ನವದೆಹಲಿ: ಭಾರತದ ಸನ್ನಿವೇಶಕ್ಕೆ ತಕ್ಕಂತೆ ದೇಶದ ಇತಿಹಾಸವನ್ನು ಮತ್ತೆ ರಚಿಸಿ ಎಂದು ಇತಿಹಾಸಕಾರರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕರೆ ನೀಡಿದ್ದಾರೆ. “ದೇಶದ ಇತಿಹಾಸ ಮತ್ತೆ ರಚಿಸುವವರಿಗೆ ಕೇಂದ್ರ ಸರ್ಕಾರದ ಸಹಕಾರ ಇರಲಿದೆ” ಎಂದೂ ಅಭಯ ನೀಡಿದ್ದಾರೆ.
ದೆಹಲಿಯಲ್ಲಿ ನಡೆದ ʼಲಚಿತ್ ದಿವಸʼ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಾನೂ ಒಬ್ಬ ಇತಿಹಾಸದ ವಿದ್ಯಾರ್ಥಿ ಆಗಿದ್ದೆ. ದೇಶದ ಇತಿಹಾಸವನ್ನು ಭಾರತದ ಸನ್ನಿವೇಶಕ್ಕೆ ತಕ್ಕಂತೆ ರಚಿಸಿಲ್ಲ. ಇಲ್ಲಿರುವ ಇತಿಹಾಸದ ವಿದ್ಯಾರ್ಥಿಗಳು, ಪ್ರೊಫೆಸರ್‌ಗಳಿಗೆ ನಾನು ಮನವಿ ಮಾಡುತ್ತೇನೆ. ದೇಶವನ್ನು 150 ವರ್ಷಗಳವರೆಗೆ ಆಳಿದ 30 ರಾಜವಂಶಗಳು ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ 300 ಹೋರಾಟಗಾರರ ಜೀವನದ ಕುರಿತು ಸಂಶೋಧನೆ ನಡೆಸಿ. ಇದಕ್ಕೆ ಕೇಂದ್ರ ಸರ್ಕಾರದ ನೆರವಿದೆ” ಎಂದು ತಿಳಿಸಿದರು.
“ದೇಶದ ಭವ್ಯ ಇತಿಹಾಸದ ನಿರೂಪಣೆಯಲ್ಲಿ ಕೊರತೆ ಇದೆ. ಯಾವುದೇ ಅಪಸವ್ಯಗಳು ಇರದ ಇತಿಹಾಸ ರಚನೆಯ ಅವಶ್ಯಕತೆ ಇದೆ. ಹಾಗಾಗಿ, ಇತಿಹಾಸ ತಜ್ಞರು ಸಂಶೋಧನೆಯಲ್ಲಿ ತೊಡಗಬೇಕು. ನಿಜವಾದ ಹಾಗೂ ನಿಖರವಾದ ಇತಿಹಾಸವನ್ನು ರಚಿಸುವ ಮೂಲಕ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಬೇಕು” ಎಂದು ಕರೆ ನೀಡಿದರು.
ಇದನ್ನೂ ಓದಿ | Amit Shah | ಉಗ್ರ ಪೋಷಣೆ ರಾಷ್ಟ್ರಗಳಿಗೆ ಆರ್ಥಿಕ ನಿರ್ಬಂಧ ಅಗತ್ಯ, ಪಾಕ್‌ಗೆ ಅಮಿತ್ ಶಾ ತಪರಾಕಿ