ಮುಂಬೈ: ಮಹಾರಾಷ್ಟ್ರದ (Maharashtra) ಮಟ್ಟಿಗೆ ಇಂಡಿಯಾ ಕೂಟದ (India bloc) ಪ್ರಮುಖ ಪಕ್ಷಗಳಾಗಿರುವ ಕಾಂಗ್ರೆಸ್(Congress), ಶಿವಸೇನೆ(ಉದ್ಧವ್ ಠಾಕ್ರೆ, Shiva Sena UBT) ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ಪಾರ್ಟಿ(ncp) ನಡುವೆ ಎಲ್ಲವೂ ಸರಿ ಇಲ್ಲ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjun Kharge) ಅವರನ್ನು ಶುಕ್ರವಾರ ಕ್ಷೇತ್ರ ಹಂಚಿಕೆ (Seat Sharing) ಸಂಬಂಧ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು ಸಭೆ ನಡೆಸಲು ಮುಂದಾಗಿರುವ ಬೆನ್ನಲ್ಲೇ ಉದ್ಧವ್ ಬಣದ ಶಿವಸೇನೆ ಕ್ಯಾತೆ ತೆಗೆದಿದೆ.
ಶಿವಸೇನೆ ಉದ್ಭವ್ ಬಣದ ನಾಯಕ ಸಂಜಯ್ ರಾವತ್ ಅವರು 2019ರಲ್ಲಿ ಸ್ಪರ್ಧಿಸಿರುವ ರೀತಿಯಲ್ಲೇ 23 ಸ್ಥಾನಗಳಲ್ಲಿ ಸ್ಪರ್ಧಿಸಲಾಗುವುದು ಎಂದು ಹೇಳುವ ಮೂಲಕ ಕ್ಯಾತೆಗೆ ನಾಂದಿ ಹಾಡಿದ್ದಾರೆ. 2019ರಲ್ಲಿ ಶಿವಸೇನೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಆದರೆ, ಈಗ ಅದು ಕಾಂಗ್ರೆಸ್ ಮತ್ತು ಎನ್‌ಸಿಪಿ ಜತೆಗೂಡಿದೆ. ರಾವತ್ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಈ ಕುರಿತು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಆ ಬಳಿಕ, ಖರ್ಗೆ ಅವರು ಸೀಟು ಹಂಚಿಕೆ ಸೂತ್ರವನ್ನು ಮುಂದಿಡಲಿದ್ದಾರೆಂದು ತಿಳಿದು ಬಂದಿದೆ.
ಈ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿರುವ ಮಾಜಿ ಸಂಸದ ಹಾಗೂ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಅವರು, ಶಿವಸೇನೆ ಮತ್ತು ಎನ್‌ಸಿಪಿ ಜತೆಗೆ ಆಗಿರುವ ಬೆಳವಣಿಗೆಗಳು ನಿಜವಾಗಲೂ ದುರದೃಷ್ಟಕರ. ಎರಡೂ ಪಕ್ಷಗಳು ಇಬ್ಭಾಗವಾಗಿವೆ. ಹಾಗಾಗಿ, ಅವರು ಎಷ್ಟು ಮತಗಳನ್ನು ಪಡೆದುಕೊಳ್ಳಲಿದ್ದಾರೆಂದು ಹೇಳಲು ಅಥವಾ ಊಹೆ ಮಾಡಲು ಸಾಧ್ಯವಿಲ್ಲ. ಇಂಥ ಪರಿಸ್ಥಿತಿಯಲ್ಲಿ ಯಾರಾದರೂ 23 ಕ್ಷೇತ್ರಗಳನ್ನು ಕೇಳಿದರೆ ಅದು ಸರಿಯಾದ ಮಾತುಗಳಲ್ಲ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಈ ಟೀಕೆಗೆ ಪ್ರತಿಕ್ರಿಯಿಸಿರುವ ಸಂಜಯ್ ರಾವತ್ ಅವರು, ಶಿವಸೇನೆ ಇಬ್ಭಾಗವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಾಂಗ್ರೆಸ್ ಪಕ್ಷವು ನಿರ್ಧರಿಸುವುದು ಬೇಡ. ಸಂಸದರು ಮತ್ತು ಶಾಸಕರನ್ನು ಜನರು ಆಯ್ಕೆ ಮಾಡುತ್ತಾರೆ. ನಾಯಕರು ತಮ್ಮ ಪಕ್ಷವನ್ನು ಬದಲಿಸಬಹುದು. ಆದರೆ, ಮತದಾರರು ಪಕ್ಷಕ್ಕೆ ನಿಷ್ಠರಾಗಿರುತ್ತಾರೆ. ಕಳೆದ ಲೋಕಸಭೆಯಲ್ಲಿ ಶಿವಸೇನೆ 23 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು ಮತ್ತು ಈ ಪೈಕ 18 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಳೆದ ಬಾರಿ ಗೆದ್ದ ಕೆಲವರು ತಮ್ಮ ನಿಷ್ಠೆಯನ್ನ ಬದಲಿಸಿದ್ದಾರೆ. ಆದರೆ, ಪಕ್ಷದ ಇಬ್ಭಾಗವನ್ನು ಮಾನದಂಡವಾಗಿಟ್ಟುಕೊಂಡು ಸೀಟು ಹಂಚಿಕೆಯನ್ನು ನಿರ್ಧರಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ದಿಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜತೆಗೆ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರಾದ ವರ್ಷಾ ಗಾಯಕ್ವಾಡ್ ಸೇರಿದಂತೆ ಅನೇಕರು ಚರ್ಚೆ ನಡೆಸಲಿದ್ದಾರೆ. ಮಹಾರಾಷ್ಟ್ರದ ಎಲ್ಲ 48 ಸ್ಥಾನಗಳು ಮತ್ತು ಚುನಾವಣೆಗೆ ಕಾಂಗ್ರೆಸ್‌ನ ಸಿದ್ಧತೆಯ ಬಗ್ಗೆ ಖರ್ಗೆ ಅವರು ಮಹಾರಾಷ್ಟ್ರ ನಾಯಕರಿಗೆ ತಿಳಿಸಲಿದ್ದಾರೆ. ಮೈತ್ರಿಕೂಟದ ಪಾಲುದಾರರಿಂದ ಪಕ್ಷಕ್ಕೆ ಲಾಭವಿರುವಲ್ಲಿ ಯಾವ ಹೊಸ ಸ್ಥಾನಗಳನ್ನು ಕೇಳಬಹುದು ಎಂಬುದರ ಕುರಿತು ನಾಯಕರು ಕಾಂಗ್ರೆಸ್ ಮುಖ್ಯಸ್ಥರಿಗೆ ಪ್ರಸ್ತುತಿ ನೀಡುವ ಸಾಧ್ಯತೆಯಿದೆ. ಕಳೆದ ಎರಡು ಚುನಾವಣೆಗಳಲ್ಲಿ ಮುಂಬೈನಲ್ಲಿ ಕಾಂಗ್ರೆಸ್ ಸಾಧನೆ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ: INDIA Bloc Protest: ಬಿಜೆಪಿ ಸಂಸದರು ಹೆದರಿ ಓಡಿ ಹೋಗಿದ್ದರು! ರಾಹುಲ್ ಗಾಂಧಿ ಲೇವಡಿ