ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿರುವ ಜಲ್ದ್ಪರ ರಾಷ್ಟ್ರೀಯ ಉದ್ಯಾನವನ(Jaldapara National Park)ದಲ್ಲಿ ಪ್ರವಾಸಿಗರ ಸಫಾರಿ ಜೀಪ್ನ್ನು ಎರಡು ಘೇಂಡಾಮೃಗಗಳು ಕ್ರೋಧದಿಂದ ಅಟ್ಟಿಸಿಕೊಂಡು ಬಂದ ಪರಿಣಾಮ ಏಳು ಮಂದಿ ಗಾಯಗೊಂಡಿದ್ದಾರೆ. ಎರಡು ಸಫಾರಿ ಜೀಪ್ಗಳು ಒಂದರ ಬೆನ್ನಿಗೆ ಒಂದು ನಿಂತಿದ್ದವು. ಪ್ರವಾಸಿಗರು ಕ್ಯಾಮೆರಾದಲ್ಲಿ ಫೋಟೋ/ವಿಡಿಯೊ ಚಿತ್ರೀಕರಣ ಮಾಡುತ್ತಿದ್ದರು. ಆಗ ಜೀಪ್ನತ್ತ ಎರಡು ಘೇಂಡಾಮೃಗಗಳು ವೇಗವಾಗಿ ಓಡಿ ಬಂದಿವೆ. ಚಾಲಕ ಹಿಮ್ಮುಖವಾಗಿ, ವೇಗವಾಗಿ ಜೀಪ್ ಚಲಾಯಿಸಿಕೊಂಡು ಹೋಗಿದ್ದಾನೆ. ಆದರೆ ವಾಹನ ಆಯತಪ್ಪಿದ್ದಷ್ಟೇ ಅಲ್ಲ, ಆ ಘೇಂಡಾಮೃಗಗಳು ಜೀಪ್ಗೆ ಗುದ್ದಿವೆ. ಇದರಿಂದ ಜೀಪ್ ರಸ್ತೆ ಪಕ್ಕಕ್ಕೆ ಬಿದ್ದಿರುವುದನ್ನು ವಿಡಿಯೊದಲ್ಲಿ ನೋಡಬಹುದು.
ಜೀಪ್ಗಳು ಹೋಗುತ್ತಿರುವ ರಸ್ತೆಯ ಪಕ್ಕದಲ್ಲಿ, ಪೊದೆಗಳ ನಡುವೆ ಎರಡು ಘೇಂಡಾಮೃಗಗಳು ಕಾದಾಡಿಕೊಳ್ಳುತ್ತಿದ್ದವು. ಅದನ್ನು ನೋಡಿದ ಚಾಲಕ ಗಾಡಿ ನಿಲ್ಲಿಸಿದ್ದಾನೆ. ಪ್ರವಾಸಿಗರು ಆ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಯತ್ನಿಸಿದ್ದಾರೆ. ಅದನ್ನು ನೋಡಿದ ಘೇಂಡಾಮೃಗಗಳು ಕ್ರೋಧದಿಂದ ಇವರತ್ತ ಮುನ್ನುಗ್ಗಿವೆ ಎಂದು ಘಟನೆಯ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಜೀಪ್ ಬಿದ್ದ ಪರಿಣಾಮ ಅದರಲ್ಲಿದ್ದವರೆಲ್ಲ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಅವರನ್ನೆಲ್ಲ ಮದರಿಹಟ್ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅದರಲ್ಲೂ ಇಬ್ಬರ ಪರಿಸ್ಥಿತಿ ತುಸು ಗಂಭೀರವಾಗಿಯೇ ಇದ್ದು, ಅವರನ್ನು ಅಲಿಪುರದೌರ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಹಿಂದೆಂದೂ ಇಲ್ಲಿ ಘೇಂಡಾಮೃಗಗಳು ದಾಳಿ ಮಾಡಿದ ಘಟನೆ ನಡೆದಿರಲಿಲ್ಲ ಎಂದು ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ವಾಹನ ಚಾಲಕನ ಹೆಸರು ಕಮಲ್ ಘಾಜಿ ಎಂದಾಗಿದ್ದು, ಅವರಿಗೂ ಚಿಕ್ಕಪುಟ್ಟ ಗಾಯಗಳಾಗಿವೆ. ‘ಅನೇಕ ವರ್ಷಗಳಿಂದ ನಾನು ಇದೇ ಕೆಲಸ ಮಾಡುತ್ತಿದ್ದೇನೆ. ಆದರೆ ಇವತ್ತಿನವರೆಗೆ ಇಂಥ ಸನ್ನಿವೇಶ ಎದುರಾಗಿರಲಿಲ್ಲ’ ಎಂದಿದ್ದಾರೆ.