸಾಹದಿಂದಲೇ ದೇಶಭಕ್ತಿ ಗೀತೆಗೆ ಹೆಜ್ಜೆ ಹಾಕುತ್ತಿದ್ದರು. ಯೋಗ ಶಿಬಿರದಲ್ಲಿ ಪಾಲ್ಗೊಂಡವರು ಚಪ್ಪಾಳೆ ಮೂಲಕ ಹುರಿದುಂಬಿಸುತ್ತಿದ್ದರು. ಆದರೆ, ಅಸಹನೀಯ ನೋವಿನಿಂದ ನಿವೃತ್ತ ಯೋಧ ಕೆಳಗೆ ಬಿದ್ದರೂ ಜನ ಚಪ್ಪಾಳೆ ತಟ್ಟುತ್ತಲೇ ಇದ್ದರು. ನೃತ್ಯದ ಭಾಗವಾಗಿಯೇ ಬಲವೀರ್ ಸಿಂಗ್ ಛಬ್ರಾ ಅವರು ಕೆಳಗೆ ಬಿದ್ದಿದ್ದಾರೆ ಎಂಬುದಾಗಿ ತಪ್ಪು ತಿಳಿದ ಜನ ಚಪ್ಪಾಳೆ ತಟ್ಟುವುದನ್ನು ಮುಂದುವರಿಸಿದ್ದರು. ಇದಾದ ಕೆಲ ನಿಮಿಷಗಳ ಬಳಿಕವೇ ಅಲ್ಲಿದ್ದವರಿಗೆ ನಿವೃತ್ತ ಯೋಧ ನೋವು ಸಹಿಸದೆ ಕುಸಿದಿದ್ದಾರೆ ಎಂಬುದು ಗೊತ್ತಾಗಿದೆ.
“73ನೇ ವಯಸ್ಸಿನಲ್ಲೂ ಬಲವೀರ್ ಸಿಂಗ್ ಛಬ್ರಾ ಅವರು ನಮ್ಮ ಕರೆ ಓಗೊಟ್ಟು, ಉತ್ಸಾಹದಿಂದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ದೇಶಭಕ್ತಿ ಗೀತೆಗೆ ಅವರು ವೇದಿಕೆ ಮೇಲೆ ಹೆಜ್ಜೆ ಹಾಕುತ್ತಿದ್ದರು. ಇದೇ ವೇಳೆ ಅವರು ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು” ಎಂದು ಶಿಬಿರದ ಆಯೋಜಕ ರಾಜ್‌ಕುಮಾರ್ ಜೈನ್ ಮಾಹಿತಿ ನೀಡಿದ್ದಾರೆ.
ನೇತೃದಾನ ಮಾಡಿ ಸಾರ್ಥಕತೆ ಮೆರೆದ ನಿವೃತ್ತ ಯೋಧ
ಬಲವೀರ್ ಸಿಂಗ್ ಛಬ್ರಾ ಅವರ ಪುತ್ರ ಜಗಜೀತ್ ಸಿಂಗ್ ಅವರು ತಂದೆಯ ಸಾವಿನ ಕುರಿತು ಪ್ರತಿಕ್ರಿಯಿಸಿದ್ದಾರೆ. “ಹಲವು ವರ್ಷಗಳಿಂದ ನನ್ನ ತಂದೆಯು ದೇಶಭಕ್ತಿ ಗೀತೆಗೆ ಹೆಜ್ಜೆ ಹಾಕುತ್ತಿದ್ದರು. ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಸಾವಿನ ಬಳಿಕವೂ ಅವರು ನೇತ್ರದಾನ ಹಾಗೂ ಚರ್ಮದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ” ಎಂಬುದಾಗಿ ಮಾಹಿತಿ ನೀಡಿದ್ದಾರೆ.